For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಜುಲೈ 13 ರಂದು ರಾಷ್ಟ್ರೀಯ ಲೋಕ ಅದಾಲತ್ : ಜಿಲ್ಲಾ ನ್ಯಾಯಾಧೀಶ ರೋಣ್ ವಾಸುದೇವ್

04:08 PM Jun 07, 2024 IST | suddionenews
ಚಿತ್ರದುರ್ಗ   ಜುಲೈ 13 ರಂದು ರಾಷ್ಟ್ರೀಯ ಲೋಕ ಅದಾಲತ್   ಜಿಲ್ಲಾ ನ್ಯಾಯಾಧೀಶ ರೋಣ್ ವಾಸುದೇವ್
Advertisement

ಚಿತ್ರದುರ್ಗ. ಜೂನ್.07: ರಾಜೀ ಸಂಧಾನದ ಮೂಲಕ ಸೌಹಾರ್ದಯುತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದು ಲೋಕ್ ಆದಾಲತ್ ಅಥವಾ ಜನತಾ ನ್ಯಾಯಾಲಯದ ಮೂಲ ಉದ್ದೇಶವಾಗಿದೆ. ಜುಲೈ 13 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ಪಕ್ಷಗಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್ ವಾಸುದೇವ್ ಹೇಳಿದರು.

Advertisement

ಈ ಕುರಿತು ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಜನತಾ ನ್ಯಾಯಾಲಯದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಸಂಧಾನಕಾರರಾಗಿ ಇರುತ್ತಾರೆ.

Advertisement

ನ್ಯಾಯಾಲಯದಲ್ಲಿ ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ ಇನ್ನೂ ನ್ಯಾಯಾಲಯ ಪ್ರವೇಶಿಸದೇ ಇರುವಂತಹ ಪ್ರಕರಣಗಳನ್ನು ಸಹ ಜನತಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದು. ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ ಮುಂದಿನ ತಿಂಗಳು ಜುಲೈ 13 ರಂದು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಕಕ್ಷಿಗಾರರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶ್ ರೋಣ್ ವಾಸುದೇವ್ ಕೋರಿದರು.

Advertisement

3772 ವಾಜ್ಯ ಹಾಗೂ 113399 ವಾಜ್ಯಪೂರ್ವ ಪ್ರಕರಣಗಳ ಇತ್ಯರ್ಥ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ 3772 ವ್ಯಾಜ್ಯ ಪ್ರಕರಣ ಹಾಗೂ 113399 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಳೆದ ಮೆಗಾ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗಿದೆ. ಒಟ್ಟು 118520 ಪ್ರಕರಣಗಳನ್ನು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲಾಗಿದೆ.

Advertisement
Advertisement

ಮದುವೆ ಬಂಧನವನ್ನು ಮುರಿಯುವುದು ನ್ಯಾಯಾಲಯದ ಕೆಲಸವಲ್ಲ. ಅಂತಿಮ ಹಂತದವರೆಗೂ ಪತಿ ಪತ್ನಿಯರಿಗೆ ಒಟ್ಟಾಗಿ ಜೀವಿಸಲು ತಿಳಿ ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ ಕಳೆದ ಲೋಕ ಅದಾಲತ್‌ನಲ್ಲಿ ಚಿತ್ರದುರ್ಗ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ವಿಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 09 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ ಎಂದು ನ್ಯಾಯಾಧೀಶ ರೋಣ್ ವಾಸುದೇವ್ ಮಾಹಿತಿ ನೀಡಿದರು.

ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್,ನೀರು ಇತರೆ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಇದರರೊಂದಿಗೆ ನ್ಯಾಯಾಲಯದ ವ್ಯಾಜ್ಯದಲ್ಲಿರುವ ನಾನ್ ಕಾಂಪೌಡಬಲ್ ಹಾಗೂ ಗಂಭೀರ ತರದ ಅಪರಾಧಿಕ ಪ್ರಕರಣಗಳನ್ನು ಹೊರತು ಪಡಿಸಿ, ಇತರೆ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು.

ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‌ನಲ್ಲಿ ಭಾಗವಹಿಸಬಹುದು, ಉಭಯ ಪಕ್ಷಗಾರರಿಗೂ ಒಪ್ಪಿಗೆಯಾದರೇ ಅಂತಿಮ ತೀರ್ಮಾನವಾಗುತ್ತದೆ. ಈ ತಿರ್ಮಾನವು ನ್ಯಾಯಾಲಯದ ಡಿಕ್ರಿಯ ಮೌಲ್ಯ ಹೊಂದಿರುತ್ತದೆ. ತೀರ್ಮಾನ ಪ್ರಕಾರವಾಗಿ ಪಕ್ಷಗಾರರು ನಡೆದುಕೊಳ್ಳದಿದ್ದರೇ ಅವರ ವಿರುದ್ಧ ನ್ಯಾಯಾಲಯದಲ್ಲಿ ಅಮಲ್ದಾರಿ ಅರ್ಜಿಯನ್ನು ಸಲ್ಲಿಸಿ, ಆ ತಿರ್ಮಾನಕ್ಕೆ ಬದ್ಧರಾಗುವಂತೆ ಮಾಡಬಹುದು. ರಾಜಿ ಸಂಧಾನದಿಂದ ಉಭಯ ಪಕ್ಷಗಾರರ ಭಾಂಧವ್ಯ ವೃದ್ಧಿಯಾಗಿ ಪ್ರಕರಣ ಸುಖಾಂತ್ಯ ಕಾಣುತ್ತದೆ.

ಲೋಕ ಅದಾಲತ್ ತೀರ್ಮಾನ ಅಂತಿಮವಾಗಿದ್ದು, ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ವರ್ಷಗಟ್ಟಲೇ ನ್ಯಾಯಾಲಯಕ್ಕೆ ಅಲೆಯದೆ ಲೋಕ ಅದಾಲತ್‌ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ನ್ಯಾಯಾಧೀಶ ರೋಣ್ ವಾಸುದೇವ್ ಹೇಳಿದರು.

ಸರ್ವೋಚ್ಛ ನ್ಯಾಯಾಲಯದ ವಿಶೇಷ ಲೋಕ್-ಅದಾಲತ್ ಜುಲೈ 29 ರಿಂದ ಆಗಸ್ಟ್ 03 ವರೆಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಶೇಷ ಲೋಕ್-ಅದಾಲತ್ ನಡೆಯಲಿದೆ. ಇದರಲ್ಲಿ 606 ಪ್ರಕರಣಗಳನ್ನು ಇತ್ಯರ್ಥಕ್ಕೆ ಕೈಗೊತ್ತಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ 19 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಸರ್ವೋಚ್ಛ ನ್ಯಾಯಾಲಯ ಗುರುತಿಸಿದೆ.

ಈ ಪ್ರಕರಣಗಳ ಕಕ್ಷಿದಾರರು ಅದಾಲತ್ ಕಲಾಪದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪ್ರಕರಣಗಳ ಪಟ್ಟಿಯ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಲಭ್ಯವಿದೆ. ಪ್ರಕರಣದ ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್ ಕೇಂದ್ರಗಳಿಗೆ ಭೇಟಿ ನೀಡಿ ಇದರ ಸದುಯೋಗ ಪಡಿಸಿಕೊಂಡು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ನ್ಯಾಯಾಧೀಶ ರೋಣ್ ವಾಸುದೇವ್ ಕೋರಿದ್ದಾರೆ.

ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ ಇ-ಮೇಲ್  dlsachitradurga1@gmail.com  ಹಾಗೂ ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊಬೈಲ್ ಸಂಖ್ಯೆ 9141193935 ಹಾಗೂ ದೂರವಾಣಿ ಸಂಖ್ಯೆ 08194- 222322 ಕ್ಕೆ ಸಹ ಸಂಪರ್ಕಿಸಬಹುದು.

Advertisement
Tags :
Advertisement