ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‍ರವರನ್ನು ಗೆಲ್ಲಿಸಿ : ಮಯೂರ್ ಜೈಕುಮಾರ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 17 : ವಿಧಾನಪರಿಷತ್‍ನಲ್ಲಿ ಬಹುಮತ ಬೇಕಾಗಿರುವುದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‍ರವರನ್ನು ಗೆಲ್ಲಿಸುವಂತೆ ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜೈಕುಮಾರ್ ಪದಾಧಿಕಾರಿಗಳಿಗೆ ಕರೆ ನೀಡಿದರು.
ಮುಂದಿನ ತಿಂಗಳು ನಡೆಯಲಿರುವ ಆಗ್ನೇಯ ಶಿಕ್ಷಕರ ಪದವೀಧರ ಕ್ಷೇತ್ರ ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೆ ಕಾರಣಕ್ಕೂ ನಮ್ಮ ಅಭ್ಯರ್ಥಿ ಸೋಲಬಾರದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳಿಗೆ ಖಡಕ್ ಎಚ್ಚರಿಕೆ ನೀಡಿರುವುದರಿಂದ ಈ ಚುನಾವಣೆಯನ್ನು ನಿರ್ಲಕ್ಷಿಸಬಾರದು. ಮತದಾನಕ್ಕೆ ಸಮಯ ತುಂಬಾ ಕಡಿಮೆಯಿರುವುದರಿಂದ ಈಗಿನಿಂದಲೇ ಶಿಕ್ಷಕರುಗಳ ಬಳಿ ಹೋಗಿ ಅಭ್ಯರ್ಥಿ ಪರ ಮತ ಯಾಚಿಸುವಂತೆ ಮನವಿ ಮಾಡಿದರು.
ರಾಜ್ಯದ ಹದಿಮೂರು ಜಿಲ್ಲೆಗಳಿಗೆ ನಾನು ಉಸ್ತುವಾರಿಯಾಗಿದ್ದೇನೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಕ್ಷ ಸಂಘಟಿಸುವಲ್ಲಿ ನಂ.ಒನ್ ಆಗಿದ್ದಾರೆ. ಮೊದಲು ವಿಧಾನಪರಿಷತ್ ಚುನಾವಣೆಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಆ ರೀತಿ ಮಾಡುವಂತಿಲ್ಲ. ವಿಧಾನಸಭೆಯಲ್ಲಿ ಪಾಸ್ ಮಾಡುವ ಬಿಲ್‍ಗಳಿಗೆ ಒಪ್ಪಿಗೆ ಸಿಗಬೇಕಾದರೆ ವಿಧಾನಪರಿಷತ್‍ನಲ್ಲಿ ಬಲ ಬೇಕು. ತಳಮಟ್ಟದಿಂದ ಎಲ್ಲರೂ ಶ್ರಮ ಪಟ್ಟರೆ ಅಭ್ಯರ್ಥಿ ಗೆಲುವು ಕಷ್ಟವೇನಲ್ಲ. ಜಿಲ್ಲಾ ಮಟ್ಟದಲ್ಲಿ ವಾರ್ ರೂಂ ತೆರೆದು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳ ಜೊತೆ ಚರ್ಚಿಸಿ ಪ್ರತಿನಿತ್ಯವು ನನಗೆ ವರದಿ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಯೂರ್ ಜೈಕುಮಾರ್ ಸೂಚಿಸಿದರು.
ಕೆ.ಪಿ.ಸಿ.ಸಿ. ಉಸ್ತುವಾರಿ ಮುರಳಿಧರ ಹಾಲಪ್ಪ ಮಾತನಾಡಿ ಸೋಮಾರಿತನ, ಡಬ್ಬಲ್ ಗೇಮ್, ಒಳ ಒಪ್ಪಂದ ಇವೆಲ್ಲವನ್ನು ಈ ಚುನಾವಣೆಯಲ್ಲಿ ಬದಿಗಿರಿಸಿ ಬದ್ದತೆಯಿಂದ ಚುನಾವಣೆಯನ್ನು ಎದುರಿಸಬೇಕಿದೆ. ಪಾರ್ಲಿಮೆಂಟ್ ಹಾಗೂ ಲೋಕಸಭೆ ಚುನಾವಣೆಯನ್ನು ಹೇಗೆ ಸಮರ್ಥವಾಗಿ ನಿಭಾಯಿಸಿದೆವೋ ಅದಕ್ಕಿಂತಲೂ ಹೆಚ್ಚು ಮುತುವರ್ಜಿ ವಿಧಾನಪರಿಷತ್ ಚುನಾವಣೆಯಲ್ಲಿ ವಹಿಸಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‍ರವರಿಗೆ ಶೇ.80 ಕ್ಕಿಂತ ಹೆಚ್ಚಿನ ಮತಗಳು ಸಿಗಬೇಕು. ಪದವೀಧರ ಶಿಕ್ಷಕರುಗಳನ್ನು ಸಂಪರ್ಕಿಸಿ ಮತ ಕೇಳಿ. ವಿಧಾನಸಭೆಯಲ್ಲಿ ಯಾವುದೇ ಬಿಲ್ ಪಾಸ್ ಆಗಬೇಕೆಂದರೆ ವಿಧಾನಪರಿಷತ್‍ನಲ್ಲಿ ಬಹುಮತವಿರಬೇಕು. ಹಾಗಾಗಿ ಈ ಚುನಾವಣೆಗೆ ಅತ್ಯಂತ ಮಹತ್ವವಿದೆ ಎಂದರು.
ಕಾಂಗ್ರೆಸ್‍ಗೆ ತ್ಯಾಗ ಬಲಿದಾನಗಳ ಇತಿಹಾಸವಿದೆ. ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಇವರುಗಳು ಸ್ವಾತಂತ್ರಕ್ಕಾಗಿ ಹೋರಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಇಂತಹ ನಾಯಕರುಗಳನ್ನು ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡುತ್ತ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಪದಾಧಿಕಾರಿಗಳು, ಕಾರ್ಯಕರ್ತರು, ಶಾಸಕರು, ಮುಖಂಡರುಗಳು ವಿಧಾನಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‍ರವರನ್ನು ಗೆಲ್ಲಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ, ವಿಧಾನಸಭೆ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೇಗೆ ಉತ್ಸಾಹದಿಂದ ಅಭ್ಯರ್ಥಿಗಳ ಪರ ಕೆಲಸ ಮಾಡಿದಿರೋ ಅದೇ ರೀತಿ ವಿಧಾನಪರಿಷತ್ ಚುನಾವಣೆಯಲ್ಲಿಯೂ ಲವಲವಿಕೆಯಿಂದ ಗೆಲುವಿಗೆ ಶ್ರಮಿಸುವಂತೆ ಹೇಳಿದರು.
ಶಿಕ್ಷಕರುಗಳಿಗೆ ಹಿಂದಿನಿಂದಲೂ ನಮ್ಮ ಪಕ್ಷ ಎಲ್ಲಾ ರೀತಿಯ ಸಹಕಾರ ಕೊಡುತ್ತ ಬರುತ್ತಿದೆ. ವಿಧಾನಸಭೆಯಲ್ಲಿ ಶಾಸಕರು ಯಾವುದೇ ಬಿಲ್ ಪಾಸ್ ಮಾಡಿದರೂ ವಿಧಾನಪರಿಷತ್‍ನಲ್ಲಿ ಒಪ್ಪಿಗೆ ಸಿಗಬೇಕಾದರೆ ಬಹುಮತವಿರಬೇಕು. ಅದಕ್ಕಾಗಿ ಈ ಚುನಾವಣೆ ಅತ್ಯಂತ ಮಹತ್ವದ್ದು ಎಂದು ನುಡಿದರು.
ಮಾಜಿ ಶಾಸಕಿ ಶೀಮತಿ ಪೂರ್ಣಿಮ ಶ್ರೀನಿವಾಸ್ ಮಾತನಾಡುತ್ತ ಎಂ.ಎಲ್.ಸಿ. ಚುನಾವಣೆ ಬೇರೆ ಚುನಾವಣೆಗಳಿಗಿಂತ ವಿಭಿನ್ನವಾದುದು. ನೊಂದಣಿಯಾದ ಶಿಕ್ಷಕರುಗಳು ಮತದಾನದ ಹಕ್ಕು ಪಡೆದಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 4620 ಮತಗಳಿವೆ. ಜಿಲ್ಲೆಯ ಐದು ಶಾಸಕರುಗಳು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಹೆಚ್ಚು ಮತಗಳು ಬಿದ್ದಾಗ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಗೆಲುವು ಸುಲಭವಾಗುತ್ತದೆ ಎಂದು ತಿಳಿಸಿದರು.
ಮಾಜಿ ಮಂತ್ರಿ ಹೆಚ್.ಆಂಜನೇಯ ಮಾತನಾಡಿ ಸಮರ್ಥ ಅಭ್ಯರ್ಥಿಯನ್ನು ಪಕ್ಷ ಚುನಾವಣೆಗಿಳಿಸಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಅಭ್ಯರ್ಥಿ ಪರ ಮತ ಕೇಳಿ. ಶಿಕ್ಷಕರುಗಳಿಗೆ ಹೆಚ್ಚು ಸೌಲಭ್ಯಗಳನ್ನು ಕೊಟ್ಟಿರುವುದು ನಮ್ಮ ಪಕ್ಷ ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸಿದ್ದೇವೆ. ಹಾಗಾಗಿ ಈ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡುತ್ತ ಐದು ಜಿಲ್ಲೆಗಳಿಂದ 11222 ಹಳ್ಳಿಗಳಿವೆ. ಹಿಂದಿನ ಸಮಸ್ಯೆಗಳೆ ಬೇರೆ, ಈಗಿರುವ ಸಮಸ್ಯೆಗಳೆ ಬೇರೆ. ವೇತನದಲ್ಲಿ ತಾರತಮ್ಯ, ಬಡ್ತಿ, ಹೀಗೆ ಹತ್ತು ಹಲವಾರು ಬೇಡಿಕೆಗಳು ಈಡೇರಬೇಕಿದೆ.
ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ಇವರುಗಳ ಮೈತ್ರಿ ಸರ್ಕಾರವಿದ್ದಾಗ ಎನ್.ಪಿ.ಎಸ್. ಜಾರಿಗೆ ಬಂತು. ಖಾಸಗಿ, ಅನುದಾನಿತ ಸಂಸ್ಥೆ, ಸರ್ಕಾರಿ ಶಾಲೆಗಳು, ಪಿ.ಯು.ಸಿ. ಪದವಿ, ಸ್ನಾತಕೋತ್ತರ, ಡಿಪ್ಲಮೋ, ಐ.ಟಿ.ಐ. ಕಾಲೇಜುಗಳಿಗೆ ಹೋಗಿ ನನ್ನ ಪರ ಮತ ಕೇಳಿ ಎಂದು ಪದಾಧಿಕಾರಿಗಳಲ್ಲಿ ವಿನಂತಿಸಿದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ನೇರ್ಲಗುಂಟೆ ರಾಮಪ್ಪ, ಹುಸೇನ್ ಇವರುಗಳು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೆ.ಪಿ.ಸಿ.ಸಿ. ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಡಿ.ಬಸವರಾಜ್, ದ್ರಾಕ್ಷಾ ರಸ ಮಂಡಳಿ ಚೇರ್ಮನ್ ಬಿ.ಯೋಗೇಶ್‍ಬಾಬು, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಜಿ.ಎಸ್.ಕುಮಾರ್‍ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ರಘು, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್‍ನವಾಜ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಭಾಗ್ಯಮ್ಮ, ರೇಣುಕಶಿವು, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೋಹಿದ್ದೀನ್, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.