ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ : ಮಾಜಿ ಸಚಿವ ಗೋವಿಂದ ಕಾರಜೋಳ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.18 : ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದು ಆರುವರೆ ತಿಂಗಳಾಯಿತು. ಒಂದೆ ಒಂದು ಹೊಸ ಅಭಿವೃದ್ದಿ ಕಾಮಗಾರಿ ಕೈಗೊಂಡಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಆರಂಭಗೊಂಡ ಕಾಮಗಾರಿಗಳನ್ನು ಬಂದ್ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿವೃದ್ದಿ ಕುಂಠಿತಗೊಂಡು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಪಾದಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ದೀನ ದಲಿತರಿಗೆ ರಕ್ಷಣೆಯಿಲ್ಲದಂತಾಗಿದೆ. ಪ್ರಥ್ವಿಸಿಂಗ್ ಎಂಬ ಯುವಕನಿಗೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಸಹೋದರ ಹಾಗೂ ಸಹಚರರು ಸೇರಿಕೊಂಡು ಬೆಳಗಾವಿಯಲ್ಲಿ ಚಾಕುವಿನಿಂದ ಇರಿದಿದ್ದಾರೆ. ಕಾಟಾಚಾರಕ್ಕೆ ಪೊಲೀಸರು ಎಫ್.ಐ.ಆರ್.ದಾಖಲಿಸಿದ್ದಾರೆ. ಇದುವರೆವಿಗೂ ಯಾರನ್ನು ಬಂಧಿಸಿಲ್ಲ. ವೆಂಟಮುರಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿರುವುದು ಇಡಿ ದೇಶವೇ ನಾಚಿ ತಲೆತಗ್ಗಿಸುವಂತ ಹೇಯ ಕೃತ್ಯ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೋಲಾರದಲ್ಲಿ ವಸತಿ ಶಾಲೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚಗೊಳಿಸಲಾಗಿದೆ. ಸಮಾಜ ಕಲ್ಯಾಣ ಸಚಿವರು ದಲಿತರಾಗಿದ್ದುಕೊಂಡು ದಲಿತರನ್ನೆ ಹೀನಾಯವಾಗಿ ಕಾಣುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು ?
ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೆಣ್ಣುಮಕ್ಕಳು ಸ್ನಾನ ಮಾಡುತ್ತಿರುವುದನ್ನು ವೀಡಿಯೋ ಮಾಡಿರುವವರನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಬೇಕು. ಬೆಳಗಾವಿಯ ಸುವರ್ಣ ಸೌಧದಲ್ಲಿ ಹತ್ತು ದಿನಗಳ ಕಾಲ ಕಾಂಗ್ರೆಸ್ ಕಾಟಾಚಾರಕ್ಕಾಗಿ ಅಧಿವೇಶನ ನಡೆಸಿದೆ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆ, ಉದ್ಯಮಗಳು ಬಂದ್ ಆಗಿವೆ. ಮಹಾರಾಷ್ಟ್ರದಲ್ಲಿ ಒಂದು ಯೂನಿಟ್‍ಗೆ ನಾಲ್ಕು ರೂ.ಗಳನ್ನು ನಿಗಧಿಪಡಿಸಲಾಗಿದೆ. ನಮ್ಮ ರಾಜ್ಯದಲ್ಲಿಯೂ ಅದರಂತೆ ದರ ನಿಗಧಿಪಡಿಸಿ ಉದ್ಯಮಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಲು ಕಟ್ಟಿದರೆ ರೈತರ ಬಡ್ಡಿ ಮನ್ನಾ ಎಂದು ಆಸೆ ತೋರಿಸುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಮೂರು ಲಕ್ಷದವರೆಗೆ ಸಾಲ ನೀಡಲಾಗಿತ್ತು. 17 ಲಕ್ಷ 29 ಸಾವಿರ ರೈತರಿಗೆ ಹದಿಮೂರು ಸಾವಿರದ 408 ಕೋಟಿ ರೂ. ಬೆಳೆ ಸಾಲ ಬಡ್ಡಿಯಿಲ್ಲದಂತೆ ನಮ್ಮ ಸರ್ಕಾರ ನೀಡಿತ್ತು. ಹಿಂಗಾರು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಆರು ಕೋಟಿ ರೂ.ಗಳ ಅಸಲು ಕಟ್ಟುವಂತೆ ರಾಜ್ಯ ಕಾಂಗ್ರೆಸ್ ಕೇಳಿದರೆ ರೈತರಿಂದ ಸಾಧ್ಯವಿಲ್ಲ. ರೈತರ ಬಗ್ಗೆ ನಿಜವಾಗಿಯೂ ಕಳಕಳಿಯಿದ್ದರೆ ಎರಡು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದರು.
ಹನ್ನೊಂದು ಸಾವಿರದ 144 ಕೋಟಿ ರೂ.ಗಳ ಎಸ್ಸಿಪಿ. ಟಿಎಸ್ಪಿ. ಹಣವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಉಚಿತ ಗ್ಯಾರೆಂಟಿಗಳಿಗೆ ಬಳಸಿರುವುದನ್ನು ವಾಪಸ್ ಕೊಡುವಂತೆ ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದೆವು. ನೀರಾವರಿ ಯೋಜನೆಗೆ ಆದ್ಯತೆ ನೀಡಿಲ್ಲ. ಬರದಿಂದ ತತ್ತರಿಸಿ ರಾಜ್ಯದಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ಬೆಳೆ ನಾಶವಾಗಿರುವುದರಿಂದ ಪ್ರತಿ ಎಕರೆಗೆ 25 ಸಾವಿರ ರೂ.ಗಳ ಪರಿಹಾರ ನೀಡಲಿ ಎಂದು ಗೋವಿಂದ ಕಾರಜೋಳ ಮನವಿ ಮಾಡಿದರು.
ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ ನೌಕರರ ಬ್ಲಾಕ್‍ಮೇಲ್ ಮಾಡುತ್ತಿದೆ. ಇನ್ನು ಮುಂದಾದರೂ ಇಂತಹ ಅನಿಷ್ಠ ಪದ್ದತಿ ನಿಲ್ಲಬೇಕಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‍ಯಾದವ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.