Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭಾರತ ಸಂವಿಧಾನ ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ : ಟಿ.ಪಿ.ಉಮೇಶ್

11:50 AM Nov 26, 2024 IST | suddionenews
Advertisement

ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 26  : ಭಾರತ ದೇಶದ ಸಂವಿಧಾನ ಪ್ರಪಂಚದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಭಾರತದಂತ ಬೃಹತ್ ವಿಸ್ತಾರವುಳ್ಳ ಹತ್ತಾರು ಧರ್ಮ, ಸಾವಿರಾರು ಜಾತಿ, ಭಾಷೆ, ಸಂಸ್ಕೃತಿ ಆಚರಣೆಗಳುಳ್ಳ ಜನರನ್ನು ಒಗ್ಗೂಡಿಸಿಕೊಂಡು ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಹಶಿಕ್ಷಕ ಹೊಳಲ್ಕೆರೆ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಟಿ.ಪಿ.ಉಮೇಶ್ ಹೇಳಿದರು.

Advertisement

ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಸಮೀಪದ ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಭಾಗವಾಗಿ ನನ್ನ ಸಂವಿಧಾನ ನನ್ನ ಸ್ವಾಭಿಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1947 ರ ಆಗಸ್ಟ್ 15 ರಂದು ಬ್ರಿಟೀಷರಿಂದ ಭಾರತ ದೇಶ ಸ್ವಾತಂತ್ರ್ಯ ಪಡೆದುಕೊಂಡಿತು. ನಂತರ ದೇಶವನ್ನು ಮುನ್ನಡೆಸುವ ಸಲುವಾಗಿ ಪ್ರಜಾಪ್ರಭುತ್ವ ಸರ್ಕಾರವನ್ನು ಒಪ್ಪಿಕೊಳ್ಳಲಾಯಿತು. ದೇಶದ ಹಾಗು ಪ್ರಾಂತೀಯ ಪ್ರಜಾ ಸರ್ಕಾರಗಳ ರಚನೆ, ಶಾಸಕಾಂಗ ಹಾಗು ಸಂಸತ್ತಿನ ಕಾರ್ಯಗಳು, ಕಾರ್ಯಾಂಗದ ಚಟುವಟಿಕೆಗಳು, ನ್ಯಾಯಪಾಲನೆ ರೀತಿನೀತಿಗಳ ವಿಸ್ತೃತವಾದ ವಿವರಣೆಯುಳ್ಳ ಸರ್ವಕಾಲಕ್ಕು ಹೊಂದಿಕೊಳ್ಳುವ ದೇಶದ ಕಾನೂನಾದ ಸಂವಿಧಾನ ರಚಿಸಲು ಸ್ವತಂತ್ರ ಭಾರತದ ಸಂವಿಧಾನ ರಚನಾ ಸಮಿತಿ ರಚಿಸಲಾಯಿತು. ಡಾ.ಬಾಬು ರಾಜೇಂದ್ರ ಪ್ರಸಾದರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದರೆ ಡಾ.ಬಿ.ಆರ್.ಅಂಬೇಡ್ಕರ್‌ ಕರಡು ಸಮಿತಿ ಅಧ್ಯಕ್ಷರಾದರು.

ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿನಗಳ ಕಾಲ ಬಹುಮುಖ ಆಯಾಮದಲ್ಲಿ ಅಧ್ಯಯನದಿಂದ ಸಂವಿಧಾನ ಕರಡು ರಚಿತವಾಯಿತು. ಭಾರತದ ಜನರಿಗೆ ಸಂಸತ್ತಿನ ಜನಪ್ರತಿನಿಧಿಗಳ ಚರ್ಚೆ ಮತ್ತು ಸರ್ವಸಮ್ಮತ ಒಪ್ಪಿಗೆಯ ಮೇರೆಗೆ 1949 ರ ನವೆಂಬರ್ 26 ರಂದು ಅರ್ಪಿಸಿಕೊಳ್ಳಲಾಯಿತು. ಭಾರತ ದೇಶದ ಭೂಭಾಗದಲ್ಲಿ ಸಂವಿಧಾನವನ್ನು 1950 ರ ಜನವರಿ 26 ರಿಂದ ಜಾರಿಗೆ ತರಲಾಯಿತು. ಇಂದಿಗೆ ಸಂವಿಧಾನ ರಚಿತಗೊಂಡು ಎಪ್ಪತ್ತೈದು ವರ್ಷಗಳಾದವು. ಭಾರತ ಸರ್ಕಾರವು 2015 ರಲ್ಲಿ ಭಾರತ ರತ್ನ ಅಂಬೇಡ್ಕರರ 125 ನೇ ಜನ್ಮ ದಿನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಮೂಲಕ ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವಾಗಿ ಆಚರಿಸಲು ಸಂಕಲ್ಪ ಮಾಡಿತು. ಭಾರತ ದೇಶವಾಸಿಗಳ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ ಸಮಾನತೆ ಸ್ವಾತಂತ್ರ್ಯ ಹಕ್ಕುಗಳ ರಕ್ಷಿಸಿ ಎಲ್ಲರು ಭ್ರಾತೃತ್ವ ಸಹೋದರ ಭಾವನೆಯಿಂದ ಬಾಳುವಂತೆ ಅನುವುಮಾಡಿಕೊಟ್ಟಿರುವ ದೇಶದ ಪ್ರಬಲ ಕಾನೂನೆ ನಮ್ಮ ಸಂವಿಧಾನ. ಸಂವಿಧಾನ ನಮ್ಮ ಸ್ವಾಭಿಮಾನದ ಸಂಕೇತ. ಸಾರ್ವಭೌಮ ರಾಷ್ಟ್ರದ ಹೆಗ್ಗುರುತು ಎಂದು ತಿಳಿಸಿದರು.

Advertisement

ಶಾಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಭಾಗವನ್ನು ಸಾಮೂಹಿಕವಾಗಿ ಓದಿ ಹೇಳಲಾಯಿತು. ವಿದ್ಯಾರ್ಥಿಗಳಾದ ಕು.ಆರ್.ದೀಕ್ಷಾ, ಎನ್.ಲಕ್ಷ್ಮಿದೇವಿ, ಸಿ.ದೀಕ್ಷಾ, ತರುಣ, ಕೆ.ಉಷ ಸಂವಿಧಾನದ ಪೀಠಿಕೆ ಹಾಗು ಹಕ್ಕು ಕರ್ತವ್ಯಗಳ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಡಿ.ಸಿದ್ಧಪ್ಪ, ರೇಷ್ಮಾ ಜಿ.ಎನ್. ಅಡಿಗೆ ಸಹಾಯಕರಾದ ತಿಮ್ಮಮ್ಮ, ಶಾರದಮ್ಮ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Tags :
bengaluruchitradurgaConstitution of IndiadevelopmentkannadaKannadaNewssuddionesuddionenewsT.P.Umeshಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಟಿ.ಪಿ.ಉಮೇಶ್ಬೆಂಗಳೂರುಭಾರತಸರ್ವಾಂಗೀಣ ಅಭಿವೃದ್ಧಿಸಂವಿಧಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article