ಚಿತ್ರದುರ್ಗ ಲೋಕಸಭಾ ಚುನಾವಣೆ : ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ : ಡಾ.ಬಿ.ತಿಪ್ಪೇಸ್ವಾಮಿ ಅಭಿಮಾನಿಗಳಿಂದ ಪೂರ್ವಭಾವಿಸಭೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.01: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ಬೇಡ. ಸ್ಥಳೀಯರಿಗೆ ಟಿಕೇಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯಿಸುವುದಕ್ಕಾಗಿ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುವ ಕುರಿತು ಕಾಂಗ್ರೆಸ್ ಮುಖಂಡ ಜೆಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಅಭಿಮಾನಿಗಳಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಇಲ್ಲಿಯವರೆಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಹೊರಗಿನವರ ಪಾಲಾಗುತ್ತ ಬರುತ್ತಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮುಖಂಡ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ನೀಡುವಂತೆ ಪ್ರತಿ ಹಳ್ಳಿ ಹಾಗೂ ಹೋಬಳಿ ಮಟ್ಟದಲ್ಲಿ ಪಾದಯಾತ್ರೆ ನಡೆಸಿ ಮತದಾರರನ್ನು ಜಾಗೃತಿಗೊಳಿಸಬೇಕಿದೆ ಎಂದು ಹೇಳಿದರು.
ತುರುವನೂರು ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್.ಮಂಜುನಾಥ್ ಮಾತನಾಡಿ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಬರುವ ಎಂಟು ಕ್ಷೇತಗಳಲ್ಲಿ ಪಾದಯಾತ್ರೆ ನಡೆಸಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಡಾ.ಬಿ.ತಿಪ್ಪೇಸ್ವಾಮಿಗೆ ಮತ ನೀಡಿ ಪಾರ್ಲಿಮೆಂಟ್‍ಗೆ ಕಳಿಸಿಕೊಡುವಂತೆ ಜನತೆಯಲ್ಲಿ ಮನವಿ ಮಾಡಲಾಗುವುದು ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಸ್ಪರ್ಧಾಕಾಂಕ್ಷಿ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಪಾದಯಾತ್ರೆ ಪೂರ್ವಭಾವಿ ಸಭೆ ಕುರಿತು ಮಾತನಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸ್ಥಳೀಯರಿಗೆ ಉಳಿಸಿಕೊಳ್ಳುವುದಕ್ಕಾಗಿ ಜ.5 ರ ನಂತರ ಪಾದಯಾತ್ರೆ ಮೂಲಕ ಹಳ್ಳಿ ಹಳ್ಳಿಗಳಿಗೆ ತಿರುಗಿ ಮತದಾರರನ್ನು ಜಾಗೃತಿಗೊಳಿಸಬೇಕಿದೆ. ಹೋಬಳಿಗಳಲ್ಲಿ ಏನು ಸಮಸ್ಯೆಗಳಿವೆ ಎನ್ನುವುದನ್ನು ಪಟ್ಟಿ ಮಾಡಿಕೊಂಡು ಜ.28 ರಂದು ಚಿತ್ರದುರ್ಗದಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸೋಣ. ಅದಕ್ಕಾಗಿ ಈಗಿನಿಂದಲೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ತಯಾರಿ ನಡೆಸಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಕರೆ ನೀಡಿದರು.
ಹೊರಗಿನವರು ಬಂದು ಇಲ್ಲಿ ಜನತೆಗೆ ಅಣ್ಣ ಅಪ್ಪ ಎಂದು ಕೈಮುಗಿದು ಮತ ಪಡೆದು ಗೆದ್ದ ನಂತರ ಮೋಸ ಮಾಡುತ್ತಿದ್ದಾರೆನ್ನುವುದು ಲೋಕಸಭಾ ಕ್ಷೇತ್ರದ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಗೊತ್ತಾಗಿದೆ. ಕ್ಷೇತ್ರದಲ್ಲಿ ಹದಿನೆಂಟು ಲಕ್ಷ ಮತದಾರರಿದ್ದಾರೆ. ಪಾದಯಾತ್ರೆಗೆ ಸಂಬಂಧಿಸಿದಂತೆ ತಂಡ ಸಿದ್ದವಾಗಬೇಕು. ಸ್ಥಳೀಯರಿಗೆ ಅದರಲ್ಲೂ ಮಾದಿಗರಿಗೆ ಟಿಕೇಟ್ ನೀಡಬೇಕೆಂದು ಕಾಂಗ್ರೆಸ್ ವರಿಷ್ಟರನ್ನು ಒತ್ತಾಯಿಸಿ ದಿನಕ್ಕೆ ಹತ್ತು ಕಿ.ಮೀ.ಪಾದಯಾತ್ರೆ ನಡೆಸೋಣ. ಅಲ್ಲಲ್ಲಿ ತಿಂಡಿ, ಊಟ, ವಸತಿ ವ್ಯವಸ್ಥೆ ಒದಗಿಸಲಾಗುವುದು. ಪಾದಯಾತ್ರೆಯಲ್ಲಿ ರೈತರು, ಕೃಷಿಕರು, ಕಾರ್ಮಿಕರು, ಬಡವರ ಸಮಸ್ಯೆಗಳನ್ನು ಪಟ್ಟಿಮಾಡೋಣ. ಕನಿಷ್ಟ ಒಂದು ಸಾವಿರ ಜನರಾದರೂ ಪಾದಯಾತ್ರೆಯಲ್ಲಿರಬೇಕೆಂದು ಹೇಳಿದರು.
ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಹಿರೇಗುಂಟನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶಣ್ಣ, ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೇಶವಣ್ಣ, ವಕೀಲರುಗಳಾದ ರುದ್ರಮುನಿ, ಮಹಲಿಂಗಪ್ಪ, ಕಾಸವರಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇಳೂರು ಪ್ರಕಾಶ್, ಹೊಟ್ಟೆಪ್ಪನಹಳ್ಳಿ ಷಣ್ಮುಖಪ್ಪ, ನಗರಂಗೆರೆ ರಂಗನಾಥ್, ಸ್ವಾಮಿ ಗುಡಿಹಳ್ಳಿ, ಮುನಿಯಪ್ಪ ತೋಪುರಮಾಳಿಗೆ, ಸುರೇಶ್ ಹಾಯ್ಕಲ್, ಮಲ್ಲಿ, ತಿಪ್ಪೇಶಿ, ಹೊನ್ನೂರ ಇನ್ನು ಅನೇಕರು ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.