ಚಿತ್ರದುರ್ಗ | ಎಸ್.ಎಂ.ಎಸ್. ಸ್ಕೂಲ್ ಮತ್ತು ಕಾಲೇಜ್ ಉದ್ಘಾಟಿಸಿದ ಶಿವಲಿಂಗಾನಂದ ಮಹಾಸ್ವಾಮಿಗಳು
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ಪರಿಸರ ಪ್ರೇಮಿ ಹೆಚ್.ವೆಂಕಟೇಶ್ ನಮ್ಮ ಮಠದೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿದ್ದರು ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸ್ಮರಿಸಿದರು.
ಚಳ್ಳಕೆರೆ ರಸ್ತೆ ಮದಕರಿಪುರ ಬಡಾವಣೆಯಲ್ಲಿರುವ ಅಪ್ಪಾಜಿ ಸಿರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಂಜುನಾಥಸ್ವಾಮಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಎಸ್.ಎಂ.ಎಸ್. ಸ್ಕೂಲ್ ಮತ್ತು ಕಾಲೇಜ್ ಆಫ್ ಎಕ್ಸಲೆನ್ಸ್ ಇದರ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಹೆಚ್.ವೆಂಕಟೇಶ್ ಸದಾ ನಮ್ಮ ಮಠದ ಪರಮ ಭಕ್ತರಾಗಿದ್ದರು. ಅವರಲ್ಲಿ ಜಾತಿ ಕಲ್ಪನೆಯಿರಲಿಲ್ಲ. ಮನುಷ್ಯ ಜಾತಿ ಎಲ್ಲರು ಒಂದೆ ಎಂಬ ಭಾವನೆಯಿಟ್ಟುಕೊಂಡಿದ್ದರು. ಅವರ ಹಾದಿಯಲ್ಲಿಯೇ ಅವರ ಮಕ್ಕಳು, ಕುಟುಂಬ ಸಾಗುತ್ತಿದೆ. ಇಂತಹ ಸ್ಪರ್ಧಾತ್ಮಕ ಕಾಲದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟದ ಕೆಲಸ. ಆದರೂ ತಂದೆಯ ಆಸೆಯನ್ನು ನೆರವೇರಿಸಿದ್ದಾರೆ. 1986 ರಲ್ಲಿಯೇ ಹೆಚ್.ವೆಂಕಟೇಶ್ ಸಣ್ಣದಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು. ಈಗ ಅವರ ಮಕ್ಕಳಾದ ಡಾ.ಪ್ರಶಾಂತ್ ಮತ್ತು ಪ್ರವೀಣ್ ಇವರುಗಳು ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಈ ಭಾಗದಲ್ಲಿ ಯಾವುದೇ ಶಾಲೆ ಕಾಲೇಜು ಇಲ್ಲ. ಸುತ್ತಮುತ್ತಲಿನ ಐದಾರು ಗ್ರಾಮದ ಬಡ ಮಕ್ಕಳ ಶಿಕ್ಷಣಕ್ಕೆ ಈ ಸಂಸ್ಥೆ ಅನುಕೂಲವಾಗಲಿದೆ. ಪರಿಸರ ಪ್ರೇಮಿ ಹೆಚ್.ವೆಂಕಟೇಶ್‍ರವರಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲವಿತ್ತು. ಯಾವುದೇ ಒಂದು ಶಿಕ್ಷಣ ಸಂಸ್ಥೆ ಆರಂಭಿಸಬೇಕಾದರೆ ಆರ್ಥಿಕ ಸಂಪನ್ಮೂಲದ ಜೊತೆ ಕಾಯಕ ಶ್ರದ್ದೆ ಇರಬೇಕು. ಈ ನಿಟ್ಟಿನಲ್ಲಿ ವೆಂಕಟೇಶ್‍ರವರ ಕುಟುಂಬ ತಂದೆಯ ಕನಸನ್ನು ಈಡೇರಿಸುವತ್ತ ಹೆಜ್ಜೆ ಇಡುತ್ತಿದೆ ಎಂದು ಶ್ಲಾಘಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ ವಿದ್ಯಾಸಂಸ್ಥೆ ಕಟ್ಟುವುದು ಸುಲಭ. ಆದರೆ ಮುನ್ನಡೆಸಿಕೊಂಡು ಹೋಗುವುದು ಜವಾಬ್ದಾರಿ ಕೆಲಸ. ಪೈಪೋಟಿ ಯುಗದಲ್ಲಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಶಾಲಾ-ಕಾಲೇಜು ತೆರೆಯಬೇಕೆಂದರೆ ಹಣದ ಅವಶ್ಯಕತೆಯಿದೆ. ಅದರ ಜೊತೆ ಸಂಸ್ಥೆಯಲ್ಲಿ ಕೆಲಸ ಮಾಡುವ ಹತ್ತಾರು ಮಂದಿಗೆ ಜೀವನಕ್ಕೆ ದಾರಿ ತೋರಿಸಿದಂತಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಿಧಾನಪರಿಷತ್ ಸಭಾಪತಿ ಬಸವರಾಜ್‍ಹೊರಟ್ಟಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲರಾಜ್, ಮಾಜಿ ಸದಸ್ಯ ರವಿಕುಮಾರ್, ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ
ಅಭಿಯಂತರ ರಾಹುಲ್‍ದೇವ್ ಡಿ. ಹೆಚ್.ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಶಾಂತಮ್ಮ ವೆಂಕಟೇಶ್ ವೇದಿಕೆಯಲ್ಲಿದ್ದರು.
ಡಾ.ವಿ.ಎಲ್.ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿ.ಎಲ್.ಪ್ರವೀಣ್ ಮತ್ತು ಹೆಚ್.ವೆಂಕಟೇಶ್‍ರವರ ಕುಟುಂಬದವರು ಈ ಸಂದರ್ಭದಲ್ಲಿ ಹಾಜರಿದ್ದರು.