ಚಿತ್ರದುರ್ಗ | ನೂತನ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅಧಿಕಾರ ಸ್ವೀಕಾರ
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 18 : ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಭಾನುವಾರ ನಿರ್ಗಮಿತ ಎಸ್.ಪಿ. ಧರ್ಮೇಂದ್ರ ಕುಮಾರ್ ಮೀನಾ ಅವರಿಂದ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಎಸ್.ಪಿ. ಧರ್ಮೇಂದರ್ ಕುಮಾರ್ ಮೀನಾ ಅವರು,
ನವದೆಹಲಿಯ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ (NTRO) ಪೇ ಮ್ಯಾಟ್ರಿಕ್ಸ್ ನ ಹಂತ-12 ರಲ್ಲಿ ವಿಜ್ಞಾನಿ 'D' ಆಗಿ ನೇಮಕವಾಗಿದ್ದಾರೆ. ಜುಲೈ 30 ರಂದು ಭಾರತ ಸರ್ಕಾರದ ಕೇಂದ್ರ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು ವರ್ಗಾವಣೆ ಮಾಡಿ ಆದೇಶಿಸಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಎಸ್.ಪಿ, ರಂಜಿತ್ ಕುಮಾರ್ ಬಂಡಾರು ‘ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡಲಾಗುವುದು’ ಎಂದು ಹೇಳಿದರು.
ಈ ಮೊದಲು ಅವರು ಬಳ್ಳಾರಿ ಜಿಲ್ಲೆಯ ಎಸ್.ಪಿ ಆಗಿ,
ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದನಾ ನಿಗ್ರಹ ದಳದ ಎಸ್ಪಿಯಾಗಿದ್ದ ರಂಜಿತ್‌ಕುಮಾರ್ ಬಂಡಾರು ಅವರು ಮಂಗಳೂರು ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸಿದ್ದಾರೆ. ರಂಜಿತ್ ಕುಮಾರ್ ಅವರು 2017ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕರ್ನಾಟಕ ಕೇಡರ ಅಧಿಕಾರಿಯಾಗಿದ್ದಾರೆ. ಇವರು ಮೂಲತಃ ಆಂಧ್ರಪ್ರದೇಶ ಮೂಲದವರು.