ಚಿತ್ರದುರ್ಗ | ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕೊಳಗೇರಿ ನಿವಾಸಿಗಳ ಪ್ರತಿಭಟನೆ
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 12 : ವಿಜಯನಗರ ಬಡಾವಣೆಯನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಿದ್ದರೂ ಇದುವರೆವಿಗೂ ಹಕ್ಕುಪತ್ರ ನೀಡಿಲ್ಲ. ನಗರಸಭೆಯವರು ಪದೆ ಪದೆ ಅಲ್ಲಿಗೆ ತೆರಳಿ ಮನೆಗಳನ್ನು ತೆರವುಗೊಳಿಸುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ನಗರದಲ್ಲಿರುವ ಕೆಲವು ಕೊಳಚೆ ಪ್ರದೇಶಗಳಲ್ಲಿ ಸರ್ವೆ ನಡೆಸಿ ಹಕ್ಕುಪತ್ರಗಳನ್ನು ನೀಡಲಾಗಿದೆ. ವಿಜಯನಗರ ಬಡಾವಣೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹಲವಾರು ವರ್ಷಗಳಿಂದಲೂ ವಾಸಿಸುತ್ತಿದ್ದರು ಇನ್ನು ಹಕ್ಕುಪತ್ರಗಳನ್ನು ನೀಡಿಲ್ಲ. ಮನೆಗಳನ್ನು ಖಾಲಿ ಮಾಡುವಂತೆ ನಗರಸಭೆಯವರು ಒತ್ತಡ ಹಾಕುತ್ತಿದ್ದಾರೆ. ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಸರ್ವೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಬೇಕು. ಬದಲಿ ಜಾಗದ ವ್ಯವಸ್ಥೆ ಮಾಡುವವರೆಗೂ ಕಿರುಕುಳ ನೀಡಬಾರದೆಂದು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡುವಂತೆ ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್, ಇಮಾಂಸಾಬ್, ಮೈಲಾರಪ್ಪ, ವಜೀರ್, ರಜಿಯಾಬಿ, ಮಾರಕ್ಕ, ಅಸ್ಲಂ, ಮೆಹಬೂಬಿ ನೂರುಲ್ಲಾ, ಕುಮಾರ, ಕಿರಣ್, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಮಂಜುನಾಥ್ ತಾಳಿಕೆರೆ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.