ದಾಖಲೆಯ ಮಾನವ ಸರಪಳಿ ನಿರ್ಮಾಣ : ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹರ್ಷ
ಚಿತ್ರದುರ್ಗ. ಸೆ.15: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲೆಯಲ್ಲಿ ದಾಖಲೆಯ 145 ಕಿ.ಮೀ. ಉದ್ದದ ಮಾನವ ಸರಪಳಿ ಯಶಸ್ವಿಯಾಗಿ ನಿರ್ಮಿಸಿರುವುದಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಸ್ವ-ಸಹಾಯ ಸಂಘಗಳ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ನೌಕರರು, ವಿವಿಧ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ಜಗತ್ತಿಗೆ ಸಾರಲಾಗಿದೆ.
ಜನಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿದ್ದಾರೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮ ರೂಪಿಸಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಹಾಗೂ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರಿಗೆ ಇಲಾಖೆ ಸೇರಿದಂತೆ, ಕಾರ್ಯಕ್ರಮ ವರದಿಯನ್ನು ಎಲ್ಲಡೆ ವ್ಯಾಪಕವಾಗಿ ಬಿತ್ತರಿಸಿದ ಮಾಧ್ಯಮ ಮಿತ್ರರಿಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ 145 ಕಿ.ಮೀ ಮಾನವ ಸರಪಳಿ ನಿರ್ಮಾಣ : ಕೈ ಕೈ ಬೆಸೆದು ದಾಖಲೆಯ ಮಾನವ ಸರಪಳಿ ರಚನೆ
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಮಹತ್ವ ಸಾರುವ ನಿಟ್ಟಿನಲ್ಲಿ ಭಾನುವಾರ ಜಿಲ್ಲೆಯಲ್ಲಿ 145 ಕಿ.ಮೀ ಅತಿ ಉದ್ದದ ಮಾನವ ಸರಪಳಿ ನಿರ್ಮಿಸಲಾಯಿತು.
ಜಿಲ್ಲೆಯಲ್ಲಿ 1.50 ಲಕ್ಷಕ್ಕೂ ಅಧಿಕ ಮಂದಿ ಸುಮಾರು 145 ಕಿ.ಮೀ ಮಾನವ ಸರಪಳಿ ರಚಿಸಿ, ಸಾವಿರಾರು ವಿದ್ಯಾರ್ಥಿಗಳು ಹಾಗೂ ಜನರು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕಾಪಾಡುವುದಕ್ಕಾಗಿ ಪ್ರಜಾಪ್ರಭುತ್ವ ಬಲಪಡಿಸುತ್ತೇವೆ ಎಂಬ ಸಂದೇಶ ಸಾರಿದರು. ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲ ಜನರೂ ಕೈ-ಕೈ ಬೆಸೆದು ನಿಲ್ಲುವ ಮೂಲಕ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮಂತ್ರ ಜಪಿಸಿದರು.
ಹಿರಿಯೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್, ಎಸ್‍ಪಿ ರಂಜಿತ್ ಬಂಡಾರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಓದಿದ ಸಂವಿಧಾನ ಪೀಠಿಕೆಯನ್ನು ಎಲ್ಲರೂ ಸಾಮೂಹಿಕವಾಗಿ ಪಠಿಸಿದರು.
ಮಾನವ ಸರಪಳಿಯುದ್ದಕ್ಕೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು, ಸಂಘ ಸಂಸ್ಥೆಗಳ ಸದಸ್ಯರು, ಎನ್‍ಜಿಒಗಳ ಸದಸ್ಯರು, ರೈತ ಸಂಘದವರು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡು ಮಾನವ ಸರಪಳಿಯಲ್ಲಿಯೇ ಎಲ್ಲರೂ ಪರಸ್ಪರ ಕೈ ಹಿಡಿದು ಮೇಲೆಕ್ಕೆತ್ತಿ ಜೈಹಿಂದ್, ಜೈ ಕರ್ನಾಟಕ ಎಂದು ಘೋಷಣೆ ಕೂಗಿ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು. ಮಾನವ ಸರಪಳಿಯುದ್ದಕ್ಕೂ ಹಬ್ಬದ ವಾತಾವರಣ ಮನೆ ಮಾಡಿತ್ತು. ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಉತ್ಸಾಹದಿಂದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೇದಿಕೆ ಕಾರ್ಯಕ್ರಮ ಜರುಗಿದ ಹಿರಿಯೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಶೇಷವಾಗಿ ಮಾನವ ಸರಪಳಿ ನಿರ್ಮಿಸಲಾಯಿತು.
ಜಿಲ್ಲೆಯಲ್ಲಿ ಗಮನ ಸೆಳೆದ ಬೃಹತ್ ಮಾನವ ಸರಪಳಿ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾದ 145 ಕಿ.ಮೀ ಉದ್ದದ ಬೃಹತ್ ಮಾನವ ಸರಪಳಿ ಗಮನ ಸೆಳೆಯಿತು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮೇಲಿನ ಕಣಿವೆ ಪ್ರದೇಶದಿಂದ ಪ್ರಾರಂಭವಾದ ಮಾನವ ಸರಪಳಿಯು ಚಳ್ಳಕೆರೆ ಮಾರ್ಗವಾಗಿ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿವರೆಗೂ ಮಾನವ ಸರಪಳಿ ರಚಿಸಲಾಯಿತು. ಇದರಲ್ಲಿ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕಿನ ವಿದ್ಯಾರ್ಥಿಗಳು, ನೌಕರರು, ಜನಪ್ರತಿನಿಧಿಗಳೂ, ಸಂಘ ಸಂಸ್ಥೆಗಳು, ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಸುಮಾರು 1.50 ಲಕ್ಷ ಜನ ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಸಿ ನೆಟ್ಟ ಸಚಿವರು : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ನಿರ್ಮಿಸುವುದರ ಜೊತೆಗೆ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಹಿರಿಯೂರು ನಗರದ ಅಂಬೇಡ್ಕರ್ ವೃತ್ತದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಸಿ ನೆಟ್ಟು, ನೀರೆರೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಹಿರಿಯೂರು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಸೇರಿದಂತೆ ಉಪಾಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.