For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

04:58 PM Nov 20, 2024 IST | suddionenews
ಚಿತ್ರದುರ್ಗ   ಎಸ್ ಜೆ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 20 : ನಗರದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಕನ್ನಡ ಎಂದೂ ಮುಗಿಯದ ಭಾಷೆ. ನಮಗೆ ಭಾವ ಶ್ರೀಮಂತಿಕೆಯನ್ನು ತಂದು ಕೊಟ್ಟದ್ದು ಇದೇ ಕನ್ನಡ ಭಾಷೆ. ಕನ್ನಡಕ್ಕೆ ದೇವ ಭಾಷೆ ಕನ್ನಡವೇ. ನಾವು ನಮ್ಮ ನಾಡಗೀತೆಯನ್ನು ಹಾಡುತ್ತೇವೆ ಕೇಳುತ್ತೇವೆ. ಆದರೆ ಅದರ ಆಳವನ್ನು ಗಮನಿಸಿರುವುದಿಲ್ಲ. ನಾಡಗೀತೆಯನ್ನು ಬರೀ ಕೇಳುವುದಲ್ಲ ಅದರ ಒಳ ಅರ್ಥವನ್ನು ನಾವು ಗ್ರಹಿಸಬೇಕಿದೆ. ರಾಷ್ಟ್ರ ಕವಿ ಕುವೆಂಪುರವರು ಇಡೀ ನಾಡಗೀತೆಯಲ್ಲಿ ದೇಶದ ಸಮಗ್ರತೆಯನ್ನು ಮತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬ ಅವರ ಆಶಯವನ್ನು ನಾಡಗೀತೆಯಲ್ಲಿ ಕಾಣಬಹುದು. ನಮ್ಮ ಪ್ರಾಚೀನ ಸಾಹಿತ್ಯದ ಸಿಂಹಾವಲೋಕನ ಮಾಡಿದಾಗ ಕವಿಗಳ, ಕಾವ್ಯಗಳನ್ನು ಓದಿದಾಗ ನಮಗೆ ಮೈ ರೋಮಾಂಚನವಾಗುತ್ತದೆ. ನಮ್ಮ ಆಲೋಚನೆಗಳಿಗೆ ಉತ್ಸಾಹ ನೀಡುವ ಭಾಷೆ ಕನ್ನಡ. ನಮ್ಮ ಭಾಷೆ ಶ್ರೀಮಂತಗೊಳ್ಳಲು ಎರಡು ಧರ್ಮಗಳು ಪ್ರಮುಖ ಕಾರಣ ಒಂದು ಜೈನ ಧರ್ಮ ಮತ್ತೊಂದು ಲಿಂಗಾಯತ ಧರ್ಮ. ಜೈನ ಧರ್ಮದ ಕವಿಗಳಾದ ಆದಿ ಕವಿ ಪಂಪ, ರನ್ನ, ನಾಗಚಂದ್ರ ಮೊದಲಾದವರು ಕನ್ನಡದಲ್ಲಿ ಬರೆದು ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ನಂತರದಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಗೆ ಘನತೆ ತಂದರು. ನಮ್ಮ ನೋವು, ಸಮಸ್ಯೆಗಳಿಗೆ ಸ್ಪಂದಿಸುವ ಸಾಹಿತ್ಯವನ್ನು ರಚಿಸಿದವರು ಜಿ.ಎಸ್.ಶಿವರುದ್ರಪ್ಪನವರು. ಕನ್ನಡ ನಮಗೆ ಸಂತೋಷ ನೀಡುವ ಭಾಷೆ. ವಿದ್ಯಾರ್ಥಿಗಳು ಕನ್ನಡಕ್ಕೆ ಒತ್ತು ನೀಡಬೇಕು ಎಂದು ನುಡಿದರು.

Advertisement

ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿಗಳು ಮಾತನಾಡಿ, ಕನ್ನಡವನ್ನು ನಾವು ಪ್ರತಿದಿನ ಬಳಸಬೇಕು. ಇಂತಹ ಉತ್ಸವಗಳು ಕೇವಲ ನವೆÀಂಬರ್ ತಿಂಗಳಿಗೆ ಸೀಮಿತವಾಗಬಾರದು, ಅದು ನಿತ್ಯೋತ್ಸವ ಆಗಬೇಕು. ಕನ್ನಡ ನಮ್ಮ ಜೀವನದ ವಿಧಾನವಾಗಬೇಕು. ನಮ್ಮ ಉಸಿರಾಗಬೇಕು. ಈ ನಾಡಿನಲ್ಲಿ ಹುಟ್ಟಿರುವ ನಾವುಗಳೇ ಪುಣ್ಯವಂತರು. ಇಡೀ ಜಗತ್ತಿಗೆ ಒಳಿತಾಗಲೀ ಎಂದು ಸಂದೇಶ ನೀಡಿದ್ದು ಇದೇ ಕನ್ನಡ ನೆಲದ ಬಸವಕಲ್ಯಾಣದಿಂದ. ಬಸವಣ್ಣನವರು ಲಿಂಗಭೇದ, ಜಾತಿಭೇದ, ವಯಸ್ಸಿನ ಭೇದವನ್ನು ತೊಲಗಿಸಿ ಸಮಸಮಾಜದ ಪರಿಕಲ್ಪನೆ ಮೂಡಿಸಿದ್ದು ಇದೇ ಕನ್ನಡದ ನೆಲದಿಂದ. ಸರ್ವರಿಗೂ ಸಮಪಾಲು ಸಮಬಾಳು ಬಯಸಿದ ಧರ್ಮ, ಪ್ರಜಾಪ್ರಭುತ್ವದ ಆಲೋಚನೆ ಮತ್ತು ಪರಿಕಲ್ಪನೆ ಹುಟ್ಟಿದ್ದು ನಮ್ಮ ಕರ್ನಾಟಕದ ಬಸವಕಲ್ಯಾಣದಲ್ಲಿ. ಅತಿ ದೊಡ್ಡ ಇತಿಹಾಸವುಳ್ಳ ಭಾಷೆ ಕನ್ನಡ. ಶಿವರಾಂ ಕಾರಂತರು ಹೇಳಿರುವಂತೆ ಜಗತ್ತಿನ ಸಾಹಿತ್ಯಕ್ಕೆ ಕನ್ನಡದ ದೊಡ್ಡ ಕೊಡುಗೆಯೆಂದರೆ ಅದುವೇ ವಚನ ಸಾಹಿತ್ಯ. ಗೋಲ್ ಗುಂಬಜ್, ಹಂಪಿ ಮುಂತಾದವು ನಮ್ಮ ನಾಡಿನ ಕಲಾ ಸಂಸ್ಕøತಿಯ ಸಂಕೇತಗಳಾಗಿವೆ ಎಂದು ತಿಳಿಸಿದರು.

ಪ್ರಾಚಾರ್ಯರಾದ ಡಾ.ಭರತ್ ಪಿ ಬಿ ಮಾತನಾಡಿ, ವಿದ್ಯಾರ್ಥಿಗಳೇ ಮುಂದೆ ನಿಂತು ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಿ ಕಾಲೇಜಿನಲ್ಲಿ ಕನ್ನಡದ ವಾತಾವರಣ ಸೃಷ್ಟಿಸಿದ್ದಾರೆ. ಕನ್ನಡದ ಕಂಪನ್ನು ಹರಿಸಿದ್ದಾರೆ. ಕನ್ನಡದ ನೆಲ,ಜಲ, ಭಾಷೆ ಅತ್ಯಂತ ಶ್ರೀಮಂತವಾದದು. ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರು ಸಾಧನೆ ಮೆರೆದಿದ್ದಾರೆ. ನಾವು ನವೆಂಬರ್ ಕನ್ನಡಿಗರಾಗದೇ ನಮ್ಮ ನಿತ್ಯ ಜೀವನದಲ್ಲಿ ಕನ್ನಡಕ್ಕೆ ಮಹತ್ವ ನೀಡಬೇಕು. ಕನ್ನಡ ಉಳಿಸಬೇಕು. ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ನಮ್ಮ ನಾಡಿನ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ನುಡಿದರು.

ಚಲನಚಿತ್ರ ನಟ ಶ್ರೀ ಪೃಥ್ವಿ ಶಾಮನೂರು ಮಾತನಾಡಿ, ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ. ನನ್ನ ಚಿತ್ರಗಳಿಗೆ ಚಿತ್ರದುರ್ಗದ ಜನತೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಈ ಅಭಿಮಾನ ನನ್ನ ಮುಂದಿನ ಚಿತ್ರಗಳಿಗೂ ಮುಂದುವರೆಯಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಮುಖ್ಯಸ್ಥರುಗಳಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಕೃಷ್ಣಾರೆಡ್ಡಿ ಕೆ.ಆರ್., ಡಾ. ಸಿದ್ಧೇಶ್ ಕೆ ಬಿ, ಡಾ. ಶ್ರೀಶೈಲ ಜೆ ಎಂ, ಡಾ.ಶಿವಕುಮಾರ್ ಎಸ್.ಪಿ, ಡಾ.ಲೋಕೇಶ್ ಹೆಚ್ ಜೆ., ಪ್ರೊ.ಶಶಿಧರ್ ಎ.ಪಿ., ಡಾ.ನಿರಂಜನ್ ಈ, ಡಾ.ಕೆ.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕು. ಆಕಾಂಕ್ಷಾ ಪ್ರಾರ್ಥಿಸಿ, ಕು.ನಾಗಸಾರಿಕ ಸ್ವಾಗತಿಸಿ ಕು.ರುಚಿತಾ ರಚನಾ ನಿರೂಪಿಸಿ, ಕು.ಚಂದನ ವಂದಿಸಿದರು.
ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.

Tags :
Advertisement