ಚಿತ್ರದುರ್ಗ | ನೀಲಕಂಠೇಶ್ವರಸ್ವಾಮಿ ಮತ್ತು ಪಾತಾಳೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ಕಣ್ಣು ಕೋರೈಸುವಂತೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಬಗೆ ಬಗೆಯ ಹೂವು ಹಾರ, ಬಿಲ್ವಪತ್ರೆ ಹಾಗೂ ತುಳಸಿ ಮಾಲೆಯಿಂದ ಅಲಂಕರಿಸಿ ಪೂಜಿಸಲಾಯಿತು.
ಗಾಯತ್ರಿ ಭವನ ಸಮೀಪದಿಂದ ಸರತಿ ಸಾಲಿನಲ್ಲಿ ಬಂದು ಶಿವನ ದರ್ಶನ ಪಡೆಯಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿವರಾತ್ರಿಯ ಜಾಗರಣೆ ನಿಮಿತ್ತ ರಾತ್ರಿಯಲ್ಲಿ ಅತಿಯಾದ ರಷ್ ಇರುತ್ತದೆಂದು ಕೆಲವರು ಸಂಜೆಯೆ ದರ್ಶನ ಪಡೆದರು. ದೇವಸ್ಥಾನದ ಮುಂಭಾಗ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು.
ದೇವಸ್ಥಾನದ ಆಸುಪಾಸಿನಲ್ಲಿ ಬಿಲ್ವಪತ್ರೆ, ಹೂವು ಹಣ್ಣುಗಳ ಮಾರಾಟ ಬಿರುಸಿನಿಂದ ಕೂಡಿತ್ತು. ಮಹಿಳೆ, ಮಕ್ಕಳು, ವಯೋವೃದ್ದರಿಂದ ಹಿಡಿದು ಎಲ್ಲರೂ ದೇವಸ್ಥಾನದೊಳಗೆ ಸಾಲಿನಲ್ಲಿ ನಿಂತು ನೀಲಕಂಠೇಶ್ವನಿಗೆ ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು. ಕೆಲವರು ಮೊಬೈಲ್‍ಗಳಿಂದ ನೀಲಕಂಠೇಶ್ವರನ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಚಿತ್ರದುರ್ಗ : ಕೋಟೆ ರಸ್ತೆಯಲ್ಲಿರುವ ಪಾತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಬಗೆ ಬಗೆಯ ಹೂವು ಹಾಗೂ ಹಾರಗಳಿಂದ ಅಲಂಕರಿಸಿ ಪೂಜಿಸಲಾಯಿತು. ಸಂಜೆಯಾಗುತ್ತಿದ್ದಂತೆ ಮಧ್ಯರಾತ್ರಿಯವರೆಗೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಪಾತೇಳೇಶ್ವರನ ದರ್ಶನ ಪಡೆದರು.