For the best experience, open
https://m.suddione.com
on your mobile browser.
Advertisement

ಜನವರಿ 17 ರಂದು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡುವಂತೆ ಒತ್ತಾಯಿಸಿ ಸಮಾವೇಶ : ಕುಮಾರ್ ಸಮತಳ

02:58 PM Jan 11, 2024 IST | suddionenews
ಜನವರಿ 17 ರಂದು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡುವಂತೆ ಒತ್ತಾಯಿಸಿ ಸಮಾವೇಶ   ಕುಮಾರ್ ಸಮತಳ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ‌. 11 : ತಾಲ್ಲೂಕಿನಲ್ಲಿರುವ ಬಗರ್‍ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜ.17 ರಂದು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸಾಗುವಳಿದಾರರ ಸಮಾವೇಶವನ್ನು ನಡೆಸಲಾಗುವುದೆಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ಭೂಮಿ ಸಾಗುವಳಿದಾರರಿದ್ದಾರೆ. ಪ್ರತಿಯೊಬ್ಬರಿಗೂ ಹಕ್ಕುಪತ್ರ ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸುವುದಕ್ಕಾಗಿ ನಡೆಯಲಿರುವ ಸಮಾವೇಶದಲ್ಲಿ ಸ್ಥಳೀಯ ಶಾಸಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಭಾಗವಹಿಸಲಿದ್ದಾರೆ. ಬಗರ್ ಹುಕುಂ ಸಾಗುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಹಕ್ಕುಪತ್ರಕ್ಕಾಗಿ ಜಿಲ್ಲೆಯಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅರಣ್ಯ ಹಕ್ಕು ಕಾಯಿದೆಯಡಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಬೇಕು. ಕೆಲವು ಗೊಂದಲಗಳಿರುವುದರಿಂದ ಮೇ. 18 ರಂದು ರಾಜ್ಯದ ಮುಖ್ಯಮಂತ್ರಿ ಜೊತೆ ಸಭೆ ನಡೆಸಿ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡುವಂತೆ ಗಮನ ಸೆಳೆಯಲಾಗುವುದು. ಚಿತ್ರದುರ್ಗ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹಕ್ಕುಪತ್ರಗಳನ್ನು ವಿತರಿಸಬೇಕು. ಯಾರ ಅರ್ಜಿಯನ್ನು ನಿರ್ಲಕ್ಷಿಸಬಾರದು. ಪ್ರತಿ ವಾರಕ್ಕೊಮ್ಮೆ ತಹಶೀಲ್ದಾರ್ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಇದುವರೆವಿಗೂ ಒಂದು ಸಭೆಯೂ ನಡೆದಿಲ್ಲವೆಂದು ಕುಮಾರ್ ಸಮತಳ ಆಪಾದಿಸಿದರು.

ಸರ್ಕಾರಿ ಹಾಗೂ ಇತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತ ಫಾರಂ ನಂ 50, 53 ಹಾಗೂ 57 ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿಗಳ ಮಂಜೂರಾತಿ ನೀಡಬೇಕು.
ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಗಳ ವಿಂಗಡಣೆ ಮಾಡಿ ಸರ್ವೆ ಮಾಡುವ ಮೂಲಕ ಗೊಂದಲ ನಿವಾರಿಸಬೇಕು. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಅರಣ್ಯ ಹಕ್ಕು ಕಾಯ್ದೆಯನ್ವಯ ಭೂಮಿ ಮಂಜೂರು ಮಾಡಬೇಕು.

94 ಸಿ, 94 ಸಿಸಿ. ಅರ್ಜಿಗಳನ್ವಯ ಮತ್ತು ವಸತಿಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಗೂ ವಸತಿ ರಹಿತರಿಗೆ ನಿವೇಶನ ಮತ್ತು ಮನೆಗಳ ಮಂಜೂರಾತಿ ನೀಡಲು ಕ್ರಮ ಜರುಗಿಸಬೇಕು.

ಬಡವರನ್ನು ಭೂಮಿಯಿಂದಾಗಲಿ, ವಾಸಿಸುವ ಜಾಗದಿಂದಾಗಲಿ ಒತ್ತುವರಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು. ಅನಿವಾರ್ಯವಾಗಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕ್ರಮ ಕೈಗೊಳ್ಳಬಾರದು.
ಭೂಮಿ-ವಸತಿ ಮಂಜೂರಾತಿಗಳು ಕಾಲ ಮಿತಿಯೊಳಗೆ ಬಗೆಹರಿಯಬೇಕು.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯವರನ್ನು ಒಳಗೊಂಡಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯುವಂತೆ ಕುಮಾರ್ ಸಮತಳ ಒತ್ತಾಯಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಮುಖಂಡ ಸತ್ಯಪ್ಪ ಮಲ್ಲಾಪುರ, ಹನುಮಂತಣ್ಣ ಗೋನೂರು, ಕರಿಯಪ್ಪ ಈಚಘಟ್ಟ, ಈರಜ್ಜ,
ಸುನಂದಮ್ಮ, ಹೆಚ್.ವೆಂಕಟೇಶ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisement
Tags :
Advertisement