ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತಾ ಚೂಡಾಮಣಿ ಮಾತಾಜಿರವರ ಪುಣ್ಯಾರಾಧನೆ ಹಾಗೂ ರಥೋತ್ಸವ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 21 : ಮೆದೆಹಳ್ಳಿ ರಸ್ತೆಯಲ್ಲಿರುವ ಶಾಂತಾರಾಮ ತೀರ್ಥಾಶ್ರಮದಲ್ಲಿ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತಾ ಚೂಡಾಮಣಿ ಮಾತಾಜಿರವರ ಪುಣ್ಯಾರಾಧನೆ ಹಾಗೂ ರಥೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೃಹಧಾಕಾರದ ಹೂವಿನ ಹಾರ, ಬಾಳೆಕಂಬ, ಬಣ್ಣ ಬಣ್ಣದ ಭಾವುಟ, ಹೊಂಬಾಳೆಯಿಂದ ರಥವನ್ನು ಅಲಂಕರಿಸಲಾಗಿತ್ತು. ಆಶ್ರಮದ ಆವರಣದಲ್ಲಿ ನೆರದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಮೂರು ಸುತ್ತು ರಥೋತ್ಸವ ಸಾಗಿತು. ಡೊಳ್ಳು, ತಮಟೆ, ನಂದಿಕೋಲು, ಛತ್ರಿ ಚಾಮರಗಳು ರಥೋತ್ಸವದಲ್ಲಿ ವಿಜೃಂಭಿಸುತ್ತಿತ್ತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಕೂಡ ರಥೋತ್ಸವದಲ್ಲಿ ಪಾಲ್ಗೊಂಡು ಕೀರ್ತನೆಗಳನ್ನು ಹಾಡುತ್ತಿದ್ದರು.
ರಥೋತ್ಸವದಲ್ಲಿ ಭಕ್ತರು ಕುಣಿದು ಕುಪ್ಪಳಿಸುತ್ತ ಭಕ್ತಿ ಸಮರ್ಪಿಸಿದರೆ ಕೆಲವರು ಚಿಕ್ಕ ಚಿಕ್ಕ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ರಥೋತ್ಸವದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಗುರುಪೂಜೆ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.
ಆಶ್ರಮದ ಗುರುಗಳಾದ ಪ್ರಹ್ಲಾದ್‍ಸ್ವಾಮಿ, ರಾಮತೀರ್ಥಾಶ್ರಮದ ಟ್ರಸ್ಟ್ ನ ಸದಸ್ಯರುಗಳಾದ ಗಿರೀಶ್, ಎನ್.ಜೆ.ದೇವರಾಜರೆಡ್ಡಿ ಇವರುಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.ಪ್ರಧಾನ ಅರ್ಚಕ ಸತೀಶ್‍ಸ್ವಾಮಿ ಹೋಮ ಹವನಾಧಿಗಳನ್ನು ನೆರವೇರಿಸಿದರು.
ರಥೋತ್ಸವದ ಮುಕ್ತಿ ಭಾವುಟವನ್ನು ಚಿತ್ರದುರ್ಗದ ಹೂವಿನ ಅಂಗಡಿ ಕಾಂತಣ್ಣ ಮೂರು ಲಕ್ಷದ ಹತ್ತು ಸಾವಿರ ರೂ.ಗಳಿಗೆ ಪಡೆದುಕೊಂಡರು. ರಥೋತ್ಸವದ ಮೊದಲನೆ ಹಾರವನ್ನು ಬೊಮ್ಮೇನಹಳ್ಳಿಯ ವಕೀಲ ಶ್ರೀನಿವಾಸ್ ಎಂಬತ್ತು ಸಾವಿರ ರೂ.ಗಳಿಗೆ ಪಡೆದರು.
ಮಾತಾಜಿ ಅಮ್ಮನವರ ಹಾರವನ್ನು ಬಸವರಾಜಪ್ಪ ಕಡ್ಲೆಗುದ್ದು ಇವರು ಇಪ್ಪತ್ತೈದು ಸಾವಿರ ರೂ.ಗಳಿಗೆ ಪಡೆದುಕೊಂಡರು. ಮಹಾರಥೋತ್ಸವದ ದೊಡ್ಡ ಹಾರವನ್ನು ಅಲುಮೇಲು ಶ್ರೀನಿವಾಸ್‍ರವರು ಒಂದು ಲಕ್ಷ ರೂ.ಗಳಿಗೆ ಪಡೆದುಕೊಂಡರು.