ಒಳಮೀಸಲು ಜಾರಿಗೆ ಕಾಂಗ್ರೆಸ್ ಪಕ್ಷ ಬದ್ಧ : ವಿಳಂಬವಾದರೆ ಬೀದಿಗಿಳಿದು ಹೋರಾಟ : ಎಚ್.ಆಂಜನೇಯ
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.14 : ರಾಜ್ಯ ಸರ್ಕಾರದ ಮುಂದೆ ಮಹತ್ವದ ಎರಡು ವರದಿಗಳಾದ ಸದಾಶಿವ ಮತ್ತು ಕಾಂತರಾಜ್ ಆಯೋಗದ ವರದಿ ಇದ್ದು, ಅದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸಿಎಂ ಸಿದ್ದರಾಮಯ್ಯ ಅವರದ್ದಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲು ಜಾರಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು, ಈ ವಿಷಯದಲ್ಲಿ ಯಾವುದೇ ಅಪನಂಬಿಕೆ ಬೇಕಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಉತ್ಸಾಹಕರಾಗಿದ್ದಾರೆ. ಕೆಲ ಶಕ್ತಿಗಳು ಒಳಮೀಸಲು ಜಾರಿಗೆ ಅಡ್ಡಿಪಡಿಸುತ್ತಿದ್ದು, ಅದನ್ನು ಮೆಟ್ಟಿನಿಂತು ಜಾರಿಗೊಳಿಸುವ ಬದ್ಧತೆ ಸಿದ್ದರಾಮಯ್ಯ ಪ್ರದರ್ಶಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯಲ್ಲಿ ಪ್ರಬಲರ ಮಧ್ಯೆ ಪೈಪೋಟಿ ನಡೆಸಿ ಸೌಲಭ್ಯ ಪಡೆಯಲು ಮಾದಿಗ ಸಮುದಾಯಕ್ಕೆ ಸಾಧ್ಯವಾಗಿಲ್ಲ. ಜತೆಗೆ ಈಗಲೂ ನಿಕೃಷ್ಠ ಬದುಕು ನಡೆಸುತ್ತಿದೆ. ಈ ಕಾರಣಕ್ಕೆ ನಮ್ಮ ಪ್ರಗತಿಗಾಗಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಲಾಗಿತ್ತು. ಬಳಿಕ ಎಲ್ಲ ಹಂತದಲ್ಲೂ ಒಳಮೀಸಲು ಜಾರಿ ಪರ ತನ್ನ ಬದ್ಧತೆಯನ್ನು ಕಾಂಗ್ರೆಸ್ ಪಕ್ಷ ಪ್ರದರ್ಶಿಸಿದೆ ಎಂದರು.
ವಿಧಾನಸಭಾ ಚುನಾವಣೆ ಮುನ್ನ ಚಿತ್ರದುರ್ಗದಲ್ಲಿ ನಡೆದ ಎಸ್ಸಿ-ಎಸ್ಟಿ ಸಮಾವೇಶದಲ್ಲಿ ಹಾಗೂ ಪ್ರಾಣಾಳಿಕೆಯಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೊಳಿಸುವುದಾಗಿ ಹೇಳಿದೆ. ಆದರೆ, ಪಕ್ಷದ ನಡೆಗೆ ಅನೇಕ ಕಾನೂನು ತೊಡಕುಗಳು ಕೆಲಕಾಲ ಅಡ್ಡಿಯಾಗಿದ್ದವು. ಈಗ ಸುಪ್ರೀಂ ಕೋರ್ಟ್ ತೀರ್ಪು ಎಲ್ಲ ರೀತಿ ಸಮಸ್ಯೆಗಳಿಗೆ ತೆರೆ ಎಳೆದು, ಮಾದಿಗ ಸಮುದಾಯದ ಮನೆ ಬಾಗಿಲಿಗೆ ಸೌಭಾಗ್ಯವೇ ಬಂದು ನಿಂತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಒಳಮೀಸಲು ಸೌಲಭ್ಯ ಅನುಭವಿಸುವ ಸುಸಂದರ್ಭ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯಾ.ಸದಾಶಿವ ಆಯೋಗದ ವಿಷಯದಲ್ಲಿ ವಿಳಂಬ ಆಗುತ್ತಿದೆ ಎಂಬ ಅಭಿಪ್ರಾಯ ಸಮುದಾಯದವರಲ್ಲಿ ಸಹಜವಾಗಿ ವ್ಯಕ್ತವಾಗಿದೆ. ಇದು ತಪ್ಪಲ್ಲ. ಆದರೆ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿನ ಎಲ್ಲ ದಲಿತ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದು, ಅವರು ಒಳಮೀಸಲು ಜಾರಿಗೊಳಿಸಿಯೇ ಸಿದ್ಧ. ಈ ವಿಷಯದಲ್ಲಿ ಸಂಶಯ ಬೇಡ ಎಂದು ತಿಳಿಸಿದ್ದಾರೆ ಎಂದರು.
ನಾವೆಲ್ಲರೂ ತಾಳ್ಮೆ ವಹಿಸಿದ್ದು ಜತೆಗೆ ಪದೇ ಪದೆ ಸಿಎಂ ಅವರನ್ನು ಭೇಟಿ ಮಾಡಿ ಒಳಮೀಸಲು ವಿಷಯ ಪ್ರಸ್ತಾಪಿಸುತ್ತಿದ್ದೇವೆ. ಇನ್ನೂ ಒಂದೇರಡು ತಿಂಗಳಲ್ಲಿ ಒಳಮೀಸಲಾತಿ ಜಾರಿಗೊಂಡು, ಅನುಷ್ಠಾನಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ಒಂದೊಮ್ಮೆ ಜಾರಿಗೊಳಿಸದಿದ್ದರೆ ನಾವೆಲ್ಲರೂ ಹೋರಾಟಕ್ಕೆ ಇಳಿಯುತ್ತೇವೆ. ಜತೆಗೆ ರಾಜ್ಯದಲ್ಲಿಯೇ ಎಂದೂ ನಡೆಯದಂತೆ ಚಳವಳಿ ನಡೆಸಲು ಸಿದ್ಧ. ಈ ಮಧ್ಯೆಯೂ ಈಗಾಗಲೇ ದಶಕಗಳಿಂದ ಹೋರಾಟ ನಡೆಸುತ್ತಿರುವ ದಲಿತ ಸಂಘಟನೆಗಳ ನೇತಾರರು, ನಿರಂತರ ಪ್ರತಿಭಟನೆ ಶಾಂತರೀತಿಯಲ್ಲಿ ನಡೆಸುವುದು ಅಗತ್ಯ. ಯಾವುದೇ ಕಾರಣಕ್ಕೆ ಬಂದ್, ರಸ್ತೆ ತಡೆ, ಜನಪ್ರತಿನಿಧಿಗಳಿಗೆ ಮುತ್ತಿಗೆ, ಘೆರಾವ್ ಹಾಕುವುದು ಸದ್ಯಕ್ಕೆ ಬೇಡ ಎಂದು ವಿನಂತಿ ಮಾಡಿಕೊಂಡರು.
ರಾಜ್ಯದ 224 ಶಾಸಕರ ಮನೆ ಮುಂದೆ ಧರಣಿ ನಡೆಸಿ, ಅವರಿಂದ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಪತ್ರಗಳನ್ನು ಪಡೆದು, ಎಲ್ಲ ಪತ್ರಗಳನ್ನು ಒಟ್ಟುಗೂಡಿಸಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸುವ ಮೂಲಕ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಮೀಸಲಾತಿಗೆ ಸದಾ ವಿರೋಧವಾಗಿರುವ ಬಿಜೆಪಿಗೆ ಇದ್ದಕ್ಕಿದ್ದಂತೆ ಒಳಮೀಸಲಾತಿ ನೆನಪು ಆಗಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದ ಅವರು, ಯಾವುದೇ ಪಕ್ಷ ರಾಜಕೀಯ ಲಾಭ ಪಡೆಯಲು ಅವಕಾಶ ಕಲ್ಪಿಸದೆ ಸಿದ್ದರಾಮಯ್ಯ ಗಟ್ಟಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ತೆಲಂಗಾಣ ರಾಜ್ಯದಲ್ಲಿ ರೇವಂತ್ ರೆಡ್ಡಿ ಆದೇಶಿಸಿರುವ ರೀತಿ ಎಲ್ಲ ರೀತಿಯ ಉದ್ಯೋಗಗಳ ನೇಮಕಾತಿಗೆ ತಡೆ ಹಾಕಲು ಮುಂದಾಗಬೇಕೆಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಒತ್ತಾಯಿಸಿದ್ದು, ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ರಾಜಕಾರಣಿಗಳು ಸಮುದಾಯದ ಹಿತಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅ.15ರಂದು ಮತ್ತೊಮ್ಮೆ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಅಗತ್ಯಬಿದ್ದರೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಒಳ ಮೀಸಲು ಜಾರಿಯಿಂದ ಸಮುದಾಯಕ್ಕೆ ಆಗುವ ಅನುಕೂಲ ಕುರಿತು ಮನದಟ್ಟು ಮಾಡುತ್ತೇವೆ. ಎಲ್ಲ ಯತ್ನಗಳು ವಿಫಲಗೊಂಡ ಬಳಿಕ ಬೀದಿಗಿಳಿದು ನಾವು ಹೋರಾಟಕ್ಕೆ ಸಿದ್ಧ ಎಂದರು.
ಜಾತಿಗಣತಿ ನಡೆಸಲು ಇಡೀ ದೇಶದಲ್ಲಿ ಮೊದಲ ಬಾರಿಗೆ ತೀರ್ಮಾನ ಕೈಗೊಂಡಿದ್ದು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ. ಈ ಹಿಂದೆ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ಕಾಂತರಾಜ್ ಆಯೋಗದ ಮಧ್ಯಂತರ ವರದಿ ಮಂಡಿಸಲು ಚಿಂತನೆ ನಡೆಸಿದ್ದೇ, ಆದರೆ, ಸಿಎಂ ಅವರು ಪೂರ್ಣಪ್ರಮಾಣದ ವರದಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ವೈಜ್ಞಾನಿಕ ವರದಿ ಸಿದ್ಧಪಡಿಸುವ ಕಾರಣಕ್ಕೆ ಆಯೋಗ ಈ ವಿಷಯದಲ್ಲಿ ನಮಗೆ ಸಲ್ಲಿಸಲಿಲ್ಲ. ಬಳಿಕ ನಮ್ಮ ಪಕ್ಷ ಸೋಲುಂಡಿತು. ಈಗ ವರದಿ ಸಿದ್ಧವಾಗಿದೆ. ಇದು ಮಂಡಿಸಿ ಅನುಷ್ಠಾನಗೊಳಿಸಿದರೆ ಎಲ್ಲ ರೀತಿಯ ಅನುಕೂಲ ನೊಂದ ಜನರಿಗೆ ಆಗಲಿದೆ. ಜತೆಗೆ ಸೌಲಭ್ಯ ಹಂಚಿಕೆ, ಮೀಸಲು ನಿಗದಿ ಸೇರಿ ವಿವಿಧ ರೀತಿ ಯೋಜನೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಒಳ ಮೀಸಲು ಜಾರಿಗೆ ಪ್ರಕ್ರಿಯೆ ಆರಂಭಿಸಿದ್ದು ಕಾಂಗ್ರೆಸ್ ಪಕ್ಷ, ಅದನ್ನು ಅನುಷ್ಠಾನಗೊಳಿಸುವುದು ನಮ್ಮ ಪಕ್ಷವೇ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ನರಸಿಂಹರಾಜು, ಮುಖಂಡರಾದ ಎಚ್.ಅಂಜಿನಪ್ಪ, ಎನ್.ಡಿ.ಕುಮಾರ್, ಡಿ.ಎನ್.ಮೈಲಾರಪ್ಪ, ಮುದಾಸೀರ, ರವಿಚಂದ್ರ ಇತರರಿದ್ದರು