ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ : 2027 ರ ಜನವರಿಯೊಳಗೆ ಲೋಕಾರ್ಪಣೆ : ಕೇಂದ್ರ ಸಚಿವ ವಿ.ಸೋಮಣ್ಣ
ಚಿತ್ರದುರ್ಗ. ಅ.02 : ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆ ಹಾಗೂ ಪಾವಗಡ-ರಾಯದುರ್ಗ ನೂತನ ರೈಲ್ವೆ ಮಾರ್ಗ ಯೋಜನೆ 2027ರ ಜನವರಿಯೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಆಶ್ವಾಸನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ತುಮಕೂರು-ಚಿತ್ರದುರ್ಗ-ದಾವಣಗೆರೆ ಹಾಗೂ ರಾಯದುರ್ಗ-ಪಾವಗಡ ನೂತನ ರೈಲ್ವೆ ಮಾರ್ಗಗಳ ಭೂಸ್ವಾಧೀನ ಪ್ರಕ್ರಿಯೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರೂ.2140 ಕೋಟಿ ವೆಚ್ಚದಲ್ಲಿ ನೂತನ ರೈಲ್ವೆ ಮಾರ್ಗಗಳ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಈ ಮೊದಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶೇ.50-50ರ ಅನುಪಾತದಲ್ಲಿ ಯೋಜನೆ ಜಾರಿಗೊಳಿಸುವ ತೀರ್ಮಾನಿಸಲಾಗಿತ್ತು. ಇದನ್ನು ಬದಲಿಸಿ ರಾಜ್ಯ ಸರ್ಕಾರ ಭೂ ಸ್ವಾಧೀನ ವೆಚ್ಚವನ್ನು ಭರಿಸಿ, ಯೋಜನೆಗೆ ಭೂಮಿ ಹಸ್ತಾಂತರಿಸಿದರೆ ರೈಲ್ವೆ ಇಲಾಖೆಯಿಂದಲೇ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು. ಎರಡು ನೂತನ ರೈಲ್ವೆ ಮಾರ್ಗಗಳಿಗೆ 2409 ಎಕರೆ ಭೂಮಿ ಅವಶ್ಯಕತೆ ಇದ್ದು, ಇದರಲ್ಲಿ ಕೇವಲ 280 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ರೈಲ್ವೆ ಮಾರ್ಗಕ್ಕೆ ಈಗಾಗಲೆ 1100 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಧಾನಮಂತ್ರಿಗಳ ಸೂಚನೆಯಂತೆ 2027ರ ಜನವರಿ ವೇಳೆಗೆ ನೂತನ ರೈಲ್ವೆ ಮಾರ್ಗಗಳ ನಿರ್ಮಾಣ ಮಾಡಿ ಪ್ರಧಾನಮಂತ್ರಿ ಹಾಗೂ ರೈಲ್ವೆ ಖಾತೆ ಸಚಿವರಿಂದ ಲೋಕಾರ್ಪಣೆ ಮಾಡುವುದಾಗಿ ಸಚಿವ ವಿ.ಸೋಮಣ್ಣ ತಿಳಿಸಿದರು.
ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು ತರಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ರೈಲ್ವೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಕವಚ್” ರಕ್ಷಣಾ ವ್ಯವಸ್ಥೆಯನ್ನು ಪ್ರತಿ ರೈಲಿನಲ್ಲಿಯೂ ಅಳವಡಿಸಲು ಚಿಂತನೆ ನಡೆಸಲಾಗಿದೆ. ಕವಚ್ ವ್ಯವಸ್ಥೆಯು ವಿಮಾನದ ಬ್ಲಾಕ್‍ಬಾಕ್ಸ್ ಮಾದರಿಯಲ್ಲಿ ರೈಲಿನ ಎಲ್ಲ ಚಲನವಲನಗಳನ್ನು ಸಂಗ್ರಹಿಸಲಿದೆ. ಇದರಿಂದ ಅಪಘಾತಗಳು ಉಂಟಾದ ಸಂದರ್ಭದಲ್ಲಿ ತಾಂತ್ರಿಕ ಲೋಪದೋಷಗಳನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ದೇಶದ 24 ರಾಜ್ಯಗಳ 303 ಜಿಲ್ಲೆಗಳಲ್ಲಿ 103 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ರಾಜ್ಯದಲ್ಲಿ 10 ವಂದೇ ಭಾರತ್ ಕಾರ್ಯಾಚರಣೆ ನಡೆಸುತ್ತಿವೆ. ಕೇವಲ ಮೂರು ವರ್ಷಗಳಲ್ಲಿ ಈ ಸಾಧನೆ ಮಾಡಲಾಗಿದೆ. ರೈಲು ಸಂಚಾರದ ವೇಗ ಹೆಚ್ಚಳಕ್ಕೆ ಕ್ರಮಕೈಗೊಂಡಿದ್ದು, ಗಂಟೆಗೆ ಗರಿಷ್ಟ 160 ಕಿ.ಮೀ ವೇಗದ ಮಿತಿಯನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ 49 ಸಾವಿರ ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯ ಮಾಡಲಾಗಿದೆ. ಶೇ.27 ರಷ್ಟು ಇದ್ದ ರೈಲ್ವೆ ಮಾರ್ಗಗಳ ವಿದ್ಯುದೀಕರಣವನ್ನು ಶೇ.98ರಷ್ಟು ಪ್ರಗತಿ ಸಾಧಿಸಲಾಗಿದೆ. ದೇಶದ ಎಲ್ಲ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳನ್ನು ಏರ್‍ಪೋರ್ಟ್‍ಗಳ ಮಾದರಿಯಲ್ಲಿ ನವೀಕರಣಗೊಳಿಸಲಾಗುತ್ತಿದೆ. ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾದುಹೋಗಿರುವ 741 ಕಿ.ಮೀ ಉದ್ದದ ಕೊಂಕಣ ರೈಲ್ವೆಯನ್ನು ರೈಲ್ವೆ ಇಲಾಖೆಯ ನೇರ ಆಡಳಿತಕ್ಕೆ ಒಳಪಡಿಸಿ, ಹಳಿಗಳ ಡಬ್ಲಿಂಗ್ ಮಾಡುವ ಕಾರ್ಯಕ್ಕೆ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಒಲವು ತೋರಿದಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ಬರುವ ಜನವರಿಯಲ್ಲಿ ಕುಂಭಮೇಳ ಜರುಗಲಿದ್ದು, ಸುಮಾರು 40 ಕೋಟಿಗೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆಯಿಂದ 600 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗುವುದು. ಪ್ರಯಾಗ್ ರಾಜ್‍ಗೆ ತೆರಳುವ ಭಕ್ತರಿಗೆ ಏಕರೂಪದ ಟಿಕೆಟ್ ವ್ಯವಸ್ಥೆ ಮಾಡುವ ಚಿಂತನೆ ನಡೆಸಲಾಗಿದ್ದು, ಟಿಕೆಟ್ ಪಡೆದವರು ಯಾವುದೇ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ ಎಂದರು.
ಅತೀ ಕಡಿಮೆ ಪ್ರಯಾಣದರದಲ್ಲಿ ಬಡವರು, ಸಣ್ಣ ಪುಟ್ಟ ವ್ಯಾಪಾರಿಗಳ ಅನುಕೂಲಕ್ಕಾಗಿ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ದೃಷ್ಠಿಯಿಂದ ಡೆಮೋ ರೈಲುಗಳನ್ನು ಓಡಿಸಲಾಗುತ್ತಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಡೆಮೋ ರೈಲುಗಳನ್ನು ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆಯಲ್ಲಿ ಪಾರದರ್ಶಕತೆ ತರಲಾಗಿದ್ದು, 14 ಲಕ್ಷ ಕರ್ತವ್ಯ ನಿರತ ನೌಕರರಿಗೆ ಹಾಗೂ 15 ಲಕ್ಷ ನಿವೃತ್ತ ಪಿಂಚಣಿದಾರರಿಗೆ ನಿಗದಿತ ಸಮಯದಲ್ಲಿ ಎಲ್ಲ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರೈಲ್ವೆ ಇಲಾಖೆಯಿಂದ ನಿವೃತ್ತರಾಗುವ ನೌಕರರಿಗೆ ನಿವೃತ್ತ ದಿನದಂದೇ ಅವರಿಗೆ ಸಲ್ಲಬೇಕಾದ ಹಣಕಾಸು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಹರ್ ಘರ್ ಜಲ್ ಯೋಜನೆಯಡಿ 8 ಲಕ್ಷ ಕೋಟಿ ವೆಚ್ಚದಲ್ಲಿ ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆದ್ಯತೆ: ಪ್ರಸ್ತುತ ನೂತನ ರೈಲ್ವೆ ಮಾರ್ಗಗಳನ್ನು ನಿರ್ಮಾಣ ಮಾಡುವ ವೇಳೆ ರೈಲ್ವೆ ಕೆಳ ಸೇತುವೆ ನಿರ್ಮಾಣದ ಬದಲಿಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಚಿವ ವಿ.ಸೋಮಣ್ಣ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆ ನೀರು ಸಂಗ್ರಹಗೊಂಡು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿರುವ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ರೈಲ್ವೆ ಕೆಳಸೇತುವೆ ದುರಸ್ತಿ ಕಾರ್ಯವನ್ನು ಸಂಸದ ಗೋವಿಂದ ಎಂ ಕಾರಜೋಳ ಅವರ ಸಲಹೆ ಪಡೆದು, ರೈಲ್ವೆ ಕೆಳ ಸೇತುವೆಗಳ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
156 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ : ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 1211 ಎಕರೆ ಭೂ ಸ್ವಾಧೀನಕ್ಕೆ ರೈಲ್ವೆ ಇಲಾಖೆಯಿಂದ ಕೋರಲಾಗಿತ್ತು. ಇದುವರೆಗೆ 1026 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಭರಮಸಾಗರ-ಚಿತ್ರದುರ್ಗ, ಚಿತ್ರದುರ್ಗ-ಹಿರಿಯೂರು ಹಾಗೂ ಹಿರಿಯೂರು-ತಾವರಕೆರೆ ನಡುವೆ ಮೂರು ಹಂತದಲ್ಲಿ ಭೂಸ್ವಾಧೀನ ನಡೆಸಲಾಗುತ್ತಿದೆ. ಒಟ್ಟು 156 ಎಕರೆ ಭೂಸ್ವಾಧೀನದ ಅಂತಿಮ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೇ.90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಹಂತಗಳಲ್ಲಿ ಈಗಾಗಲೇ ರೈಲ್ವೆ ಇಲಾಖೆಯಿಂದ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ಮಾಹಿತಿ ನೀಡಿದರು.
ಬೆಳೆ ಕಟಾವು ನಂತರ ಕಾಮಗಾರಿ ಆರಂಭಿಸಲು ಸೂಚನೆ: ನೇರ ರೈಲ್ವೆ ಮಾರ್ಗ ಯೋಜನೆಯ ದಾವಣಗೆರೆ- ಭರಮಸಾಗರ-ಚಿತ್ರದುರ್ಗ ಮಧ್ಯದಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಇನ್ನೂ 1 ತಿಂಗಳ ಬಳಿಕ ಬೆಳೆ ಕಟಾವು ನಂತರ ರೈಲ್ವೆ ಕಾಮಗಾರಿಗಳನ್ನು ಆರಂಭಿಸುವಂತೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಗೋವಿಂದ ಎಂ ಕಾರಜೋಳ, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನೇರ ರೈಲ್ವೆ ಮಾರ್ಗ ಭೂಸ್ವಾಧೀನಾಧಿಕಾರಿ ವೆಂಕಟೇಶ್, ಬೆಂಗಳೂರು ಕಂಟೋನ್‍ಮೆಂಟ್ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಸಂದೀಪ್ ಶರ್ಮಾ, ಮುಖ್ಯ ಇಂಜಿನಿಯರ್‍ಗಳಾದ ಪ್ರದೀಪ್ ಪುರಿ, ಸಂಜಯ್ ಬನ್ಸಾರಿ, ವಿಭಾಗೀಯ ಇಂಜಿನಿಯರ್ ರಜತ್, ಮೈಸೂರು ರೈಲು ವಿಭಾಗದ ಮಂಡಲ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಕಲಗೊಂಡ, ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.