For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ನವಂಬರ್ 12 ಮತ್ತು 13 ರಂದು ನೀನಾಸಂ ತಂಡದಿಂದ ನಾಟಕ ಪ್ರದರ್ಶನ : ಪ್ರವೇಶ ಉಚಿತ

04:01 PM Nov 07, 2024 IST | suddionenews
ಚಿತ್ರದುರ್ಗ   ನವಂಬರ್ 12 ಮತ್ತು 13 ರಂದು ನೀನಾಸಂ ತಂಡದಿಂದ ನಾಟಕ ಪ್ರದರ್ಶನ   ಪ್ರವೇಶ ಉಚಿತ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 : ನಗರದ ವಿ.ಪಿ ಅಕಾಡೆಮಿ, ದಿನಸಿ ಫೋರ್ಟ್ ಸೂಪರ್ ಮಾರ್ಕೇಟ್, ರಂಗಸೌರಭ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ 12 ಮತ್ತು 13 ರಂದು ಸಂಜೆ 6-30ಕ್ಕೆ ನೀನಾಸಂ ತಿರುಗಾಟ 2024 ನಾಟಕ ಪ್ರದರ್ಶನಗಳನ್ನು ತ.ರಾ.ಸು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡುವರು. ರಂಗನಿರ್ದೇಶಕ ಕೆಪಿಎಮ್ ಗಣೇಶಯ್ಯ, ರಂಗಸಂಘಟಕ ಎಮ್.ವಿ. ನಟರಾಜ, ಇಂಗ್ಲೀಷ್ ಪ್ರಾಧ್ಯಾಪಕ ಎಂ.ವಿ.ನಾಗರಾಜ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.

Advertisement

ನವಂಬರ್ 12 ರಂದು ಸಂಸ್ಕøತ ನಾಟಕಕಾರ ಭವಭೂತಿ ರಚಿಸಿದ, ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್, ಎಮ್.ಎಚ್.ಗಣೇಶ ಸಂಗೀತ ವಿನ್ಯಾಸ ಹಾಗೂ ಹಿರಿಯ ರಂಗ ನಿರ್ದೇಶಕ ಕೆ.ವಿ.ಅಕ್ಷರ ಇವರ ಕನ್ನಡರೂಪ ಮತ್ತು ನಿರ್ದೇಶನದಲ್ಲಿ ಮಾಲತೀಮಾಧವ ಸಂಸ್ಕøತ ನಾಟಕವು ಪ್ರದರ್ಶನಗೊಳ್ಳಲಿದೆ.

ಕ್ರಿ.ಶ. 8ನೆಯ ಶತಮಾನದ ಪ್ರಸಿದ್ಧ ಸಂಸ್ಕøತ ನಾಟಕಕಾರ ಭವಭೂತಿಯ ವಿರಚಿತ ಸಂಸ್ಕøತ ನಾಟಕ ಮಾಲತೀಮಾಧವ ಕೃತಿಯು ಮೇಲ್ನೋಟಕ್ಕೆ ಸರಳ ಎಂದೆನಿಸುತ್ತದೆ. ಮಾಲತಿ ಮತ್ತು ಮಾಧವ ಎಂಬ ಪ್ರೇಮಿಗಳು ತಮ್ಮ ಮದುವೆಗಿರುವ ತೊಡಕುಗಳನ್ನೆಲ್ಲ ದಾಟಿ ಸಂಲಗ್ನಗೊಳ್ಳುವುದು ಜೊತೆಗೆ ಇನ್ನೆರಡು ಜೋಡಿ ಮದುವೆಗಳೂ ಸಂಭವಿಸುವುದೂ ಈ ಕತೆಯ ತಿರುಳು. ರಾಜಕೀಯ ಕಾರಣದಿಂದ ಈ ಮದುವೆಗಳಿಗೆ ವಿಘ್ನ ಉಂಟಾಗುವುದು. ಪದ್ಮಾವತಿಯ ರಾಜನು ತನ್ನ ಗೆಳೆಯನಿಗೆ ಮಾಲತಿಯನ್ನು ಮದುವೆ ಮಾಡಿಸಲು ಬಯಸುತ್ತಾನೆ. ಇದರಿಂದ ಮಾಧವ ಹತಾಶನಾಗಿ ನಾಗರಿಕಲೋಕ ತೊರೆದು ಸ್ಮಶಾನ ವಾಸಿಯಾಗುವುದು, ಅಲ್ಲಿ ಕಾಪಾಲಿಕರಿಂದ ನರಬಲಿಗಾಗಿ ಮಾಲತಿಯ ಅಪಹರಣ ಆಗಿರುವುದನ್ನು ತಡೆದು ಅವಳನ್ನು ಉಳಿಸುವುದು. ಆಮೇಲೆ ಮತ್ತೊಮ್ಮೆ ಅವಳ ಅಪಹರಣವಾದಾಗ ಮಾಧವ ಕಾಡುಮೇಡು ಅಲೆಯುವುದು, ಮತ್ತು ಅಚಿತಿಮವಾಗಿ ಸೌದಾಮಿನಿಯೆಂಬ ಬೌದ್ಧ ಸಾಧಕಿ ಆಕೆಯನ್ನು ಉಳಿಸುವುದು ಮತ್ತು ಅಚಿತಿಮವಾಗಿ ಅವರಿಬ್ಬರ ಸಮಾಗಮವಾಗುವುದು. ಹೀಗೆ ಕಥನ ಸಾಗುತ್ತದೆ.

ಇಂಥ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಇಲ್ಲಿ ಕಾಮಂದಕಿ ಎಂಬ ಬೌದ್ಧ ಸನ್ಯಾಸಿನಿ ಮತ್ತವಳ ಶಿಷ್ಯರು ಕಾರಣರಾಗುತ್ತಾರೆ. ವೈರಾಗ್ಯಕ್ಕೆ ಮುಖ ಮಾಡಿರುವ ಸನ್ಯಾಸಿಗಳೇ ಸಂಸಾರಗಳನ್ನು ಕಟ್ಟುವ ಸೂತ್ರಧಾರರಾಗುವುದು ಈ ನಾಟಕದ ಮರ್ಮ. ಆ ಮೂಲಕ ಆಗಬಾರದ ಮದುವೆಗಳು ನಿಂತು ಆಗಬೇಕಾದ ಮದುವೆಗಳು ತಂತಾನೇ ನಡೆಯುವುದು ಈ ಕೃತಿಯ ವಿಶಿಷ್ಟ ಮತ್ತು ನಾಟಕೀಯತೆಯಾಗಿದೆ.

ನವಂಬರ್ 13 ರಂದು ಮರಾಠಿ ನಾಟಕಕಾರ ಅಭಿರಾಮ್ ಭಡ್ಕಮ್ಕರ್ ರಚಿಸಿದ, ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ ಅಂಕದ ಪರದೆ ನಾಟಕವು ವಿದ್ಯಾನಿಧಿ ವನಾರಸೆ ಪ್ರಸಾದ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಅಂಕದ ಪರದೆ ನಾಟಕವು ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆಯುತ್ತಿರುವ ಹಿರಿಯ ನಾಗರಿಕರ ಒಂದು ಆಶ್ರಯಧಾಮದೊಳಗೆ ಸಂಭವಿಸುತ್ತದೆ. ಆದರೆ ಇಲ್ಲಿರುವ ವ್ಯಕ್ತಿಗಳು ಬರಿದೇ ಬದುಕಿನ ಸಂಧ್ಯಾಕಾಲವನ್ನು ನೋವಿನಿಂದ ನೂಕುತ್ತಿರುವ ಹತಾಶರಲ್ಲ. ಹಲವು ಬಗೆಯಲ್ಲಿ ಕ್ರಿಯಾಶೀಲರು. ಪತ್ನಿಯಿಂದಲೇ ಹೀಗಳೆಯಲ್ಪಟ್ಟು ಮಕ್ಕಳಿಂದಲೂ ಬೇರ್ಪಟ್ಟರೂ ಅವರೆಲ್ಲರಿಗೂ ಹಣ ಕಳಿಸುತ್ತಿರುವ ದಿಲ್ಖುಷ್ ಮನುಷ್ಯ ದೇಸಾಯಿ ಇಲ್ಲಿದ್ದಾನೆ, ಹಾಗೆಯೇ ಮಗನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ಹಣ ಸಂಪಾದಿಸಿ ತಮ್ಮ ಆಸೆಗಳನ್ನು ಅದುಮಿಟ್ಟು ಬದುಕಿದ ನಾನಾ, ಮಾಯಿ ಎಂಬ ಗಂಡಹೆಂಡಿರು ಇಲ್ಲೀಗ ತಮ್ಮ ಹೊಸ ಬದುಕನ್ನು ಆವಿಷ್ಕರಿಸುತ್ತಿದ್ದಾರೆ, ಅಂತೆಯೇ ಬದುಕಿನುದ್ದಕ್ಕೂ ಸಮಾಜಮುಖಿ ಚಳುವಳಿಗಾರನಾಗಿ ದುಡಿದ ಭಾಯೀಜಿ ಮತ್ತು ಅವನಿಗಾಗಿಯೇ ತನ್ನ ಬದುಕನ್ನು ಮುಡುಪಿಟ್ಟ ಅವನ ಪತ್ನಿ ಸೇವಾತಾಯಿ ಇಲ್ಲೀಗ ಹಳೆಯ ನೆನಪುಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದಾರೆ, ಹಳೆಯ ರಂಗಭೂಮಿಯ ಕಲಾವಿದ ಜನುಭಾಯಿ ಇಲ್ಲೀಗ ತನ್ನ ಬಣ್ಣದ ಬದುಕಿನ ರೋಮಾಂಚನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಇಂಥವರೆಲ್ಲರ ನಡುವೆ, ಹರ್ಷನೆಂಬ ಹೊಸಗಾಲದ ರಂಗಕರ್ಮಿಯೊಬ್ಬ ಈ ವಾರ್ಧಕ್ಯದ ತಥ್ಯ ತಿಳಿಸಲು, ತನ್ನ ತಂದೆಯ ವೇಷಾಂತರದಲ್ಲಿ ಈ ವೃದ್ಧಾಶ್ರಮಕ್ಕೆ ಸೇರಿಕೊಂಡು ಅವರೊಂದಿಗೆ ರಂಗಭೂಮಿಯ ಪಾಠಗಳನ್ನು ಕಲಿಯತೊಡಗುತ್ತಾನೆ. ಹೀಗೆ ವೃದ್ಧಾಪ್ಯವೆಂಬ ವಾಸ್ತವವು ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಸಾಗುತ್ತದೆ.
ಚಿತ್ರದುರ್ಗ ಜಿಲ್ಲೆಯ ನಾಗರಿಕರು, ರಂಗಾಸಕ್ತರು, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೀನಾಸಮ್ ತಿರುಗಾಟ- 2024 ನಾಟಕ ಪ್ರದರ್ಶನದ ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಂತೆ ರಂಗಸೌರಭ ಕಲಾಸಂಘದ ಅಧ್ಯಕ್ಷ ಡಾ.ಕೆ.ಮೋಹನ್‍ಕುಮಾರ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Tags :
Advertisement