ಚಿತ್ರದುರ್ಗ | ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : ನಾಲ್ವರು ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 28 ಸಾಧಕರನ್ನು ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ವಿಶೇಷವಾಗಿ ಮಾಧ್ಯಮ ಕ್ಷೇತ್ರದ ಜಿಲ್ಲೆಯ ನಾಲ್ವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ಹರಿಯಬ್ಬೆ ಹೆಂಜಾರಪ್ಪ, ತಿಪ್ಪೇಸ್ವಾಮಿ ಎನ್. ನಾಕೀಕೆರೆ, ಕಿರಣ್ ಕುಮಾರ್ ಎಲ್. ತೊಡರನಾಳ್ ಮತ್ತು ರಾಜಶೇಖರ್ ಬೇಡರರೆಡ್ಡಿಹಳ್ಳಿ ಅವರು ಮಾಧ್ಯಮ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಸಮಿತಿಯು ಈ ಆಯ್ಕೆ ಮಾಡಿದ್ದು, ಸಾಧಕರಿಗೆ ನವೆಂಬರ್ 01 ರಂದು ಬೆಳಿಗ್ಗೆ 09 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಸಾಧಕರ ವಿವರ : ಹರಿಯಬ್ಬೆ ಹೆಂಜಾರಪ್ಪ
ಹರಿಯಬ್ಬೆ ಹೆಂಜಾರಪ್ಪ : ಹಿರಿಯೂರು ತಾಲೂಕು ಹರಿಯಬ್ಬೆ ಗ್ರಾಮದ ಹೆಂಜಾರಪ್ಪ ತಮ್ಮ ಹೆಸರಿನ ಜತೆಗೆ ಹುಟ್ಟೂರು ಹರಿಯಬ್ಬೆ ಹೆಸರನ್ನಿಟ್ಟುಕೊಂಡು ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ವರದಿಗಳ ಮೂಲಕ ಗಮನಸೆಳೆದವರು. ಕೃಷಿಕ ಕುಟುಂಬದ ಹೆಂಜಾರಪ್ಪ ಶ್ರಮಜೀವಿ. ಸದಾ ಲವಲವಿಕೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಓಡಾಡುವ ಅಪರೂಪದ ವ್ಯಕ್ತಿ. ಹಿರಿಯೂರು ತಾಲೂಕಿನಲ್ಲಿ ಹತ್ತಾರು ವರ್ಷ ಕನ್ನಡಪ್ರಭ, ಚಿತ್ರದುರ್ಗ ಜಿಲ್ಲಾಮಟ್ಟದಲ್ಲಿ ಉದಯವಾಣಿ ಹಾಗೂ ಪ್ರಸ್ತುತ ಚಂದ್ರವಳ್ಳಿ ಪತ್ರಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ಭದ್ರಾ ಮೇಲ್ದಂಡೆ ಸೇರಿ ವಿವಿಧ ಯೋಜನೆ, ಕಾಮಗಾರಿಗಳ ಕುರಿತು ಸರಣಿ ವರದಿ ಬರೆದು ಗಮನಸೆಳೆದ ವಿಶೇಷ ವ್ಯಕ್ತಿಯಾಗಿದ್ದಾರೆ. ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ತಿಪ್ಪೇಸ್ವಾಮಿ ಎನ್. ನಾಕೀಕೆರೆ : ಹೊಸದುರ್ಗ ತಾಲೂಕು ನಾಕೀಕೆರೆ ಗ್ರಾಮದ ಕೃಷಿಕ ಕುಟುಂಬದ ತಿಪ್ಪೇಸ್ವಾಮಿ, ನಾಕೀಕೆರೆ ತಿಪ್ಪೇಸ್ವಾಮಿ ಎಂದೇ ಚಿರಪರಿಚಿತರು. ಹೊಸದಿಗಂತ ಪತ್ರಿಕೆ ಜಿಲ್ಲಾ ವರದಿಗಾರರಾಗಿ ಮಾಧ್ಯಮ ಕ್ಷೇತ್ರ ಪ್ರವೇಶಿಸಿದ ತಿಪ್ಪೇಸ್ವಾಮಿ, ಬಳಿಕ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ಟಿವಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು. ಪ್ರಸ್ತುತ ಉದಯವಾಣಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಚಟುವಟಿಕೆ ಮೂಲಕ ಸದಾ ಚಟುವಟಿಕೆಯಿಂದಿರುವ ತಿಪ್ಪೇಸ್ವಾಮಿ, ಸದಾ ಹಸನ್ಮುಖಿಯಾಗಿ, ಎಲ್ಲರೊಂದಿಗೆ ಬೆರೆತು ಉತ್ತಮ ಬಾಂಧವ್ಯ ಹೊಂದಿರುವ ಸ್ನೇಹಜೀವಿ, ಎಲ್ಲರನ್ನೂ ಪ್ರೀತಿಸುವ ಯುವ ಪತ್ರಕರ್ತ ಎಂದೇ ಪ್ರೀತಿ ಗಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಿರಣ್ ಎಲ್. ತೊಡರನಾಳ್ : ಹೊಳಲ್ಕೆರೆ ತಾಲೂಕು ತೊಡರನಾಳ್ ಗ್ರಾಮದ ಎಲ್. ಕಿರಣ್, ತಮ್ಮ ಹೆಸರಿನೊಂದಿಗೆ ತೊಡರನಾಳ್ ಗ್ರಾಮದ ಹೆಸರನ್ನಿಟ್ಟುಕೊಂಡು ಗ್ರಾಮದ ಗೌರವವನ್ನು ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿಸುತ್ತಿರುವ ಯುವ ಪತ್ರಕರ್ತ. ಬೆಂಗಳೂರಿನಲ್ಲಿ ರಾಜ್ ಟಿವಿ ವರದಿಗರಾಗಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಬಳಿಕ ಸುವರ್ಣ ಟಿವಿ ಬೆಂಗಳೂರು ಕಚೇರಿಯಲ್ಲಿ ಕೆಲಸ ನಿರ್ವಹಿಸಿ, ಅಲ್ಲಿನ ಹಿರಿಯರ ಮೆಚ್ಚುಗೆ ಗಳಿಸಿ ಚಿತ್ರದುರ್ಗ ಜಿಲ್ಲಾ ವರದಿಗಾರರಾಗಿ ನೇಮಕಗೊಂಡವರು. ಚಿತ್ರದುರ್ಗ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಿಚ್ಚಿಟ್ಟು ಬಗೆಹರಿಸುವ ಕೆಲಸ ಮಾಡಿದವರು. ಸದಾ ಹಸನ್ಮುಖಿ ಆಗಿ ಎದುರುಗೊಳ್ಳುವ ಕಿರಣ್, ಮಾಧ್ಯಮ ಕ್ಷೇತ್ರದಲ್ಲಿ ಎಲ್ಲರನ್ನೂ ಗೌರವಿಸುತ್ತ ಪ್ರೀತಿ ಗಳಿಸಿದ ವ್ಯಕ್ತಿ.
ರಾಜಶೇಖರ್ :
ರಾಜಶೇಖರ್ : ಒಂದು ಕಾಲದಲಿ ಎಣ್ಣೆನಗರಿ ಎಂದೇ ಖ್ಯಾತಿ ಗಳಿಸಿದ್ದ, ಪ್ರಸ್ತುತ ಸೈನ್ಸ್ ಸಿಟಿ ಗರಿ ಮುಡಿದುಕೊಂಡಿರುವ ಚಳ್ಳಕೆರೆ ತಾಲೂಕು ತಳಕು ಹೋಬಳಿಯ ಬೇಡರರೆಡ್ಡಿಹಳ್ಳಿಯ ಕೃಷಿಕ ಕುಟುಂಬದ ರಾಜಶೇಖರ್, ರಾಜ್ ಟಿವಿ ಮೂಲಕ ಮಾಧ್ಯಮ ಕ್ಷೇತ್ರ ಪ್ರವೇಶಿಸಿದ ಯುವಕ. ಜಿಲ್ಲೆಯಲ್ಲಿ ರಾಜು ಎಂದೇ ಚಿರಪರಿಚಿತ. ಸದಾ ಕೆಲಸದಲ್ಲಿ ತಲ್ಲೀನರಾಗಿರುವ ರಾಜು, ಟಿವಿ ಮಾಧ್ಯಮದಲ್ಲಿ ಸುದ್ದಿಯನ್ನು ಬ್ರೇಕ್ ಮಾಡಲು ಹವಣಿಸುವ ಯುವ ಪತ್ರಕರ್ತ. ಅನೇಕ ತನಿಖಾ ವರದಿಗಳ ಮೂಲಕ ಗಮನಸೆಳೆದಿರುವ ರಾಜು ಸೇರಿ ನಾಲ್ವರು ಪತ್ರಕರ್ತರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯ ಗೌರವದ ಗರಿ ಲಭಿಸಿರುವುದು ಮಾಧ್ಯಮ ಕ್ಷೇತ್ರದ ಘನತೆಯನ್ನು ಹೆಚ್ಚಿಸಿದೆ. ಅನೇಕ ಗಣ್ಯರು, ಸ್ನೇಹಿತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕಾರಣಿಗಳು, ಮಠಾಧೀಶರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.