ಚಿತ್ರದುರ್ಗ | ನಾಳೆ ರಾಜ್ಯಮಟ್ಟದ ಮಾದಿಗ ವಕೀಲರ ಬೃಹತ್ ಸಮಾವಶ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 13 : ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ವತಿಯಿಂದ ಡಿಸೆಂಬರ್ 14ರಂದು ಬೆಳಿಗ್ಗೆ 10.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಸುಪ್ರೀಂಕೋರ್ಟ್ ಆದೇಶದನ್ವಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ “ಪ್ರಥಮ ರಾಜ್ಯಮಟ್ಟದ ಮಾದಿಗ ವಕೀಲರ ಬೃಹತ್ ಸಮಾವೇಶ” ಹಮ್ಮಿಕೊಳ್ಳಲಾಗಿದೆ.
ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು. ಸಂಸದ ಗೋವಿಂದ ಎಂ ಕಾರಜೋಳ ದೀಪ ಬೆಳಗಿಸುವರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ಹೆಚ್.ಆಂಜನೇಯ ಭಾಗವಹಿಸುವರು. ಹಿರಿಯ ವಕೀಲರು ಹಾಗೂ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ, ಬಹುಜನ ಚಳಿವಳಿಗಾರ ಮಾರಸಂದ್ರ ಮುನಿಯಪ್ಪ, ಹಿರಿಯ ವಕೀಲ ಎಸ್.ಮಾರೆಪ್ಪ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಹಿರಿಯ ವಕೀಲರು ಭಾಗವಹಿಸುವರು.
ಅಂದು ಮಧ್ಯಾಹ್ನ 2.30ಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ಕರ್ನಾಟಕ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗದ ಮುಂದೆ ಇರುವ ನಮ್ಮ ಸವಾಲುಗಳು ಕುರಿತು ಗೋಷ್ಠಿ ನಡೆಯಲಿದೆ. ಮಂಡ್ಯ ಜಿಲ್ಲೆಯ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಸಿ.ಶ್ಯಾಮ್ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಪ್ರತಿ ಜಿಲ್ಲೆಯಿಂದ ತಲಾ ಒಬ್ಬ ಹಿರಿಯ ವಕೀಲರಿಂದ ಅಭಿಪ್ರಾಯ ಮಂಡನೆ ನಡೆಯಲಿದೆ.
ಬೃಹತ್ ಸಮಾವೇಶದ ಅಂಗವಾಗಿ ಅಂದು ಬೆಳಿಗ್ಗೆ 10ಕ್ಕೆ ತಮಟೆ ಕಲಾತಂಡದೊಂದಿಗೆ ಒಳಮೀಸಲಾತಿ ಘೋಷಣೆ ಮೊಳಗಿಸುತ್ತಾ ಸಮಾಜದ ವಕೀಲರು ಕೋಟು ಧರಿಸಿ, ನಗರದ ತರಾಸು ರಂಗಮಂದಿರದಿಂದ ಮೆರವಣಿಗೆ ಪ್ರಾರಂಭಿಸಿ, ವಾಲ್ಮೀಕಿ ವೃತ್ತ ಬಳಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ, ನಂತರ ಬೆಳಿಗ್ಗೆ 10.30ಕ್ಕೆ ತರಾಸು ರಂಗಮಂದಿರಕ್ಕೆ ಆಗಮಿಸುವುದು ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ತಿಳಿಸಿದೆ.