ಚಿತ್ರದುರ್ಗ | ಡಿಸೆಂಬರ್ 15 ರಂದು ನಾಟ್ಯರಂಜನಿ ಹಬ್ಬ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 12 : ನಗರದ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಲಾ ಕೇಂದ್ರದ ರಜತ ಮಹೋತ್ಸವ -25, ನಾಟ್ಯರಂಜನಿ ಹಬ್ಬ -2024 ಕಾರ್ಯಕ್ರಮವನ್ನು ಡಿಸೆಂಬರ್ 15ರಂದು ತರಾಸು ರಂಗಮಂದಿರದಲ್ಲಿ ಸಂಜೆ 5:00 ಗಂಟೆಗೆ ಏರ್ಪಡಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗಭೂಷಣ್, ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಬೆಂಗಳೂರು ಕಾರ್ಯಾಧ್ಯಕ್ಷ ಆರ್.ಮಂಜುನಾಥ್, ಕ್ರಿಯೇಟಿವ್ ಸ್ಟುಡಿಯೋ ಚಿತ್ರ ಕಲಾವಿದ ಟಿಎಂ ವೀರೇಶ್, ಭಾರತ ಸ್ಕೌಟ್ ಅಂಡ್ ಗೈಡ್ ಜಿಲ್ಲಾ ಆಯುಕ್ತೆ ಎಲ್.ಸವಿತಾ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನಾಗಶ್ರೀ ಪ್ರಶಸ್ತಿಯನ್ನು ಎಂಎನ್ಕೆ ವಾದ್ಯವೃಂದದ ರಂಗ ಕಲಾವಿದ ಸಿ.ಕರಿಯಪ್ಪ ಹಾಗೂ ವಾದ್ಯ ಕಲಾನಿಧಿ ಪ್ರಶಸ್ತಿಯನ್ನು ಮೃದಂಗ ಕಲಾವಿದ ಹೆಚ್.ಎಂ.ರಾಘವೇಂದ್ರ ನೀಡಿ ಸನ್ಮಾನಿಸಿ ಗೌರವಿಸಲಾಗುವುದು.
ನಾಟ್ಯ ರಂಜನಿ ನೃತ್ಯ ಸಂಭ್ರಮ ಕಾರ್ಯಕ್ರಮ ನಿಮಿತ್ತ ಕಲಾತಂಡದವರಿಂದ ಶಿವನ ಸಪ್ತ ತಾಂಡವಗಳ ವಿಶೇಷ ನೃತ್ಯ ರೂಪಕ ಸಪ್ತ ತಾಂಡವ, ಕನ್ನಡ ಭಾವಗೀತೆಗಳ ಆಧಾರಿತ ವಿಶೇಷ ನೃತ್ಯ ರೂಪಕ ರಾಧಾಕೃಷ್ಣರ ವಿರಹಗಾಥೆ ರಾಧಾ ವಿರಹಂ ನಿರಂತರಂ, ನವಶಕ್ತಿ ವೈಭವ ಸೇರಿದಂತೆ ಭಾರತೀಯ ಸಾಂಸ್ಕೃತಿಕ ಕಲೆಗಳ ನೃತ್ಯ ವೈವಿಧ್ಯ ಕಾರ್ಯಕ್ರಮ ಕಲರ್ಸ್ ಆಫ್ ಇಂಡಿಯಾ ನೃತ್ಯಗಳನ್ನು ಏರ್ಪಡಿಸಲಾಗಿದೆ ಎಂದು ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.