ಚಿತ್ರದುರ್ಗ | ಬಿ.ಡಿ.ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಬೇಡ : ಕೆಡಿಪಿ ಸಭೆಯಲ್ಲಿ ಪಾರ್ಕಿಂಗ್ ಮತ್ತು ಡಿವೈಡರ್ ಕುರಿತು ಏನೆಲ್ಲಾ ಚರ್ಚೆಯಾಯ್ತು ? ಇಲ್ಲಿದೆ ಮಾಹಿತಿ...!
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 14 : ಜಿಲ್ಲಾ ಕೇಂದ್ರದ ಮುಖ್ಯರಸ್ತೆಯಲ್ಲಿ ಫುಟ್‌ಪಾತ್ ಇಲ್ಲ. ಡಿವೈಡರ್ ಹಾಕಲಾಗಿದೆ. ಎತ್ತಿನ ಗಾಡಿ ಬಂದರೂ ಪಕ್ಕದಲ್ಲಿ ದಾರಿ ಇರುವುದಿಲ್ಲ. ಬಿ.ಡಿ.ರಸ್ತೆಯುದ್ದಕ್ಕೂ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಈ ರಸ್ತೆಯಲ್ಲಿ ವಾಹನ ನಿಲ್ಲಿಸುವುದು ಬೇಡ. ಹಳೇ ಮಾಧ್ಯಮಿಕ ಶಾಲಾ ಆವರಣ ಅಥವಾ ಬೇರೆ ಎಲ್ಲಾದರೂ ಜಾಗ ನಿಗಧಿ ಮಾಡಿ ಎಂದು ಕೆಡಿಪಿ ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಸದ್ಯದಲ್ಲೇ ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಿ ಪಾರ್ಕಿಂಗ್ ಸ್ಥಳ ಬದಲಾಯಿಸುತ್ತೇವೆ ಎಂದು ತಿಳಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ ತ್ರೈ ಮಾಸಿಕ ಕೆಡಿಪಿ ಹಾಗೂ 20 ಅಂಶಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ನಗರದ ಮಧ್ಯ ಭಾಗದಲ್ಲಿರುವ ಗಾಂಧಿ ವೃತ್ತದಲ್ಲಿರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಿ. ಒಳ್ಳೆಯ ಡಿಸೈನರ್ ಕರೆಯಿಸಿ ಸುಮಾರು ಒಂದು ಸಾವಿರ ವಾಹನಗಳನ್ನು ನಿಲ್ಲಿಸುವಷ್ಟು ಕಟ್ಟಡ ಮಾಡಿ, ಹಣ ಪಡೆದು ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಿ ಎಂದು ಸಲಹೆ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಕಳೆದ ಸಭೆಯಲ್ಲಿಯೇ ಒತ್ತುವರಿ ತೆರವು ಮಾಡಿ, ರಸ್ತೆ ಅಗಲೀಕರಣ ಮಾಡಲು ಸೂಚಿಸಲಾಗಿತ್ತು. ಆದರೆ, ಈವರೆಗೆ ಜೆಸಿಆರ್‌ನಲ್ಲಿ ಡಿವೈಡರ್ ಮಾತ್ರ ಒಡೆಯಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಚಳ್ಳಕೆರೆ ಗೇಟ್‌ನಲ್ಲಿ ವೃತ್ತ ನಿರ್ಮಾಣ ಆಸ್ಪತ್ರೆ ಮುಂಭಾಗದ ತುರುವನೂರು ರಸ್ತೆಯಲ್ಲೂ ಡಿವೈಡರ್ ತೆಗೆದು ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಿದರು. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇಲ್ಲದ ಕಟ್ಟಡಗಳನ್ನು ತೆರವು ಮಾಡಿ. ಗಾಂಧಿ ವೃತ್ತದಲ್ಲಿ ರಸ್ತೆಗೆ ಇರುವ ಕಟ್ಟಡ ತೆರವು ಮಾಡಿ ಎಂದು ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಿರೇಗುಂಟನೂರು ದಿಂಡದಹಳ್ಳಿ ಸರ್ವೆ.ನಂ 35 ಮತ್ತು 38 ರಲ್ಲಿ ದಾಸ್ತಾನು ಮಾಡಲಾಗಿರುವ ಕಬ್ಬಿಣದ ಅದಿರಿನ ಮೌಲ್ಯ ಹೆಚ್ಚಾಗಿದ್ದು, ಇದನ್ನು ಕಡಿಮೆ ಗುಣಮಟ್ಟದ ಅದಿರು ಎಂದು ಭಾವಿಸಿ, ಖಾಸಗಿ ಕಂಪನಿಗಳಿಗೆ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ಪಡೆದು, ಅದಿರು ಮಾರಾಟದ ವಹಿವಾಟನ್ನು ರದ್ದು ಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಣ್ಣ ಸೇರಿದಂತೆ ಕೆಡಿಪಿ ನಾಮನಿರ್ದೇಶಿತ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.