ನಾಡು, ನುಡಿಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ : ತಹಸೀಲ್ದಾರ್ ನಾಗವೇಣಿ
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 30 : ನಾಡು, ನುಡಿಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ನಾಗವೇಣಿ ಹೇಳಿದರು. ಅವರು ಮಂಗಳವಾರ ಕನ್ನಡ ರಥವನ್ನು ಜಿಲ್ಲೆಗೆ ಸ್ವಾಗತಿಸಿ ಮಾತನಾಡಿದರು.
ಕನ್ನಡ ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿರುವ ಭಾಷೆಯಾಗಿದೆ. ಕಲಿಯಲು ಅತ್ಯಂತ ಸುಲಭವಾಗಿರುವ ಭಾಷೆಗೆ ನಾನಾ ವಿಧದ ಪ್ರಕಾರಗಳಿವೆ. ಶಾಸ್ತೀಯ ಭಾಷೆಯ ಸ್ಥಾನ,ಮಾನವನ್ನು ಹೊಂದಿರುವ ಇದರ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು. ಕನ್ನಡದ ಸಮ್ಮೇಳನ ಹಾಗೂ ಮೆರವಣಿಗೆಗಳು ಹಬ್ಬದಂತೆ ಆಚರಿಸಲ್ಪಡುತ್ತವೆ. ಇದಕ್ಕೆ ಕನ್ನಡಿಗರ ಅಭಿಮಾನ ಕಾರಣವಾಗಿದೆ. ಇದೀಗ ಸಂಚರಿಸುತ್ತಿರುವ ರಥವು ಕನ್ನಡ ನಾಡಿನ,ಸಂಸ್ಕøತಿ,ಕಲೆ ಮತ್ತು ವಿಜ್ಞಾನವನ್ನು ಪ್ರತಿನಿಧಿಸುತ್ತಿದೆ ಎಂದರು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಜರುಗಲಿದೆ. ಇದರ ಅಂಗವಾಗಿ ಕನ್ನಡ ರಥವು ಇಡೀ ರಾಜ್ಯದಲ್ಲಿ ಸಂಚರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಏಕೈಕ ಕನ್ನಡ ಭುವನೇಶ್ವರಿಯ ದೇವಾಲಯದಿಂದ ಆರಂಭವಾಗಿರುವ ಈ ರಥವು ಸಮ್ಮೇಳನ ಜರುಗುವ ಮಂಡ್ಯದಲ್ಲಿ ಸಮಾರೋಪಗೊಳ್ಳಲಿದೆ. ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳ ಮೂಲಕ ಸಂಚರಿಸುವ ರಥವು ಎಲ್ಲ ಕನ್ನಡಿಗರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅಧೀಕೃತ ಆಹ್ವಾನ ನೀಡುತ್ತಿದೆ. ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸುವ ರಥವು ಗುರುವಾರ ಚಿಕ್ಕಮಗಳುರು ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿಯವರು ಒನಕೆ ಓಬವ್ವ ವೃತ್ತದಲ್ಲಿ ಹೂಮಾಲೆ ಅರ್ಪಿಸಿ ನಮನ ಸಲ್ಲಿಸಿದರು. ಬಿಇಒ ನಾಗಭೂಷಣ್, ನಗರಸಭೆ ಪೌರಾಯುಕ್ತರಾದ ಎಂ.ರೇಣುಕ, ತಾಪಂ ಇಒ ವೈ.ರವಿಕುಮಾರ್, ನಗರ ಸಭೆ ಅಧ್ಯಕ್ಷೆ ಸುಮಿತ,ಉಪಾಧ್ಯಕ್ಷೆ ಶ್ರೀದೇವಿ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಗ್ರೇಡ್ 2 ತಹಸೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಚಿತ್ರದುರ್ಗ ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್, ಪದಾಧಿಕಾರಿಗಳಾದ ಶ್ರೀನಿವಾಸ ಮಳಲಿ, ಕೆ.ಜಿ. ಅಜಯ್ ಕುಮಾರ್, ಮತ್ತಿತರರಿದ್ದರು.