ಸಿರಿಧಾನ್ಯ ಅಡುಗೆ ಮಾಡ್ತೀರಾ ? ಚಿತ್ರದುರ್ಗದಲ್ಲಿ ಪಾಕ ಸ್ಪರ್ಧೆ ಇದೆ : ವಿಜೇತರಿಗೆ 5 ಸಾವಿರ ರೂ.ಬಹುಮಾನ : ಇಲ್ಲಿದೆ ಮಾಹಿತಿ
ಚಿತ್ರದುರ್ಗ. ಡಿ.12: ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಮಟ್ಟದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಕೃಷಿ ಇಲಾಖೆಯಿಂದ ಡಿಸೆಂಬರ್ 13ರಂದು ಬೆಳಿಗ್ಗೆ 11ಕ್ಕೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದು, ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಬೇಕಾಗುವ ಸಾಮಾಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಡಿಸೆಂಬರ್ 12ರೊಳಗೆ ಇ-ಮೇಲ್ ವಿಳಾಸ jdagricta@yahoo.co.in/ jdagrictd@gmail.com ಅಥವಾ ಖುದ್ದಾಗಿ ಪೋಸ್ಟ್ ಮುಖಾಂತರ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಎಪಿಎಂಸಿ ರಸ್ತೆ, ಚಿತ್ರದುರ್ಗ-577501 ವಿಳಾಸಕ್ಕೆ ಕಳುಹಿಸಲು ತಿಳಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸೂಚನೆಗಳು: ಪ್ರತಿ ಸ್ಪರ್ಧಿಗೆ ಒಂದೇ ತಿನಿಸು ಸಿಹಿ ಅಥವಾ ಖಾರ (ಸಸ್ಯಹಾರಿ ತಿನಿಸುಗಳು ಮಾತ್ರ) ತಯಾರಿಸುವ ಅವಕಾಶವಿರುತ್ತದೆ. ತಮ್ಮ ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು, ಮನೆಯಲ್ಲಿಯೇ ತಯಾರಿಸಿ, ಡಿಸೆಂಬರ್ 13ರಂದು ಬೆಳಿಗ್ಗೆ 11ಕ್ಕೆ ಸರಿಯಾಗಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಿವುದು. ತಯಾರಿಸಿದ ತಿನಿಸುಗಳ ಪ್ರದರ್ಶನ ಬಳಸಿದ ಸಾಮಗ್ರಿಗಳು, ತೋರಿಕೆ, ರುಚಿ, ಸುವಾಸನೆ, ಪೌಷ್ಠಿಕತೆಗಳ ಅಂತಿಮ ತೀರ್ಪು ಕೈಗೊಳ್ಳಲಾಗುವುದು.
ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಜಿಲ್ಲಾಮಟ್ಟಕ್ಕೆ ಪ್ರಥಮ ಬಹುಮಾನವಾಗಿ ಖಾರ ತಿನಿಸು ಅಥವಾ ಸಿಹಿ ತಿನಿಸಿಗೆ ತಲಾ ರೂ.5000/- ಬಹುಮಾನವಿರುತ್ತದೆ.
ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು, ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.