For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಲೋಕಸಭಾ ಚುನಾವಣೆ :  ಏಪ್ರಿಲ್ 26 ರಂದು ಮತದಾನ : ಜಿಲ್ಲಾಡಳಿತದ ಸಿದ್ದತೆ ಹೇಗಿದೆ ?  ಇಲ್ಲಿದೆ ಸಂಪೂರ್ಣ ಮಾಹಿತಿ

08:23 PM Mar 16, 2024 IST | suddionenews
ಚಿತ್ರದುರ್ಗ ಲೋಕಸಭಾ ಚುನಾವಣೆ    ಏಪ್ರಿಲ್ 26 ರಂದು ಮತದಾನ   ಜಿಲ್ಲಾಡಳಿತದ ಸಿದ್ದತೆ ಹೇಗಿದೆ    ಇಲ್ಲಿದೆ ಸಂಪೂರ್ಣ ಮಾಹಿತಿ
Advertisement

ಚಿತ್ರದುರ್ಗ.ಮಾ.16 : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ 2ನೇ ಹಂತದಲ್ಲಿ ನಡೆಯಲಿದೆ. ತಕ್ಷಣದಿಂದಲೇ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.

Advertisement
Advertisement

ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.

Advertisement
Advertisement

ಇದರಂತೆ ಇದೇ ಮಾರ್ಚ್ 28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 04 ರಂದು  ಗುರುವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಏಪ್ರಿಲ್ 05 ರಂದು ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಏಪ್ರಿಲ್ 08 ರಂದು ಸೋಮವಾರ ನಾಮಪತ್ರ ಹಿಂಪಡೆಯುಲು ಕೊನೆಯ ದಿನ. ಏಪ್ರಿಲ್ 26 ರಂದು  ಶುಕ್ರವಾರ ಮತದಾನ ನಡೆಯಲಿದೆ. ಜೂನ್ 04 ರಂದು ಮಂಗಳವಾರ ಮತಗಳ ಎಣಿಕೆ ನಡೆಯಲಿದೆ. ಜೂನ್ 6ರಂದು ಗುರುವಾರ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಚಿತ್ರದುರ್ಗ (ಪರಿಶಿಷ್ಟ ಜಾತಿ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಹಾಗೂ ತುಮಕೂರು ಜಿಲ್ಲೆಯ ಸಿರಾ ಮತ್ತು ಪಾವಗಡ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇರುತ್ತವೆ ಎಂದರು.

18,41,937 ಮಂದಿ ಮತದಾರರು: ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯಲ್ಲಿ ಒಟ್ಟು 14,18,211 ಮತದಾರರು ಇದ್ದಾರೆ. ಇದರಲ್ಲಿ 704896 ಪುರುಷ ಮತದಾರರು, 713228 ಮಹಿಳಾ ಮತದಾರರು ಹಾಗೂ 87 ಮಂದಿ ಇತರೆ ಮತದಾರರು ಇದ್ದಾರೆ.

ತುಮಕೂರು ಜಿಲ್ಲೆಯ ಸಿರಾ ವಿಧಾನ ಕ್ಷೇತ್ರದಲ್ಲಿ 113788 ಪುರುಷರು ಹಾಗೂ 112898 ಮಹಿಳಾ ಮತದಾರರು ಹಾಗೂ 8 ಇತರೆ ಮತದಾರರು ಸೇರಿದಂತೆ ಒಟ್ಟು 226694 ಮತದಾರರು ಇದ್ದಾರೆ. ಪಾವಗಡ ವಿಧಾನ ಸಭಾ ಕ್ಷೇತ್ರದಲ್ಲಿ 100380 ಪುರುಷ ಮತದಾರರು, 96643 ಮಹಿಳಾ ಮತದಾರರು ಹಾಗೂ 9 ಇತರೆ ಮತದಾರರು ಸೇರಿದಂತೆ ಒಟ್ಟು 197032 ಮತದಾರರು ಇದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ತುಮಕೂರು ಜಿಲ್ಲೆಯ ಸಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 18,41,937 ಮತದಾರರು ಇದ್ದಾರೆ. ಇದರಲ್ಲಿ 919064 ಪುರುಷರು ಹಾಗೂ 922769 ಮಹಿಳೆಯರು, 104 ಇತರೆ ಮತದಾರರು ಇದ್ದಾರೆ ಎಂದು ತಿಳಿಸಿದರು.

2167 ಮತಗಟ್ಟೆಗಳು: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ತುಮಕೂರು ಜಿಲ್ಲೆಯ ಸಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 2167 ಮತಗಟ್ಟೆಗಳು ಇವೆ. ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 285 ಮತಗಟ್ಟೆಗಳು, ಚಳ್ಳಕೆರೆ-260, ಚಿತ್ರದುರ್ಗ-288, ಹಿರಿಯೂರು-287, ಹೊಸದುರ್ಗ-242, ಹೊಳಲ್ಕೆರೆ-299 ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 1661 ಮತಗಟ್ಟೆಗಳು ಇವೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳು  ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ 240 ಮತಗಟ್ಟೆಗಳು ಇವೆ ಎಂದು ತಿಳಿಸಿದರು.

ಸಹಾಯಕ ಚುನಾವಣಾಧಿಕಾರಿಗಳ ವಿವರ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ (ಎಸ್‍ಟಿ) ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಸನಗೌಡ ಕೋಟೂರ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ (ಎಸ್‍ಟಿ) ಸಹಾಯಕ ಚುನಾವಣಾಧಿಕಾರಿಯಾಗಿ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಹಿರಿಯೂರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿಯಾಗಿ ಎನ್.ಹೆಚ್-48 ವಿಶೇಷ ಭೂಸ್ವಾಧೀನಾಧಿಕಾರಿ ಹೆಚ್.ಎನ್.ಶಿವೇಗೌಡ,  ಹೊಸದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿಯಾಗಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್,   ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ (ಎಸ್‍ಸಿ) ಸಹಾಯಕ ಚುನಾವಣಾಧಿಕಾರಿಯಾಗಿ ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಟಿ.ವಿವೇಕಾನಂದ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ, ಪಾವಗಡ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ತುಮಕೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ- ನರಸಿಂಹಮೂರ್ತಿ ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.

47 ಚೆಕ್‍ಪೋಸ್ಟ್ ಕಾರ್ಯನಿರ್ವಹಣೆ: ಚುನಾವಣಾ ಅಕ್ರಮ ತಡೆಗಾಗಿ ಜಿಲ್ಲೆಯಲ್ಲಿ 35 ಚೆಕ್‍ಪೋಸ್ಟ್ ಹಾಗೂ ಶಿರಾ ಹಾಗೂ ಪಾವಗಡದಲ್ಲಿ ತಲಾ 6 ಚೆಕ್‍ಪೋಸ್ಟ್ ಸ್ಥಾಪನೆ ಸೇರಿದಂತೆ ಒಟ್ಟು 47 ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಣೆ ಮಾಡಲಿವೆ ಎಂದು ತಿಳಿಸಿದ ಅವರು, ಜಿಲ್ಲೆಯ ಹೊರರಾಜ್ಯದೊಂದಿಗೆ ಗಡಿ ಪ್ರದೇಶ ಹೊಂದಿರುವುದರಿಂದ ಸತ್ಯಸಾಯಿ ಹಾಗೂ ಅನಂತಪುರ ಗಡಿಭಾಗದಲ್ಲಿ ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು ತಿಳಿಸಿದರು.

ಇವಿಎಂ, ವಿವಿಪ್ಯಾಟ್ ದಾಸ್ತಾನು ವಿವರ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2167 ಮತಗಟ್ಟೆಗಳು ಇದ್ದು, 3952 ಬ್ಯಾಲೆಟ್ ಯುನಿಟ್, 2721 ಕಂಟ್ರೋಲ್ ಯುನಿಟ್ ಹಾಗೂ 2867 ವಿವಿ ಪ್ಯಾಟ್‍ಗಳ ದಾಸ್ತಾನು  ಮಾಡಲಾಗಿದೆ. 47 ಎಸ್‍ಎಸ್‍ಟಿ ತಂಡಗಳು, 8 ವಿಎಸ್‍ಟಿ ತಂಡಗಳು, 8 ವಿವಿಟಿ ತಂಡಗಳು ಹಾಗೂ 31 ಎಫ್‍ಎಸ್‍ಟಿ ತಂಡಗಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ದೂರುಗಳಿಗೆ ಟೋಲ್ ಫ್ರೀ ಸಂಖ್ಯೆ 1950: ಸಾರ್ವಜನಿಕರು ಚುನಾವಣೆ ಪ್ರಕ್ರಿಯೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಮತ್ತು ದೂರುಗಳಿದ್ದಲ್ಲಿ ಮತದಾರರ ಟೋಲ್ ಫ್ರೀ ಸಂಖ್ಯೆ 1950 ಗೆ ಸಂಪರ್ಕಿಸಬಹುದು. ಅಲ್ಲದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ದೂರುಗಳನ್ನು ಸಿ-ವಿಜಿಲ್ ಮೊಬೈಲ್ ಆಪ್ ಮೂಲಕವೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಎಲ್ಲಾ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ವಿದ್ಯುತ್, ನೆರಳಿನ ವ್ಯವಸ್ಥೆ ಹಾಗೂ ಅಂಗವಿಕಲರಿಗೆ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ್ತು ವಿವಿ ಪ್ಯಾಟ್ ಸಾಗಾಣೆ ಮಾಡುವ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸಿ ಅವುಗಳ ಚಲನ ವಲನಗಳನ್ನು ಮೇಲ್ವಿಚಾರಣೆ ಮಾಡಲಾಗುವುದು. ಧ್ವನಿವರ್ಧಕಗಳನ್ನು ರಾತ್ರಿ 10 ರಿಂದ 6 ರವರೆಗೆ ಉಪಯೋಗಿಸುವಂತಿಲ್ಲ ಎಂದು ಹೇಳಿದರು.

ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಪರಿಸರ ಸ್ನೇಹಿ ಪರಿಕರಗಳು (ಪೋಸ್ಟರ್ಸ್, ಬ್ಯಾನರ್ಸ್, ಬಂಟಿಂಗ್ಸ್ ) ಮಾತ್ರ ಬಳಸಬೇಕು. ಇವಿಎಂ ಬಗ್ಗೆ ಮತದಾರರಲ್ಲಿ ಮತಗಟ್ಟೆವಾರು ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ. 2014ರಲ್ಲಿ ಶೇ.66 ರಷ್ಟು ಮತದಾನವಾಗಿತ್ತು. 2019ರಲ್ಲಿ ಶೇ.70.64 ರಷ್ಟು ಮತದಾನವಾಗಿತ್ತು. ಈ ಬಾರಿಯೂ ಇನ್ನೂ ಹೆಚ್ಚಿನ ಮತದಾನಕ್ಕೆ ಕ್ರಮ ವಹಿಸಲಾಗಿದ್ದು, ಸ್ವೀಪ್ ಅಡಿ ಮತದಾರಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು, ಮತದಾನ ಹೆಚ್ಚಳಕ್ಕೆ ಎಲ್ಲ ರೀತಿಯ ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 11,650 ಮತದಾರರು ಹಾಗೂ 24,750 ವಿಕಲಚೇತನ ಮತದಾರರನ್ನು ಗುರುತಿಸಲಾಗಿದ್ದು, ಅಂತಹವರ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

1058  ಸಮಾಜ ವಿದ್ರೋಹಿಗಳ ವಿರುದ್ಧ ಮುಂಜಾಗೃತ ಕ್ರಮ: 20 ಜನರು ಗಡಿಪಾರಿಗೆ ಸಿದ್ದತೆ:
ಲೋಕಸಭಾ ಚುನಾವಣೆ ಸಂಬಂಧ ಕಾನೂನು ಸುವ್ಯವಸ್ಥೆ ಹಾಗೂ ಚುನಾವಣಾ ಅಕ್ರಮ ತಡೆಯಲು ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.

ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ 1058 ಸಮಾಜ ವಿದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 596 ಜನರನ್ನು ತಹಶೀಲ್ದಾರರ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆಯಲಾಗಿದೆ. 20 ಜನರ ಗಡಿಪಾರಿಗೆ ವಿಭಾಗಾಧಿಕಾರಿಗಳ ಮುಂದೆ ವರದಿ ಸಲ್ಲಿಸಲಾಗಿದೆ.

ಜಿಲ್ಲೆಗೆ ಪ್ಯಾರಾ ಮಿಲಿಟರ್ ಆಗಮಿಸಿದ ನಂತರ ಪ್ರತಿ ಹಳ್ಳಿಗಳಿಯೂ ಸಂಚರಿಸಿ ಜನಸಾಮಾನ್ಯರಲ್ಲಿ ಮತದಾನ ಕೈಗೊಳ್ಳಲು ವಿಶ್ವಾಸ ಹೆಚ್ಚಿಸಲಾಗುವುದು. ಈಗಾಗಲೇ ಜಿಲ್ಲೆಯ 35 ಚೆಕ್ ಪೋಸ್ಟ್‍ಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಇದ್ದರು.

Advertisement
Tags :
Advertisement