ಚಿತ್ರದುರ್ಗ | ತುರುವನೂರು ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿದ ಶ್ರೀ ರಾಮೋತ್ಸವ
ಸುದ್ದಿಒನ್, ಚಿತ್ರದುರ್ಗ, ಜನವರಿ.23 : ಜನವರಿ 22 ರ ಸೋಮವಾರದಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Ram Mandir) ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೇರವೇರಿಸಲಾಯಿತು.
ತಾಲ್ಲೂಕಿನ ತುರುವನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೇವಾಲಯದ ಆವರಣದಲ್ಲಿ ವಿಶೇಷ ಮಂಟಪ ನಿರ್ಮಿಸಿ ಅದರಲ್ಲಿ ಬೃಹತ್ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಂದ ರಾಮನಾಮ ಸ್ಮರಣೆ ಮತ್ತು ಭಜನೆ ಮಾಡಲಾಯಿತು. ವಿಶೇಷ ಆಹ್ವಾನಿತರಾಗಿ ದಾಸಯ್ಯನವರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಬಳಿಕ ಕೋಸುಂಬರಿ ಪಾನಕವನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.
ದೇವಾಲಯವನ್ನು ಹೂವುಗಳು ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ಊರಿನ 33 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಯಿತು. ಗ್ರಾಮದ ಎಲ್ಲಾ ದೇವಾಲಯಗಳನ್ನು ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು.
ಊರಿನಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತದ್ದವು. ಇದೇ ವೇಳೆ ಶ್ರೀ ರಾಮನ ವೇಷಧಾರಿ ಮಕ್ಕಳು ಗಮನ ಸೆಳೆದರು.
ಪೂಜೆ ಕಾರ್ಯಕ್ರಮ ಮುಗಿದ ಬಳಿಕ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸುಮಾರು 2500 ಕ್ಕೂ ಹೆಚ್ಚು ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಸೇರಿದಂತೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ಇನ್ನೂ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು LED ಸ್ಕ್ರೀನ್ ವ್ಯವಸ್ಥೆ ಮಾಡಿದ್ದರು. ನೂರಾರು ಭಕ್ತರು ನೇರ ಪ್ರಸಾರದ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಶಕ್ತಿಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಶಿಧರ್, ಜನಾರ್ಧನ, ಸಾನಿಕಂ ರಮೇಶ್, ರಾಜಣ್ಣ, ಪ್ರಕಾಶ್, ಡಿಶ್ ಬಸವರಾಜ್, ಶ್ರೀನಿವಾಸ್, ಹನುಮಣ್ಣ ಮೇಷ್ಟ್ರು, ಪ್ರಭಂಜನ್, ಮನು, ರಘು, ಕಾರ್ತಿಕ್, ಲೋಹಿತ್, ಸೇರಿದಂತೆ ಊರಿನ ಗ್ರಾಮಸ್ಥರು ಭಾಗವಹಿಸಿದರು.