Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿಎಸ್‍ಆರ್ ನಿಧಿ: ಜಿಲ್ಲೆಯ ಗಣಿಬಾಧಿತ ಪ್ರದೇಶಾಭಿವೃದ್ಧಿಗೇ ಬಳಕೆಯಾಗಲಿ : ಸಂಸದ ಗೋವಿಂದ ಎಂ ಕಾರಜೋಳ ಸೂಚನೆ

04:07 PM Aug 27, 2024 IST | suddionenews
Advertisement

ಚಿತ್ರದುರ್ಗ. ಆ.27 :  ಜಿಲ್ಲೆಯಲ್ಲಿರುವ ಗಣಿ ಕಂಪನಿಗಳು ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ನೀಡುವ ಜೊತೆಗೆ ಜಿಲ್ಲೆಯಲ್ಲಿನ ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಕೊಡುಗೆ ನೀಡಬೇಕು. ಸಿಎಸ್‍ಆರ್ ನಿಧಿ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿಯೇ ಖರ್ಚಾಗಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.

Advertisement

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗಣಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 7  ಖಾಸಗಿ ಗಣಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಗಣಿ ಕಂಪನಿಗಳ ಸಿ.ಆರ್.ಆರ್ (ಸಾಮಾಜಿಕ ಹೊಣೆಗಾರಿಕೆ) ನಿಧಿ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಬಳಕೆಯಾಗಬೇಕು. ಆದರೆ ಇದು ಆಗುತ್ತಿಲ್ಲ. ಗಣಿ ಕಂಪನಿಗಳು ತಮ್ಮ ವ್ಯಾಪ್ತಿಯ ಇತರೆ ರಾಜ್ಯಗಳಲ್ಲಿ ಸಿಎಸ್‍ಆರ್ ಹಣ ಖರ್ಚು ಮಾಡಿ, ಇಲ್ಲಿನ ಲೆಕ್ಕಕ್ಕೆ ತೋರಿಸುತ್ತಿರುವುದು ಹಾಗೂ ಕಂಪನಿಗಳೇ ಎನ್‍ಜಿಒ ಗಳನ್ನು ಸೃಷ್ಟಿಸಿ, ತಮಗೆ ಬೇಕಾದ ಏಜೆನ್ಸಿಗಳಿಗೆ ಹಣ ನೀಡುತ್ತಿರುವುದಾಗಿ ಸಾಕಷ್ಟು ದೂರುಗಳು ಬಂದಿದ್ದು, ರಸ್ತೆಗಳು ಹಾಳಾಗಿವೆ, ಮೈನ್ಸ್ ಲಾರಿಗಳ ಸಂಚಾರದಿಂದ ಮನೆಗಳಲ್ಲಿ ಧೂಳು ತುಂಬಿಕೊಂಡು ಬದುಕು ದುಸ್ತರವಾಗಿದೆ ಎಂದು ಸ್ಥಳೀಯರಿಂದ ರಸ್ತೆ ಬಂದ್ ಸಹ ಮಾಡಲಾಗಿದೆ.

Advertisement

ಇದರ ಜೊತೆಗೆ ನೀರಿನ ಮೂಲಗಳಾದ ಕೆರೆ ಕಟ್ಟೆಗಳೂ ಕೂಡ ಮಲಿನವಾಗಿವೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.  ಇಲ್ಲಿನ ಸಂಪನ್ಮೂಲ ಬಳಕೆ ಮಾಡಿಕೊಂಡು, ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡದೆ ಅನಾನುಕೂಲವನ್ನೇ ಹೆಚ್ಚು ಮಾಡಿದರೆ ಸಹಿಸಲು ಸಾಧ್ಯವಿಲ್ಲ.  ಹಾಗಾಗಿ ಗಣಿ ಕಂಪನಿಗಳು ಸ್ಥಳೀಯ ಜನರಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಉತ್ತಮ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ಸಿಎಸ್‍ಆರ್ ನಿಧಿಯನ್ನು ಕಾರ್ಪೊರೇಟ್ ಕಂಪನಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯಗಳಿಗೆ ಕಡ್ಡಾಯವಾಗಿ ಸ್ಥಳೀಯವಾಗಿಯೇ ಖರ್ಚು ಮಾಡಬೇಕು ಎಂಬುದಾಗಿ ಸರ್ಕಾರ ಇತ್ತೀಚೆಗಷ್ಟೇ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.

ಗಣಿ ಕಂಪನಿಗಳು ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಶಾಲೆ, ಕಾಲೇಜು, ಅಂಗನವಾಡಿ, ಆಸ್ಪತ್ರೆ, ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಪರಿಸರ ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದು ಗಣಿ ಕಂಪನಿಗಳ ಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಸಿ.ಎಸ್‍ಆರ್ ನಿಧಿಯಡಿಯಲ್ಲಿ ಇದುವರೆಗೂ ಯಾವ ಕಾರ್ಯಗಳಿಗೆ ಎಷ್ಟು ಖರ್ಚು ವೆಚ್ಚ ಮಾಡಲಾಗಿದೆ, ಪರಿಸರ ಸಂರಕ್ಷಣೆ ಹಾಗೂ ಸ್ಥಳಿಕರಿಗೆ ಉದ್ಯೋಗ ನೀಡಿರುವ ಬಗ್ಗೆಯೂ ಮಾಹಿತಿ ನೀಡಬೇಕು. ಇದರ ಜೊತೆಗೆ ಕಂಪನಿಗಳು ಸಿಎಸ್‍ಆರ್ ನಿಧಿಯಡಿ ಮುಂದೆ ಕೈಗೊಳ್ಳಲಾಗುವ ಕಾರ್ಯಗಳ  ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಗಣಿ ಕಂಪನಿಗಳು ಕೆಲವೆಡೆ ಅಂಗನವಾಡಿ, ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ, ಆದರೆ ಆ ಸ್ಥಳದಲ್ಲಿ ಅದರ ಅಗತ್ಯತೆ ಮತ್ತು ಉಪಯುಕ್ತತೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಾರದೆ ಮಾಡಿರುವುದರಿಂದ ಕೆಲವೆಡೆ ಸಮಸ್ಯೆಯಾಗಿದೆ.  ಹೀಗಾಗಿ ಕಂಪನಿಗಳು ಎಲ್ಲಿ, ಯಾವ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನಕ್ಕೆ ತರಬೇಕು ಹಾಗೂ ಕಂಪನಿಗಳು ತಾವು ಸಿಎಸ್‍ಆರ್ ನಿಧಿಯಡಿ ಕೈಗೊಳ್ಳುವ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಬಂಧಿಸಿದ ಕ್ಷೇತ್ರವ್ಯಾಪ್ತಿಯ ಶಾಸಕರು, ಸಂಸದರು, ಸಚಿವರುಗಳ ಗಮನಕ್ಕೆ ತರುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
15 ಸಾವಿರ ಎಕರೆಯಷ್ಟು ಸೋಲಾರ್ ಪಾರ್ಕ್ ಇದೆ. 2016 ರಿಂದ ಸೋಲಾರ್ ಪಾರ್ಕ್‍ಗಳು ಪ್ರಾರಂಭ ಮಾಡಲಾಗಿದ್ದು, ಅಲ್ಲಿಯೂ ಕೂಡ ಸಿ.ಎಸ್.ಆರ್ ನಿಧಿ ಬಳಕೆಯಾಗಬೇಕಿದೆ. ಸುಮಾರು 36 ಕೋಟಿ   ಸಿ.ಎಸ್.ಆರ್ ನಿಧಿ ಬರಬೇಕಿದ್ದು, ಅದನ್ನು ಆಯಾ ಪ್ರದೇಶ, ಊರುಗಳಲ್ಲಿ ಖರ್ಚು ಮಾಡಲು ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ ಅವರು, ಸಿ.ಎಸ್.ಆರ್.ನಿಧಿಯು ಹೆಚ್ಚಿನ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಸಂಸದರು ತಿಳಿಸಿದರು.

ಸಿ.ಎಸ್.ಆರ್. ನಿಧಿ ಬಳಕೆಗೆ ಮುನ್ನ ಕ್ರಿಯಾಯೋಜನೆ ರೂಪಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ನಂತರ ಸಿ.ಎಸ್.ಆರ್.ನಿಧಿ ಬಳಕೆ ಮಾಡುವುದು ಕಡ್ಡಾಯ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲೆಯ ಗಣಿ ಕಂಪನಿಗಳು ನೆರವಿಗೆ ಧಾಮಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು.  ಇತ್ತೀಚೆಗೆ ಓಬಣ್ಣನಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದರು, ಇಂತಹ ಸಂದರ್ಭದಲ್ಲಿ ಗಣಿ ಕಂಪನಿಗಳು ವಿಶಾಲ ಮನಸ್ಸಿನಿಂದ ಮುಂದೆ ಬಂದು ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

157 ಹಳ್ಳಿಗಳ ಸೇರ್ಪಡೆಗೆ ಪ್ರಸ್ತಾವನೆ : ಜಿಲ್ಲೆಯಲ್ಲಿ ಗಣಿ ಬಾಧಿತ ಪ್ರದೇಶಗಳಲ್ಲಿ ಪೂರಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಡಿಎಂಎಫ್ ಹಾಗೂ ಕೆಎಂಇಆರ್‍ಸಿ ನಿಧಿಯಡಿ ಕೈಗೊಳ್ಳಲಾಗುತ್ತಿದೆ.  ಜಿಲ್ಲೆಯಲ್ಲಿ ಈಗಾಗಲೆ 157 ಹಳ್ಳಿಗಳ ಪಟ್ಟಿಯನ್ನು ಮಾಡಿ, ಗಣಿಬಾಧಿತ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಹೇಳಿದರು.

 

ಏಕಲವ್ಯ ಶಾಲೆ ಹಾಗೂ ವಿಜ್ಞಾನ ಕೇಂದ್ರ ಮಂಜೂರಾತಿ : ಜಿಲ್ಲೆಯಲ್ಲಿ ಏಕಲವ್ಯ ಶಾಲೆ ಸ್ಥಾಪನೆಗಾಗಿ ಭಾರತ ಸರ್ಕಾರ ಪರಿಶಿಷ್ಟ ವರ್ಗಗಳ ಮಂತ್ರಾಲಯವು ಮುಂದಾಗಿದ್ದು, ಇದಕ್ಕಾಗಿ ತುರ್ತಾಗಿ 15 ಎಕರೆ ಜಮೀನು ಮಂಜೂರಾತಿ ಆದಷ್ಟು ಬೇಗ ವ್ಯವಸ್ಥೆ ಮಾಡಬೇಕು.  ಇದರ ಜೊತೆಗೆ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಕೆಎಂಇಆರ್‍ಸಿ ನಿಧಿಯಡಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ ಕನಿಷ್ಟ 2 ರಿಂದ 5 ಎಕರೆ ಜಾಗ ಗುರುತಿಸಿ, ಮಂಜೂರಾತಿ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಂಸದ ಗೋವಿಂದ ಎಂ ಕಾರಜೋಳ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‍ಪಿ ದಿನಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ ಸೇರಿದಂತೆ ಗಣಿ ಕಂಪನಿಗಳ ಪ್ರತಿನಿಧಿಗಳು ಇದ್ದರು.

Advertisement
Tags :
bengaluruchitradurgaCSR funddevelopmentGovinda M. Karajolmine-affected areasMP Govinda M. Karajolasuddionesuddione newsಗಣಿಬಾಧಿತ ಪ್ರದೇಶಚಿತ್ರದುರ್ಗಬೆಂಗಳೂರುಸಂಸದ ಗೋವಿಂದ ಎಂ.ಕಾರಜೋಳಸಿಎಸ್‍ಆರ್ ನಿಧಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article