ಚಿತ್ರದುರ್ಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿ.ಪಿ.ಐ. ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.12 : ಅನುದಾನ, ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗುತ್ತಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಪಂಚಾಯಿತಿಯಲ್ಲಿರುವ ಕೇಂದ್ರ ಮಂತ್ರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಎ.ನಾರಾಯಣಸ್ವಾಮಿರವರ ಆಪ್ತರ ಮೂಲಕ ಪ್ರಧಾನಿ ನರೇಂದ್ರಮೋದಿಗೆ ಮನವಿ ಸಲ್ಲಿಸಿತು.
ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿರುವ ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ಕಾಯ್ದಿರಿಸಿ ಇದುವರೆವಿಗೂ ಬಿಡುಗಡೆಗೊಳಿಸಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ನೆಪ ಹೇಳಿಕೊಂಡು ಕಾಲ ಕಳೆಯುತ್ತಿದೆಯೇ ವಿನಃ ಕಾಮಗಾರಿ ಮಾತ್ರ ಜಾಗ ಬಿಟ್ಟು ಕದಲಿಲ್ಲ. ಇದರಿಂದ ಬರಪೀಡಿತ ಜಿಲ್ಲೆ ಚಿತ್ರದುರ್ಗಕ್ಕೆ ನೀರು ಹರಿಯುವುದು ಯಾವಾಗ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು ?
ಕಳೆದ ನಾಲ್ಕು ವರ್ಷಗಳಿಂದ ರಾಜ್ಯಕ್ಕೆ ಸಲ್ಲಬೇಕಾದ ಜಿ.ಎಸ್.ಟಿ. ತೆರಿಗೆ ಹಣವನ್ನು ನೀಡದೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರಿಂದ 45 ಸಾವಿರ ಕೋಟಿ ರೂ. ನಷ್ಟವಾಗಿದೆ. ಬರ ಪರಿಹಾರದ ಹಣವನ್ನು ಕೂಡಲೆ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಮತ ಚಲಾಯಿಸಬೇಕಾಗುತ್ತದೆಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಳ್ಳಕೆರೆ ತಾಲ್ಲೂಕು ಸಿ.ಪಿ.ಐ. ಕಾರ್ಯದರ್ಶಿ ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ ಎಚ್ಚರಿಸಿದರು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಹಿಂದಿನಿಂದಲೂ ಕೇಂದ್ರ ಸರ್ಕಾರ ಅನ್ಯಾಯವೆಸಗುತ್ತ ಬರುತ್ತಿದ್ದರು. ಚಿತ್ರದುರ್ಗದಿಂದ ಆಯ್ಕೆಯಾಗಿ ಪಾರ್ಲಿಮೆಂಟ್ ಗೆ ಹೋದ ಯಾವೊಬ್ಬ ಸಂಸದರು ನಮ್ಮ ನಾಡಿನ ಪರ ಧ್ವನಿ ಎತ್ತದಿರುವುದು ವಿಪರ್ಯಾಸ. ಎಷ್ಟು ಕ್ಷೇತ್ರಗಳಲ್ಲಿ ಸಂಸದರ ಅನುದಾನದಿಂದ ಅಭಿವೃದ್ದಿಯಾಗಿದೆ ಎನ್ನುವುದಕ್ಕೆ ಶ್ವೇತಪತ್ರ ಹೊರಡಿಸಬೇಕೆಂದು ಸಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಒತ್ತಾಯಿಸಿದರು.
ಸಿ.ಪಿ.ಐ. ರಾಜ್ಯ ಮಂಡಳಿ ಸದಸ್ಯರುಗಳಾದ ಕಾಂ.ಸಿ.ವೈ.ಶಿವರುದ್ರಪ್ಪ, ಕಾಂ.ಟಿ.ಆರ್.ಉಮಾಪತಿ, ಸಹ ಕಾರ್ಯದರ್ಶಿ ಕಾಂ.ವಿ.ಹೆಚ್.ಹನುಮಂತಪ್ಪ, ಕಾಂ.ಎಸ್.ಸಿ.ಕುಮಾರ್, ಕಾಂ.ಜಾಫರ್ ಷರೀಫ್, ಕಾಂ.ಎನ್.ಸಿ.ಕುಮಾರಸ್ವಾಮಿ, ಕಾಂ.ಅಮಿನಾಭಿ, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ಬಿ.ರಾಜಣ್ಣ, ಕಾಂ.ಸತ್ಯಕೀರ್ತಿ, ಎಂ.ವೆಂಕಟೇಶ್, ಡಿ.ನಿರ್ಮಲ, ಇ.ಚಂದ್ರಮತಿ, ತಿಪೇಸ್ವಾಮಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.