ಚಿತ್ರದುರ್ಗ : ಕೇಂದ್ರ, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ರೈತ ಸಂಘಟನೆಗಳಿಂದ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜ. 26 : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಜಿಲ್ಲೆ ಶಾಖೆವತಿಯಿಂದ ರಾಜ್ಯ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿಗಾಗಿ ಪರ್ಯಾಯ ನೀತಿಗಳಿಗಾಗಿ ಒತ್ತಾಯಿಸಿ ಬೈಕ್ ರ್ಯಾಲಿಯನ್ನು ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು.
ಕನಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಬೈಕ್ ಪೆರೇಡ್ ನಡೆಸಿದ ರೈತ ಸಂಘದ ಪದಾದಿಕಾರಿಗಳು, 2020ರ ಕೊರೊನಾ ಲಾಕ್‍ಡೌನ್ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ 3ಕೃಷಿ ಕಾಯ್ದೆಗಳನ್ನು ರೈತರು ದೆಹಲಿಯಲ್ಲಿ 3 ತಿಂಗಳುಗಳ ಕಾಲ ಬೀಡು ಬಿಟ್ಟು ನಡೆಸಿದ ಐತಿಹಾಸಿಕ ಹೋರಾಟದ ಪರಿಣಾಮ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಾಸ್ಸು ಪಡೆಯಿತು. ಆದರೆ ರೈತರ ಉಳಿದ ಹಕ್ಕೋತ್ತಾಯಗಳಾದ ಕನಿಷ್ಠ ಬೆಂಬಲ ಬೆಲೆ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದು ಪಡಿಸುವುದು, ದೆಹಲಿಯ ರೈತ ಹೋರಾಟದ ಸಂಧರ್ಭದಲ್ಲಿ ರೈತರ ಮೇಲೆ ಹಾಕಿರುವ ಕೇಸುಗಳನ್ನು ವಾಪಾಸ್ಸು ಪಡೆಯುವುದು ಇನ್ನೂ ಮುಂತಾದ ವಿಷಯಗಳಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ತಿಳಿಸಿದರು.
2014ರ ಸಾರ್ವತ್ರಿಕ ಚುನಾವಣೆ ಸಂಧರ್ಭದಲ್ಲಿ ಈಗಿನ ಕೇಂದ್ರ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ, ಡಾ. ಸ್ವಾಮಿನಾಥನ್‍ರವರ ವರದಿಯ ಪ್ರಕಾರ ರೈತರ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಲಾಭಾಂಶ ಸೇರಿಸಿ ಎಂ.ಎಸ್.ಪಿ ನೀಡುವುದಾಗಿ ಮತ್ತು ನದಿ ಜೋಡಣೆ ಮಾಡಿ ನೀರಾವರಿ ಸೌಲಭ್ಯವನ್ನು ವಿಸ್ತರಿಸುವುದಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಅದರೆ ಇಲ್ಲಿಯವರೆಗೂ ಇದು ಸಾಧ್ಯವಾಗಿಲ್ಲ ಅಲ್ಲದೇ 2014ರಿಂದ ಇದುವರೆಗೆ ಮಂಡಿಸಿರುವ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಕೃಷಿಗೆ, ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಮೂಲಸೌಕರ್ಯಕ್ಕೆ-ಅರೋಗ್ಯ-ಶಿಕ್ಷಣ-ನೈರ್ಮಲ್ಯ, ಉದ್ಯೋಗ ಖಾತ್ರಿ, ಕೃಷಿ ಉತ್ಪನ್ನಗಳ ಖರೀದಿಗೆ ಮುಂತಾದ ವಲಯಗಳಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ನಿರಂತರವಾಗಿ ಕಡಿತ ಮಾಡಿಕೊಂಡು ಬಂದಿದೆ ಎಂದು ದೂರಿದರು.
ಈಗಾಗಲೇ ವಿಶ್ವವಾಣಿಜ್ಯ ಒಪ್ಪಂದದ ಷರತ್ತುಗಳಿಂದ ಆಗ್ನೆಯ ಏಷ್ಯಾ ದೇಶಗಳ ಜೊತೆ, ಅಸ್ಟ್ರೇಲಿಯಾ, ಯೂರೋಪ್ ದೇಶಗಳ ಜೊತೆಮುಕ್ತ ವ್ಯಾಪಾರ ಒಪ್ಪಂದಗಳು ಅಮದು ನೀತಿಗಳಿಂದ ತೆಂಗು, ಅಡಿಕೆ, ಕಾಫಿ, ಮೆಣಸು, ರಬ್ಬರ್, ಹಾಲು, ದ್ರಾಕ್ಷಿ, ಶೇಂಗಾ, ಸೂರ್ಯಕಾಂತಿ ಮುಂತಾದ ಎಣ್ಣೆ ಕಾಳುಗಳು ಅಮದಾಗುತ್ತಿದ್ದು, ನಮ್ಮ ದೇಶದ ರೈತರ ಬೆಳೆಗಳ ಬೆಲೆ ಕುಸಿತವಾಗಿದೆ. ಬರಗಾಲದಿಂದ ತತ್ತರಿಸಿ ಹಳ್ಳಿಯ ರೈತರು, ಕಾರ್ಮಿಕರು ಗುಳಿ ಹೋಗುತ್ತಿದ್ದಾರೆ. ಫಸಲ್ ಭೀಮಾ ಯೋಜನೆಯು ರೈತರಿಗೆ ಪ್ರಯೋಜನಕಾರಿಯಾಗದೆ. ಕಂಪನಿಗಳಿಗೆ ಲಾಭದಾಯಕವಾಗಿದೆ. ರೈತರ ಕೃಷಿ ಪಂಪ್‍ಸೆಟ್ ಗಳಿಗೆ ಮೀಟರ್ಗಳನ್ನ ಅಳವಡಿಸಲು ವಿದ್ಯುತ್ ತಿದ್ದುಪಡಿ ಮಸೂದೆ 2022ನ್ನು ಸಂಸತ್ತಿನಲ್ಲಿ ಮಂಡಿಸಿದೆ. ರಸಗೊಬ್ಬರದ ಸಬ್ಸಿಡಿಯನ್ನು ಕಡಿತ ಮಾಡಿ ಬೆಲೆಯನ್ನು ಏರಿಕೆ ಮಾಡಿದೆ. ಸರ್ಕಾರದ ಈ ರೀತಿ ಧೋರಣೆಗಳಿಂದಾಗಿ ರೈತರ ಸಾಲಭಾದ ಹೆಚ್ಚಾಗಿ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದ ಭೂಸುಧಾರಣಾ ಕಾಯ್ದೆ ಎ.ಪಿ.ಎಂ.ಸಿ ಕಾಯ್ದೆ ಹಿಂಪಡೆಯವುದು, ರೈತರ ಐ.ಪಿ ಸೆಟ್ ಗಳಿಗೆ ರೈತರೇ ಸ್ವಯಂ ಆರ್ಥಿಕ ವೆಚ್ಚದಲ್ಲಿ ಸಂಪರ್ಕ ಪಡೆಯುವ ಯೋಜನೆ ರದ್ದುಪಡಿಸುವುದು, ದಿನಕ್ಕೆ 7ಗಂಟೆ ಸಮರ್ಪಕ ವಿದ್ಯುತ್ ಕೊಡುವುದು, ಮನೆ ಮೀಟರ್ ವಾಪಾಸ್ಸು ಕೊಟ್ಟ ಸಂದರ್ಭದ ವಿದ್ಯುತ್ ಬಾಕಿ ಹಣ ಮನ್ನಾ ಮಾಡುವುದು, ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ವಿದ್ಯುತ್ ಚ್ಛಕ್ತಿ ಸಂಪರ್ಕ ಪಡೆದ ಐ.ಪಿ ಸಬ್‍ನವರಿಗೆ ಕಂಬ, ತಂತಿ, ಟ್ರಾನ್ಸ್‍ಫಾರ್ಮರ್ ಮೂಲ ಸೌಕರ್ಯಗಳನ್ನು ಒದಗಿಸಲು 4 ಸಾವಿರ ಕೋಟಿ ರೂ.ಗಳನ್ನು ಟೆಂಡರ್ ಕರೆದು ಶೀಘ್ರವೇ ಕೆಲಸ ಮಾಡಿಸುವುದಾಗಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನಲ್ಲಿ ಸಾಲ ಪಡೆದ ರೈತರು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದು ಮತ್ತು ಬರಗಾಲದ ಹಿನ್ನಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಹಣಕಾಸು ಸಂಸ್ಥೆಯವರು, ಸಹಕಾರಿ ಸೊಸೈಟಿಗಳು ಸಾಲ ವಸೂಲಾತಿ ಆದೇಶವನ್ನು ತಡೆಯುವುದು, ವಸೂಲಾತಿಗಾಗಿ ತಿರುಕುಳ ಮಾಡಬಾರದೆಂದು ಆದೇಶ ಹೊರಡಿಸುವುದಾಗಿ ತಿಳಿಸಿದರು.
ಬರಗಾಲವಾದ್ದರಿಂದ ಟ್ರಾಕ್ಟರ್ ಸೇರಿದಂತೆ ರೈತರ ಎಲ್ಲಾ ಸಾಲ ಮನ್ನಾ ಮಾಡುವುದು, ಟ್ರಾಕ್ಟರ್ ಖರೀದಿಸಲು ಬಡ್ಡಿ ರಹಿತವಾಗಿ ಸಾಲ ನೀಡುವುದು ಮತ್ತು ಮೀನುಗಾರರಿಗೆ ಕೊಬ್ಬಂತೆ ರೈತರ ಟ್ರಾಕ್ಟರ್‍ಗಳಿಗೆ ಡೀಸೆಲ್ ಸಬ್ಸಿಡಿ ನೀಡುವುದು, ಬಗರ್ ಹುಕ್ಕುಂ ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡುವುದು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟೆ ಸರ್ವೆ ಮಾಡಿಸುವುದು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ರಾಜ್ಯದ ಬರಗಾಲದ ಸಬ್ಸಿಡಿ ಹಣವನ್ನು ನೀಡುವುದಾಗಿ ಮತ್ತು ಕೆಲವು ಕಾರ್ಮಿಕ ಸಮಸ್ಯೆಗಳನ್ನು ಸಹ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಆದಷ್ಟು ಜಾಗ್ರತೆ ಭರವಸೆಗಳನ್ನ ಜಾರಿ ಮಾಡಿ ಆದೇಶ ಹೊರಡಿಸಬೇಕು. ಮತ್ತು ವಿದ್ಯುತ್ ಚ್ಛಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಬೇಕೆಂದು ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ. ನಿಜಲಿಂಗಪ್ಪ, ಜಿಲ್ಲಾಧ್ಯಕ್ಷ ಡಿಎಸ್‍ಹಳ್ಳಿ ಮಲ್ಲಿಕಾರ್ಜುನ್, ಈಚಘಟ್ಟದ ಸಿದ್ದವೀರಪ್ಪ, ಕರಿಯಪ್ಪ, ರುದ್ರಪ್ಪ ತಿಪ್ಪೇಸ್ವಾಮಿ, ಚಂದ್ರಣ್ಣ, ಹರಳಯ್ಯ, ಶಂಕರಪ್ಪ, ಚಿತ್ತಪ್ಪ, ಸತೀಸ್, ಸೇರಿದಂತೆ ಇತರರು ಭಾಗವಹಿಸಿದ್ದರು.