For the best experience, open
https://m.suddione.com
on your mobile browser.
Advertisement

ಸರ್ಕಾರದ ಗ್ಯಾರೆಂಟಿಗಳು ಪ್ರತಿ ಮನೆಗೆ ತಲುಪಿದೆಯೋ ಇಲ್ಲವೋ ಸಮೀಕ್ಷೆ ನಡೆಸಿ :  ವಿನಯ್ ತಿಮ್ಮಾಪುರ

04:25 PM Jan 04, 2024 IST | suddionenews
ಸರ್ಕಾರದ ಗ್ಯಾರೆಂಟಿಗಳು ಪ್ರತಿ ಮನೆಗೆ ತಲುಪಿದೆಯೋ ಇಲ್ಲವೋ ಸಮೀಕ್ಷೆ ನಡೆಸಿ    ವಿನಯ್ ತಿಮ್ಮಾಪುರ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.04 : ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳು ಪ್ರತಿ ಮನೆಗೆ ತಲುಪಿದೆಯೋ ಇಲ್ಲವೋ ಎನ್ನುವುದನ್ನು ಸಮೀಕ್ಷೆ ನಡೆಸಿ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ವಿನಯ್ ತಿಮ್ಮಾಪುರ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಯುವ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಳಮಟ್ಟದಿಂದ ಯೂತ್ ಕಾಂಗ್ರೆಸ್‍ನ್ನು ಸಂಘಟಿಸಬೇಕಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಸಂವಿಧಾನ ನೀಡಿರುವುದರಿಂದ ಎಲ್ಲರೂ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಜಾತಿ ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತಿರುವ ಕೋಮುವಾದಿ ಬಿಜೆಪಿ.ಯಿಂದ ದೇಶದಲ್ಲಿ ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾನು ಕೂಡ ಆಕಾಂಕ್ಷಿ. ಆದರೆ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತದೋ ಅವರ ಪರವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ ನಲವತ್ತು ಪರ್ಸೆಂಟ್ ಕಮೀಷನ್ ಸರ್ಕಾರವನ್ನು ರಾಜ್ಯದ ಜನ ತೊಲಗಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಸಿದ್ದರಾಮಯ್ಯನವರು ಪ್ರಣಾಳಿಕೆಯಲ್ಲಿ ಹೊರಡಿಸಿದಂತ ಐದು ಗ್ಯಾರೆಂಟಿಗಳನ್ನು ನೀಡಿದ್ದಾರೆ.

ಇದರಿಂದ ಬಡವರಿಗೆ ದೀನ ದಲಿತರಿಗೆ ಅನುಕೂಲವಾಗಿದೆ. ಇನ್ನೇನು ಮೂರ್ನಾಲ್ಕು ತಿಂಗಳುಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ಎದುರಾಗಲಿದೆ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಪ್ರತಿ ಮನೆಗೆ ತಲುಪಿದೆಯೋ ಇಲ್ಲವೋ ಎನ್ನುವುದನ್ನು ವಿಚಾರಿಸಿ ಪಕ್ಷದ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಜವಾಬ್ದಾರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರುಗಳ ಮೇಲಿದೆ ಎಂದು ಹೇಳಿದರು.

ಸೇವಾದಳದ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಸೇವಾದಳ ಅಸ್ತಿತ್ವದಲ್ಲಿರಬೇಕು. ನಮಗೆ ಬೇಕಿರುವುದು ರಾಮ ರಾಜ್ಯವೇ ಹೊರತು ರಾಮ ಮಂದಿರವಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರೆಂಟಿಯಿಂದ ಜನ ಸುಖವಾಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ರಾಹುಲ್‍ಗಾಂಧಿರವರ ಕೈಬಲಪಡಿಸುವಂತೆ ವಿನಂತಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ವಸೀಂ ಮಾತನಾಡುತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಬೇಕು. ವಾರ್ಡ್, ಬೂತ್‍ಗಳಲ್ಲಿ ಕಾರ್ಯಕರ್ತರು ಪಕ್ಷದ ಯೋಜನೆಗಳ ಬಗ್ಗೆ ತಿಳಿಸಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು ತಂದು ಕೊಡುವ ಹೊಣೆಗಾರಿಕೆ ನಿಮ್ಮ ಹೆಗಲ ಮೇಲಿದೆ ಎಂದು ತಿಳಿಸಿದರು.

ಯೂತ್ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೇಸ್ವಾಮಿ, ಅಫೀಜ್, ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಅಧ್ಯಕ್ಷ ಶಶಿಕಿರಣ್ ವೇದಿಕೆಯಲ್ಲಿದ್ದರು.

Tags :
Advertisement