ಚಿತ್ರದುರ್ಗ | ಮರದ ಕೊಂಬೆ ಬಿದ್ದು 24 ಗಂಟೆಯಾದರೂ ತೆರವುಗೊಳಿಸದ ನಗರಸಭೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 10 : ಜೆ.ಸಿ.ಆರ್. ಬಡಾವಣೆಯ ನಾಲ್ಕನೇ ಕ್ರಾಸ್‍ನಲ್ಲಿ ಬುಧವಾರ ಸಂಜೆ ಸುರಿದ ಮಳೆ ಮತ್ತು ಗಾಳಿಗೆ ದೊಡ್ಡ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಶುಕ್ರವಾರ ಬೆಳಿಗ್ಗೆಯಾದರೂ ತೆರವುಗೊಳಿಸುವ ಕಾರ್ಯ ಆಗದೇ, ಸಂಚಾರಕ್ಕೆ ಅಡಚಣೆಯಾಗಿದೆ.
ಜಿ ಸೆವೆನ್ ಮಾರ್ಟ್ ಪಕ್ಕದ ರಸ್ತೆಯಲ್ಲಿರುವ ಮರಳುಸಿದ್ದೇಶ್ವರ ನಿಲಯದ ಮನೆಯ ಮುಂಭಾಗದಲ್ಲಿರುವ ಬೃಹದಾಕಾರವಾದ ಮರದ ದೊಡ್ಡ ಕೊಂಬೆಯು ಗಾಳಿಗೆ ಮುರಿದು ಬಿದ್ದ ಸಂದರ್ಭದಲ್ಲಿ ಅಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಅಕ್ಕಪಕ್ಕದವರು ನಗರಸಭೆಯವರಿಗೆ ಮಾಹಿತಿ ನೀಡಿದ್ದರೂ ತೆರವುಗೊಳಿಸುವ ಕೆಲಸವಾಗಿಲ್ಲ. ದ್ವಿಚಕ್ರ ವಾಹನೊಂದು ಬಿಟ್ಟರೆ ಬೇರೆ ಯಾವ ವಾಹನವೂ ಸಂಚರಿಸಲು ಜಾಗವಿಲ್ಲ. ದಿನವಿಡೀ ರಸ್ತೆ ಬಂದ್ ಆಗಿತ್ತು. ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಸಂಕಷ್ಟ ತೋಡಿಕೊಂಡರು. ಇಂದಾದರೂ ತೆರವುಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.