ಚಿತ್ರದುರ್ಗ | ಗುರುಪೂರ್ಣಿಮೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ
ಸುದ್ದಿಒನ್, ಚಿತ್ರದುರ್ಗ. ಜು,21: ಯೋಗವಿದ್ಯೆ ಧಾರೆ ಎರೆದ, ಬುದ್ಧನಿಗೆ ಜ್ಞಾನೋದಯವಾದ ದಿನ, ಜೈನ ಧರ್ಮದ 24ನೇ ತೀರ್ಥಂಕರರ ಸ್ಮರಣೆಯ ಸಂದರ್ಭ, ಅಂಬೇಡ್ಕರ್ ಬೌದ್ಧ ಧರ್ಮದ ಶಿಷ್ಯತ್ವ ಪಡೆದ ದಿನ ಇವುಗಳೆಲ್ಲ ಅಪರೂಪದ ಮತ್ತು ಗುರುವಿನ ಮಹತ್ವದ ಸ್ಥಾನವನ್ನು ಎತ್ತಿ ಹಿಡಿದ ದ್ಯೋತಕವಾಗಿವೆ ಎಂದು ಚಿತ್ರದುರ್ಗ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಈ. ಸಂಪತ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ನಗರದ ಎಸ್ ಆರ್ ಬಿ ಎಂ ಎಸ್ ರೋಟರಿ ಬಾಲ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆಯ ದಿನವಾದ ಇಂದು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಪರಂಪರೆಯಲ್ಲಿ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಮಹತ್ವವಾದುದಾಗಿದೆ. ಹಾಗೆಯೇ ಗ್ರೀಕ್ ದೇಶದಲ್ಲಿನ ಅನೇಕ ತತ್ವಜ್ಞಾನಿಗಳು ಸಹ ಗುರುವಿನ ಸ್ಥಾನವನ್ನು ಎತ್ತರಕ್ಕೆ ಏರಿಸಿರುವುದನ್ನು ಸ್ಮರಿಸಬಹುದಾಗಿದೆ. ದೇಹ ಮತ್ತು ಮನಸ್ಸು ಸದಾ ಉಲ್ಲಾಸಭರಿತವಾಗಿರಲು ಯೋಗ ಒಂದು ಶಕ್ತಿ ಇದ್ದಂತೆ. ದಿನನಿತ್ಯದ ಕೆಲಸಗಳು ಪರಿಣಾಮಕಾರಿಯಾಗಿ ಮತ್ತು ಧನಾತ್ಮಕ ಚಿಂತನೆಗಳು ನಮ್ಮಲ್ಲಿ ಅಳವಡಲು ಪ್ರೇರಣೆ ನೀಡುತ್ತದೆ. ನಾನೂ ಸಹ ಯೋಗಾಚಾರ್ಯ ಚಿನ್ಮಯಾನಂದ ಅವರು ನಡೆಸಿಕೊಡುವ ಯೋಗಾಭ್ಯಾಸಕ್ಕೆ ಕಳೆದ 8 ತಿಂಗಳಿಂದ ಬರುತ್ತಿರುವ ಕಾರಣ ಧೈರ್ಯವಾಗಿ ಹೇಳಬಹುದು. ಯೋಗ ಮಾಡುವುದರಿಂದ ನಮ್ಮಲ್ಲಿ ಸದಾ ಲವಲವಿಕೆ ಮತ್ತು ಉತ್ತೇಜನ ಇಮ್ಮಡಿಯಾಗಲು ಸಹಕಾರಿ ಯಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ವತಃ ನನಗೆ ಆ ಅನುಭವವಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಜಿ.ಎಂ. ವೀರಣ್ಣ ಅವರು ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಇದರೊಂದಿಗೆ ನಮಗೆ ನಮ್ಮ ಅರಿವೇ ಗುರುವಾಗಬೇಕೆಂದರು.
ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್ ನ ಅಧ್ಯಕ್ಷರಾದ ಚೇತನ್ ಬಾಬು. ಎಂ. ಅವರು ಗುರುಪೂರ್ಣಿಮೆಯ ದಿನವಾದ ಇಂದು ಅನೇಕ ವೈಶಿಷ್ಟ್ಯಗಳಿವೆ .ಅದಕ್ಕಾಗಿ ಈ ದಿನಕ್ಕೆ ವಿಶೇಷ ಸ್ಥಾನವಿದೆ ಎಂದರು.
ರೋಟರಿ ಟ್ರಸ್ಟ್ ಕಾರ್ಯದರ್ಶಿಗಳಾದ ಕೆ.ಮಧುಪ್ರಸಾದ್ ಮಾತನಾಡಿ ಕಳೆದ 23 ವರ್ಷಗಳಿಂದ ಯೋಗ ಸಂಸ್ಥೆಯಲ್ಲಿ ಇಂತಹ ಕಾರ್ಯಗಳು ನಿರಂತರ ನಡೆಯುತ್ತಿವೆ. ಚಿನ್ಮಯಾನಂದರ ನಿಸ್ವಾರ್ಥ ಸೇವೆ ಗುರುಪೂರ್ಣಿಮೆಗೆ ಮೆರಗು ನೀಡಿದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಜಿ.ಎಸ್. ಶಿವಣ್ಣ ಅವರು ಮಾತನಾಡಿ ನಾನು ಸಹ ಯೋಗ ಶಾಲೆಯ ಹಳೆಯ ವಿದ್ಯಾರ್ಥಿ. ಯಾವುದೋ ಒಂದು ಕಾರಣದಿಂದ ನಿಲ್ಲಿಸಿದೆ. ನಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಪರಿಣಾಮಕಾರಿಯಾಗಿದೆ. ನಾನು ಸಹ ಏಕಲವ್ಯನಾಗಿ ಮನೆಯಲ್ಲಿ ಚಿನ್ಮಯಾನಂದರ ನೆನಹಿನಲ್ಲಿ ಯೋಗ ಮಾಡುತ್ತಿರುವುದಾಗಿ, ಇದು ನನಗೆ ಅವರು ಅಪ್ರತ್ಯಕ್ಷವಾಗಿ ಗುರು ಮಾರ್ಗ ತೋರಿದ್ದಾರೆ. ಯೋಗ ಮಾಡಿ ರೋಗದಿಂದ ಮುಕ್ತರಾಗಿರಿ ಎಂದರು.
ಯೋಗಾಚಾರ್ಯರು, ಕಾರ್ಯಕ್ರಮದ ಮೇಲ್ವಿಚಾರಣೆಯ ಉಸ್ತುವಾರಿಯೂ ಆಗಿದ್ದ ಎಲ್.ಎಸ್.ಚಿನ್ಮಯಾನಂದ ಅವರು ಮಾತನಾಡಿ ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಭಾಗುವಿಕೆಯನ್ನು ಅಂದರೆ ವಿನಯ, ದಯೆ, ಕರುಣೆ ,ಹೃದಯ ವೈಶಾಲ್ಯತೆ ಮೆರೆದು ಬೇರೆಯವರಿಗೆ ಮಾರ್ಗದರ್ಶಿ ಆಗಬೇಕಿದೆ. ಆ ಮೂಲಕ ಆಸನ ಮಾಡಿ ಬಾಗುವುದು ಬೇರೆ, ಜೀವನದಲ್ಲಿ ಮಾನಸಿಕ, ಬೌದ್ಧಿಕವಾಗಿ ಬಾಗುವುದು ಬೇರೆ. ನಮ್ಮ ಯೋಗ ಉಪಶಾಖೆಗಳ ಮುಖ್ಯಸ್ಥರುಗಳು ಸಹ ಈ ರೀತಿಯ ಸದ್ಗುಣಗಳನ್ನು ಬಿತ್ತುವ ಆ ಮೂಲಕ ಸಾರ್ವಜನಿಕ ಜೀವನದಲ್ಲಿರುವ ಮನುಷ್ಯರ ಜೀವನದ ಹಸನಿಗೆ ಪ್ರೇರಣೆಯಾಗಿ ಮಾದರಿಯಾಗಬೇಕೆಂದು ಹಿತ ನುಡಿದರು.
ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಹುರುಳಿ ಬಸವರಾಜ ಉಪನ್ಯಾಸ ನೀಡುತ್ತಾ ಜನನ ಮರಣಗಳ ನಡುವಿನ ಮನುಷ್ಯರ ಜೀವನದಲ್ಲಿ ನೋವು ,ನಲಿವು ಸದಾ ಇದ್ದೇ ಇರುತ್ತದೆ. ಈ ಕಷ್ಟ- ಸುಖಗಳನ್ನು ಸಮನಾಗಿ ಸ್ವೀಕರಿಸುವ ಮರ್ಮವನ್ನು ತಿಳಿಸಿ ಆ ಮೂಲಕ ಸಮನ್ವಯದಿಂದ ನಡೆಸಲು ಹೇಳುವವನೇ ಗುರು ತಾಯಿ ,ತಂದೆ, ಶೈಕ್ಷಣಿಕ ಗುರು ಜೊತೆಗೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಾವು ಹೆಜ್ಜೆ ಇಡಬೇಕಾದರೆ ಅದಕ್ಕೂ ಮಾರ್ಗದರ್ಶಕ ಗುರು ಬೇಕಾಗುತ್ತಾನೆ. ಕನ್ನಡ ನಾಡಿನಲ್ಲಿ ಕಾಲಕಾಲಕ್ಕೆ ಅನೇಕ ಗುರು ಪರಂಪರೆಯ ದೊಡ್ಡ ಶಕ್ತಿ ಮುನ್ನಡೆಸಿರುವುದನ್ನು ನಾವು ಕಾಣಬಹುದಾಗಿದೆ. ಅಜ್ಞಾನ, ಅಂಧಕಾರ ಓಡಿಸುವ ಮೂಲಕ ಜೀವನವನ್ನು ಸನ್ಮಾರ್ಗದತ್ತ ನಡೆಸುವುದೆ ಗುರುವಿನ ಕೆಲಸವಾಗಿದೆ. ಹಾಗೆ ಇಂದಿನ ಮಕ್ಕಳಿಗೆ ಅಂಕಗಳಿಕೆಯೇ ಕೇವಲ ಶಿಕ್ಷಣದ ಗುರಿಯಲ್ಲ. ಉತ್ತಮ ಸಂಸ್ಕಾರ, ಸನ್ನಡತೆ ಕಲಿಸುವುದು ಶಿಕ್ಷಣದ ಗುರಿ ಎನ್ನುವುದನ್ನು ನಮ್ಮ ಶಾಲಾ-ಕಾಲೇಜುಗಳು ಕಲಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಸ್. ಜಿ ರಂಗನಾಥ್ ಮಾತನಾಡಿ ಮನುಷ್ಯನೇನಾದರೂ ಸಾಧನೆ ಮಾಡಬೇಕೆಂದರೆ ಆರೋಗ್ಯ ಅತ್ಯವಶ್ಯಕ. ನಮ್ಮ ದೇಹದ ಎಲ್ಲಾ ಅವಯವಗಳು ಸರಿಯಾಗಿ ಕೆಲಸ ಮಾಡಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗಿದೆ .ಶುಂಠಿ, ಕರಿಬೇವು, ಬೆಳ್ಳುಳ್ಳಿ, ಬಿಸಿನೀರು ಇವುಗಳನ್ನು ಬೆಳಗಿನ ಹೊತ್ತು ಸರಿಯಾದ ಕ್ರಮದಲ್ಲಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕನಿಷ್ಠ ಪಕ್ಷ 45 ನಿಮಿಷಗಳ ಕಾಲ ವಾಕು ನಮ್ಮ ದೇಹ ಸರಿಯಾಗಿರಲು ಸಹಾಯಕವಾಗುತ್ತದೆ. ಹಾಗೆಯೇ ದಿನಕ್ಕೆ ಒಂದು ಸಾವಿರ ಬಾರಿ ಎರಡು ನೂರಕ್ಕೆ ಒಮ್ಮೆ ಚಪ್ಪಾಳೆ ತಟ್ಟುವ ಮೂಲಕ ದೇಹವನ್ನು ಸಮತೋಲನದಲ್ಲಿ ಇರಿಸಬಹುದೆಂದು ಇದನ್ನೇ ನಮ್ಮ ಪಾರಂಪರಿಕ ವೈದ್ಯ ಯೋಗ ಪರಂಪರೆಯ ಗುರುಗಳು ಹೇಳಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಬಡಾವಣೆಗಳ ಯೋಗ ತರಬೇತುದಾರರಾದ ರಾಜಣ್ಣ, ಮುರಳಿ, ವೆಂಕಟೇಶ್, ತನುಜಾ ಹಾಗು ಎಸ್. ಜಿ .ರಂಗನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಗೆಯೇ ಯೋಗಾಚಾರ್ಯ ಚಿನ್ಮಯಾನಂದ ಅವರನ್ನು ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ರೋಟೇರಿಯನ್ ರಾಜಕುಮಾರ್, ಇನ್ನರ್ ವೀಲ್ ಕಾರ್ಯದರ್ಶಿ ದೀಪಾ ಸಂತೋಷ್, ಎಂ. ಕೆ. ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಆರಂಭವನ್ನು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಗುರು ನಮನ ಪ್ರಸ್ತುತ ಪಡಿಸುವ ಪ್ರಾರ್ಥನಾ ಗೀತೆಯನ್ನು ಕೋಕಿಲಾ ಎಂ.ಜೆ . ಹಾಡಿದರು. ರೋಟೆರಿಯನ್ ಟಿ .ವೀರಭದ್ರಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ವಿಮಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ವರ್ತಕರಾದ ನಾಗಚೇತನ್ ಶರಣು ಸಮರ್ಪಣೆ ಮಾಡಿದರು. ಯೋಗ ಸಹ ತರಬೇತುದಾರರಾದ ರಂಗಸ್ವಾಮಿ ಹಾಗೂ ಪ್ರಸನ್ನ ಕುಮಾರಿ ಮತ್ತಿತರರು ಗುರು ಮಹತ್ವ ಸಾರುವ ಗೀತೆಗಳನ್ನು ಹಾಡಿದರು.