ಚಿತ್ರದುರ್ಗದಲ್ಲಿ ಮತ್ತೊಂದು ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಸಿದ್ದತೆ..!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 30ರಂದು ಈ ಸಮಾವೇಶ ನಡೆಸಿ, ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ನಿರೀಕ್ಷೆ ಇದೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಇಳಿಯಲಿದ್ದಾರೆ.
ಹಿಂದುಳಿದ ವರ್ಗಗಳ ನಾಯಕ ಸ್ಥಾನಕ್ಕೆ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಯಲಿದ್ದು, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಈಗಾಗಲೇ ಈ ಸಂಬಂಧ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ.
ಜಾತಿ ಗಣತಿ ವರದಿಗೆ ಹಲವರ ವಿರೋಧವಿದೆ. ಹಲವರ ಬೆಂಬಲವೂ ಇದೆ. ಸಿದ್ದರಾಮಯ್ಯ ಬೆಂಬಲಿಗರಿಂದ ಸದ್ಯ ಜಾತಿ ಗಣತಿ ವರದಿ ಜಾರಿಗೆ ಚಿತ್ರದುರ್ಗದಲ್ಲಿ ಇದೇ ತಿಂಗಳ 30ರಂದು ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಲಾಗಿದೆ. ಸಿದ್ದರಾಮಯ್ಯ ಆಪ್ತರು ಆಗಾಗ ಸಿದ್ದರಾಮೋತ್ಸವ ಹಾಗೂ ಸಮಾವೇಶಗಳನ್ನು ಮಾಡುವ ಮೂಲಕ ತನ್ನ ನಾಯಕನ ಶಕ್ತಿ ಪ್ರದರ್ಶನವನ್ನು ಮಾಡುತ್ತಲೇ ಇರುತ್ತಾರೆ.
ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿ ಜೋರಾಗಿದೆ. ಇದರ ನಡುವೆ ಬಿಜೆಪಿ ನಾಯಕರು ಲೋಕಸಭೆಯ ಬಳಿಕ ಸರ್ಕಾರ ಬೀಳಲಿದೆ ಎಂದೇ ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ತಯಾರಿಯಲ್ಲಿ ಎಚ್ಚರದಿಂದ ಇದ್ದಾರೆ. ಬಿಜೆಪಿ ಪಕ್ಷದ ನಾಯಕರ ಹೇಳಿಕೆಗಳನ್ನು ಅಲ್ಲಗಳೆಯುವ ಕೆಲಸ ಮಾಡಲು ಹೊರಟಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಅವರ ಶಕ್ತಿ ಹಾಗೆ ಇದೆ ಎಂದು ಸಾಬೀತು ಮಾಡಲು ಬೆಂಬಲಿಗರು ಹೊರಟಿದ್ದಾರೆ.