ರಾಜ್ಯದ ಪಾಲಿಗೆ ಕರಾಳ ಬಜೆಟ್ : ಎಚ್.ಆಂಜನೇಯ
ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ಈ ಹಿಂದೆ ಎಲ್ಲಾ ಬಜೆಟ್ ಗಳಲ್ಲಿ ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗಿ ಬೆರಳೆಣಿಕೆಯಷ್ಟು ಅಂಶಗಳಾದರೂ ಇರುತ್ತಿದ್ದವು. ಆದರೆ, ಈ ಬಾರಿಯ ಬಜೆಟ್ ಕನ್ನಡಿಗರ ಪಾಲಿಗೆ ಕರಾಳ ದಿನವಾಗಿದೆ ಎಂದು ಎಚ್.ಆಂಜನೇಯ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಕಾರಣಕ್ಕೆ ಅಸೂಯೆಗೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳ ಸ್ಥಗಿತಕ್ಕೆ ಮುಂದಾಗಿದೆ. ದ್ವೇಷದ ರಾಜಕಾರಣಕ್ಕೆ ಬಜೆಟ್ ಅನ್ನು ಬಳಸಿಕೊಂಡಿದೆ.
ವಿಧಾನಸಭಾ ಚುನಾವಣೆ ಮುನ್ನ ನಿರ್ಮಲಾ ಸೀತರಾಮನ್ ಮಂಡಿಸಿದ್ದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5300 ಕೋಟಿ ಬಿಡುಗಡೆಗೆ ಯಾವುದೇ ರೀತಿ ಆಶಾಭಾವನೆ ಮೂಡಿಸದಿರುವುದು ವಂಚನೆ ನಡೆ ಆಗಿದೆ. ದಾವಣಗೆರೆ ಟು ತುಮಕೂರು ರೈಲು ಮಾರ್ಗ, ಕೈಗಾರಿಕೆಗಳ ಸ್ಥಾಪನೆ, ಭದ್ರಾ ಮೇಲ್ದಂಡೆ ಯೋಜನೆ ಹೀಗೆ ಅನೇಕ ಯೋಜನೆಗಳಿಗೆ ಈ ಬಜೆಟ್ ಉತ್ತರ ಕೊಡಲಿದೆ ಎಂಬ ನಿರೀಕ್ಷೆ ಹುಸಿ ಆಗಿದೆ. ಒಟ್ಟಾರೆ ರಾಜ್ಯದ ಪಾಲಿಗೆ ಸಣ್ಣ ಬೆಳಕು ಕೂಡ ಆಗದ ಈ ಬಜೆಟ್ ಕತ್ತಲಿಗೆ ದೂಡಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.