ಚಿತ್ರದುರ್ಗ | ಬೆಳೆ ಪರಿಹಾರ ಒತ್ತಾಯಿಸಿ ಪ್ರತಿಭಟನೆ : ರೈತರು - ಪೊಲೀಸರ ನಡುವೆ ವಾಗ್ವಾದ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಅತಿವೃಷ್ಟಿಗೆ ಮುಂಗಾರು ಬೆಳೆ ನಾಶವಾಗಿರುವುದರಿಂದ ಬೆಳೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಗಂಟೆಗಟ್ಟಲೆ ಪ್ರತಿಭಟನೆ ನಡೆಸಿ ಕೊನೆಗೆ ಜಿಲ್ಲಾಧಿಕಾರಿಗಳು ಬಂದು ಮನವಿ ಸ್ವೀಕರಿಸಲಿಲ್ಲ ಎಂದು ರೊಚ್ಚಿಗೆದ್ದು ಜಿಲ್ಲಾಧಿಕಾರಿ ಸಭಾಂಗಣದೊಳಗೆ ನುಗ್ಗಲು ಯತ್ನಿಸಿದಾಗ ರೈತರು ಪೋಲಿಸರೊಡನೆ ಕೆಲವು ಕಾಲ ವಾಗ್ವಾದ ನಡೆಸಿದರು.
ಕೃಷಿ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದ ರೈತರು ಏಕಾಏಕಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಹೊರಟಾಗ ಪೊಲೀಸರು ತಡೆದಿದ್ದರಿಂದ ಪ್ರತಿಭಟನಾನಿರತ ರೈತರು ವಾದ-ವಿವಾದದಲ್ಲಿ ತೊಡಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಐವತ್ತು ಲಕ್ಷ ಕೋಟಿ ರೂ.ಗಳನ್ನು ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿರುವ ಪ್ರಧಾನಿ ನರೇಂದ್ರಮೋದಿಗೆ ರೈತರ ಸಾಲ ಮನ್ನ ಮಾಡಲು ಏಕೆ ಆಗುತ್ತಿಲ್ಲ. ಪ್ರತಿ ವರ್ಷವೂ ಅತಿವೃಷ್ಟಿ ಅನಾವೃಷ್ಟಿಯಿಂದ ರೈತರ
ಬೆಳೆಗಳು ನಾಶವಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಮೊದಲಿನಿಂದಲೂ ನಿರ್ಲಕ್ಷಿಸುತ್ತ ಬರುತ್ತಿವೆ. ಪ್ರತಿ ವರ್ಷವೂ ರೈತರಿಗೆ ಬೆಳೆವಿಮೆ ಹಾಗೂ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುತ್ತ ಈ ವರ್ಷ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್‍ನಲ್ಲಿ ಬೆಳೆದಿರುವ ಈರುಳ್ಳಿ ಅತಿಯಾದ ಮಳೆಯಿಂದ ಕೊಳೆತಿದೆ. ಒಂದು ಎಕರೆ ಈರುಳ್ಳಿ ಬೆಳೆಯಲು ಎಪ್ಪತ್ತು ಸಾವಿರ ರೂ.ಗಳ ವೆಚ್ಚವಾಗುತ್ತದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೆ ಸಮೀಕ್ಷೆ ನಡೆಸಿ ಈರುಳ್ಳಿ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಒಂದು ಎಕರೆಗೆ ಐವತ್ತು ಸಾವಿರ ರೂ.ಗಳ ಪರಿಹಾರ ನೀಡಿ ಬೆಳೆ ವಿಮೆ ಪಾವತಿಸಿರುವ ರೈತರಿಗೆ ವಿಮೆ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ರೈತ ಮುಖಂಡರುಗಳಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಿ.ಓ.ಶಿವಕುಮಾರ್, ಎಸ್.ಮಂಜುನಾಥ್, ಎಂ.ಬಿ.ತಿಪ್ಪೇಸ್ವಾಮಿ, ಆರ್.ಚೇತನ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.