ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಜಾಗೃತಿ ಮೂಡಿಸಿ : ಪಿಡಿಒಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್
ಚಿತ್ರದುರ್ಗ. ಜುಲೈ.03: ಮಳೆಗಾಲ ಆರಂಭವಾಗಿದ್ದು, ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳು ಬೀರುವ ಸಾಧ್ಯತೆಗಳಿರುವುದರಿಂದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಮತ್ತು ಹೆಚ್ ಟು ಎಸ್ ವಯಲ್ಸ್ ಉಪಯೋಗಿಸಿ ನೀರು ಪರೀಕ್ಷೆ ಕೈಗೊಳ್ಳಲು ಏರ್ಪಡಿಸಿದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಮತ್ತು ಕ್ಷೇತ್ರ ಪರೀಕ್ಷಾ ಕಿಟ್ ಉಪಯೋಗಿಸಿ ನೀರು ಪರೀಕ್ಷೆ ಮಾಡುವ ಕೈಪಿಡಿಯನ್ನು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಬಿಡುಗಡೆಗೊಳಿಸಿದರು.
ಜಿ.ಪಂ ಯೋಜನಾ ನಿರ್ದೇಶಕ ಡಾ.ಎಸ್.ರಂಗಸ್ವಾಮಿ ಮಾತನಾಡಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ಗ್ರಾಮ ಪಂಚಾಯಿತಿ ಹಂತದಲ್ಲಿ ನೀರು ಪರೀಕ್ಷೆ ಕಿಟ್‍ಗಳ ಮೂಲಕ ಗ್ರಾಮದಲ್ಲಿ ಇರುವ ಕುಡಿಯುವ ನೀರು ಜಲಮೂಲಗಳ ನೀರು ಸಂಗ್ರಹಿಸಿ, ಪರೀಕ್ಷೆ ಮಾಡಿಸಿ, ನೀರು ಕುಡಿಯಲು ಯೋಗ್ಯವಾಗಿ ಇಲ್ಲದೇ ಇದ್ದರೆ ನಂತರ ತಾಲ್ಲೂಕು ಮಟ್ಟದ ನೀರು ಪರೀಕ್ಷಾ ಪ್ರಯೋಗಾಲಕ್ಕೆ ತಂದು ನೀರು ಪರೀಕ್ಷೆ ಮಾಡಿಸಿ ನಂತರ ಕ್ರಮ ಕೈಗೊಳ್ಳಲು ತಿಳಿಸಿದರು.
ನೀರು ಮತ್ತು ನೈರ್ಮಲ್ಯ ಸಮಿತಿಗಳ ಪುನರ್ ರಚನೆ ಮಾಡಿ ಕಡ್ಡಾಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಮಾಡಿ ನಡಾವಳಿ ಮಾಡಬೇಕು. ಗ್ರಾಮದಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಇದ್ದಲ್ಲಿ ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದು ಪರಿಹರಿಸಬೇಕು ಎಂದು ತಿಳಿಸಿದರು.
ಜಿ.ಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ, ಕುಡಿಯುವ ನೀರನ್ನು ಕ್ಷೇತ್ರ ಪರೀಕ್ಷೆಯಡಿ ಕಿಟ್ ಬಳಸಿ, ಪರೀಕ್ಷಿಸಿ, ಕಲುಷಿತ ನೀರು ಕಂಡು ಬಂದರೆ ಕೂಡಲೇ ಅಂತಹ ಜಲ ಮೂಲಗಳಿಂದ ನೀರು ಪೂರೈಕೆ ನಿಲ್ಲಿಸಬೇಕು ಮತ್ತು ಗ್ರಾಮದಲ್ಲಿ ಪೈಪುಗಳು ಒಡೆದು ಹೋಗಿದ್ದರೆ ದುರಸ್ಥಿ ಮಾಡಿಸಿ ನೀರು ಸರಬರಾಜು ಮಾಡಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೇಲ್ ಮಾತನಾಡಿ, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರೀಕ್ಷಾ ಕಿಟ್ ಬಳಸಿಕೊಳ್ಳಲು ತಿಳಿಸಿದರು.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಪುನರ್ ರಚನೆ ಮಾಡಿ ಪ್ರತಿ ಗ್ರಾಮದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿರಲು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ನೀರು ಪರೀಕ್ಷೆ ಪ್ರಯೋಗಾಲಯದ ಸಿಬ್ಬಂದಿಗಳು, ನೀರು ಪರೀಕ್ಷೆ ಮಾಡಿಸಿ ಮಾಹಿತಿ ನೀಡಿದರು.
ಈ ಸಂದರ್ಭದಲಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಶ್ರೀ.ಮಂಜುನಾಥ್ ಎಸ್.ನಾಡರ್, ಜಿಲ್ಲಾ ಎಂಐಎಸ್ ಸಮಾಲೋಚಕ ಸ್ನೇಹನ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜು, ಲ್ಯಾಬ್ ಸಿಬ್ಬಂದಿಗಳು, ಐಎಸ್‍ಆರ್‍ಎ ಸಿಬ್ಬಂದಿಗಳು ಇದ್ದರು.