ಚಿತ್ರದುರ್ಗ | ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ವಿರುದ್ದ ಅವಿಶ್ವಾಸಕ್ಕೆ ಹೈಕೋರ್ಟ್ ತಡೆ : ಬಾರೀ ಗದ್ದಲ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಮ್‍ಕಿನ್‍ಭಾನು ವಿರುದ್ದ ಪಂಚಾಯಿತಿಯಲ್ಲಿ ಬುಧವಾರ ಕರೆಯಲಾಗಿದ್ದ ಅವಿಶ್ವಾಸ ಗೊತ್ತುವಳಿ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಹದಿನೇಳು ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ದ ಸುಮಾರು ಎರಡು ಗಂಟೆಗಳ ಕಾಲ ಮಾತಿನ ವಾಗ್ವಾದ ನಡೆದು ಕೊನೆಗೆ ಅವಿಶ್ವಾಸ ಗೊತ್ತುವಳಿ ಸಭೆಯನ್ನು ರದ್ದುಪಡಿಸಲಾಯಿತು.
ಅಧ್ಯಕ್ಷೆ ವಿರುದ್ದ ಹದಿನೇಳು ಸದಸ್ಯರು ಅವಿಶ್ವಾಸ ಗೊತ್ತುವಳಿ ಅರ್ಜಿಯನ್ನು ಉಪ ವಿಭಾಗಾಧಿಕಾರಿ ಕಚೇರಿಗೆ ನವೆಂಬರ್‍ನಲ್ಲಿ ಸಲ್ಲಿಸಿದ್ದರು. ನಿಯಮದ ಪ್ರಕಾರ ಅರ್ಜಿ ನೀಡಿ ಹದಿನೈದು ದಿನದ ಬಳಿಕ ಅವಿಶ್ವಾಸ ಗೊತ್ತುವಳಿ ಸಭೆಗೆ ಹಾಜರಾಗುವಂತೆ ನೋಟಿಸ್ ಕೊಡಬೇಕು. ಆದರೆ ಉಪ ವಿಭಾಗಾಧಿಕಾರಿ ಕಚೇರಿಯಿಂದ ಒಂದು ದಿನ ಮುಂಚಿತವಾಗಿ ಸದಸ್ಯರುಗಳಿಗೆ ನೋಟಿಸ್ ನೀಡಿರುವ ತಪ್ಪನ್ನು ಹಿಡಿದು ಅಧ್ಯಕ್ಷೆ ತಮ್‍ಕಿನ್‍ಭಾನು ಹೈಕೋರ್ಟ್ ಮೊರೆ ಹೋಗಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ತಡೆಯಾಜ್ಞೆ ನೀಡಿದೆ.
ಅಧ್ಯಕ್ಷೆ ವಿರುದ್ದ ಕೈ ಎತ್ತುವ ಮೂಲಕ ಅವಿಶ್ವಾಸ ಮಂಡಿಸುತ್ತೇವೆಂದು ಹದಿನೇಳು ಸದಸ್ಯರುಗಳು ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಪಟ್ಟು ಹಿಡಿದು ಕುಳಿತಾಗ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಕೊಡಲು ಬರುವುದಿಲ್ಲವೆಂದು ಚುನಾವಣಾಧಿಕಾರಿಗಳು ಸದಸ್ಯರುಗಳಿಗೆ ಮನವರಿಕೆ ಮಾಡಿಕೊಟ್ಟರು. ಒಪ್ಪದ ಸದಸ್ಯರುಗಳು ಒಂದು ದಿನ ಮುಂಚೆ ನೋಟಿಸ್ ನೀಡಿ ಎಡವಟ್ಟು ಮಾಡಿರುವ ಅಧಿಕಾರಿಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್, ಪಿ.ಡಿ.ಓ. ದೀಪ ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿಯೋರ್ವರು ಈ ಸಂದರ್ಭದಲ್ಲಿದ್ದರು.