ವಾಣಿ ವಿಲಾಸ ಜಲಾಶಯಕ್ಕೆ ಮುಂದುವರಿದ ಒಳಹರಿವು : ಸದ್ಯ ಸಂಗ್ರಹವಾಗಿರುವ ನೀರು ಎಷ್ಟು..?
ಹಿರಿಯೂರು : ರಾಜ್ಯದಲ್ಲಿ ಮಳೆ ಮುಂದುವರೆದಿದ್ದು ವಾಣಿ ವಿಲಾಸ ಜಲಾಶಯದ ಒಳಹರಿವು ಕೂಡ ಹೆಚ್ಚಳವಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ನೀರು ಹರಿದು ಬಂದಿದೆ. ಈ ಮೂಲಕ ಡ್ಯಾಂನಲ್ಲಿ 2668 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 116.30 ಅಡಿ ತಲುಪಿದೆ. ಇದು ಸುತ್ತಮುತ್ತಲ ರೈತರಿಗೆ ಸಂತಸ ತಂದಿದೆ.
2022ರಲ್ಲಿ ವಾಣಿವಿಲಾಸ ಜಲಾಶಯ ಎರಡನೇ ಬಾರಿಗೆ ಕೋಡಿ ಬಿದ್ದಿತ್ತು. ಸುಮಾರು ಒಂದು ತಿಂಗಳ ಕಾಲ ವೇದಾವತಿ ನದಿ ಹರಿದಿತ್ತು. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿತ್ತು. ಅದು 89 ವರ್ಷಗಳ ಬಳಿಕ ಭರ್ತಿಯಾಗಿದ್ದು ಸ್ಥಳೀಯರ ಮೊಗದಲ್ಲಿ ಸಂತಸ ತಂದಿತ್ತು. ಆದರೆ 2023ರಲ್ಲಿ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ನೀರು ಹರಿದು ಬಂದಿರಲಿಲ್ಲ.
ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇದೇ ರೀತಿ ಇನ್ನೂ ಒಂದೆರಡು ತಿಂಗಳಲ್ಲಿ ಹೆಚ್ಚು ಮಳೆ ಬಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೆ ಜಲಾಶಯ ಈ ಬಾರಿಯೂ ಕೋಡಿ ಬೀಳುವ ಸಾಧ್ಯತೆ ಇದೆ. ಸುಮಾರು 14 ಅಡಿ ನೀರು ಜಲಾಶಯಕ್ಕೆ ಹರಿದು ಬಂದರೇ ಜಲಾಶಯ ಬಹುತೇಕ ಕೋಡಿ ಬೀಳುವುದು ನಿಶ್ಚಿತವಾಗಿದೆ.
1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ಪ್ರದೇಶದ ಅಚ್ಚುಕಟ್ಟುದಾರರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ವೇದಾವತಿ ನದಿಗೆ ಅಡ್ಡಲಾಗಿ ಮಾರಿ ಕಣಿವೆ ಬಳಿ ವಿವಿ ಸಾಗರ ಜಲಾಶಯವನ್ನು ನಿರ್ಮಾಣ ಮಾಡಿದರು. ಈ ಜಲಾಶಯ ನಿರ್ಮಾಣವಾಗಿ ಸುಮಾರು 118 ವರ್ಷ ಕಳೆದಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳೆಕೆರೆ ಸೇರಿದಂತೆ ಡಿಆರ್‌ಡಿಓಗೆ ಕುಡಿಯುವ ನೀರಿನ ಮೂಲವಾಗಿದೆ.