Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ಧನಂಜಯ ಹಂಪಯ್ಯನಮಾಳಿಗೆ ನೇಮಕ : ಅಭಿಮಾನಿಗಳಿಂದ ಸನ್ಮಾನ

08:07 PM Aug 10, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 10  : ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಧನಂಜಯ ಹಂಪಯ್ಯನಮಾಳಿಗೆ ಇವರಿಗೆ ಪ್ರವಾಸಿ ಮಂದಿರದಲ್ಲಿ ಉಪ್ಪಾರ ಸಮಾಜ ಹಾಗೂ ಅಭಿಮಾನಿಗಳು ಸೇರಿ ಸನ್ಮಾನಿಸಿದರು.

Advertisement

ಜಿಲ್ಲಾ ಉಪ್ಪಾರ ಸಮಾಜದ ಮಾಜಿ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘದವರು ನಂಬಿಕೆಯಿಟ್ಟು ಧನಂಜಯ ಹಂಪಯ್ಯನಮಾಳಿಗೆ ಇವರಿಗೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ. ಹೆಗಲ ಮೇಲೆ ಈಗ ಹೆಚ್ಚಿನ ಭಾರವಿರುವುದರಿಂದ ಜಿಲ್ಲೆಯ ರೈತರ ಸಮಸ್ಯೆ, ಕುಂದುಕೊರತೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕೆಂದು ಹಾರೈಸಿದರು.

ರಾಜ್ಯ ಉಪ್ಪಾರ ಸಂಘದ ವಕ್ತಾರ ಎಂ.ಪಿ.ಶಂಕರ್ ಮಾತನಾಡುತ್ತ ಹಸಿರು ಶಾಲಿಗೆ ತನ್ನದೆ ಆದ ಶಕ್ತಿಯಿದೆ. ದೇಶಕ್ಕೆ ಅನ್ನ ನೀಡುವ ರೈತ ನಾನಾ ರೀತಿಯ ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದಾನೆ. ಆಳುವ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸಿದಾಗ ಎದೆಗುಂದದೆ ಹೋರಾಟಕ್ಕೆ ಇಳಿಯಬೇಕು ಎಂದು ಧನಂಜಯ ಹಂಪಯ್ಯನಮಾಳಿಗೆಗೆ ತಿಳಿಸಿದರು.

ಬಳ್ಳಾರಿ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಯರ್ರಿಸ್ವಾಮಿ ಮಾತನಾಡಿ ಕಾರ್ಯಕ್ಷಮತೆ, ಬದ್ದತೆ ಗುರುತಿಸಿ ಕರ್ನಾಟಕ ರಾಜ್ಯ ರೈತ ಸಂಘ ಧನಂಜಯ ಹಂಪಯ್ಯನಮಾಳಿಗೆ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಅನ್ನದಾತ ರೈತನ ಬೆಳೆಗೆ ಇದುವರೆವಿಗೂ ಯಾವ ಸರ್ಕಾರವೂ ವೈಜ್ಞಾನಿಕ ಬೆಲೆ ನೀಡಿಲ್ಲ. ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ಬ್ಯಾಂಕ್‍ಗಳು ರೈತರನ್ನು ಸಾಲಕ್ಕೆ ಪೀಡಿಸುತ್ತಿವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಉಪ್ಪಾರ ಸಮಾಜದ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸಿದ್ದೇಶ್ವರ ಮಾತನಾಡುತ್ತ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಧನಂಜಯ ಹಂಪಯ್ಯನ ಮಾಳಿಗೆ ಜಿಲ್ಲೆಯ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸರ್ಕಾರದಿಂದ ಸಿಗಬೇಕಾದ ಸೌಲತ್ತುಗಳನ್ನು ಕೊಡಿಸುವತ್ತ ಗಮನ ಹರಿಸಬೇಕು. ಸಕಾಲಕ್ಕೆ ಮಳೆಯಿಲ್ಲದೆ ರೈತರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳು ಸುಲಭವಾಗಿ ಕೈಗೆ ಸಿಗುವಂತಾಗಬೇಕೆಂದು ಹೇಳಿದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಬುದ್ದ, ಬಸವ, ಅಂಬೇಡ್ಕರ್ ಇವರುಗಳು ಸಮಾನತೆಗಾಗಿ ಹೋರಾಡಿದವರು. ಜಾತಿ ಧರ್ಮದ ತಾರತಮ್ಯವಿರಲಿಲ್ಲ. ಸಣ್ಣ ಸಣ್ಣ ರೈತರು ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು. ಆಗ ಮಾತ್ರ ಸಮಾಜಮುಖಿಯಾಗಿ ಕೆಲಸ ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರೈತ ಸಂಘವನ್ನು ಬಲಪಡಿಸುವತ್ತ ಗಮನ ಕೊಡಬೇಕೆಂದು ಧನಂಜಯ ಹಂಪಯ್ಯನಮಾಳಿಗೆ ಇವರಿಗೆ ಸಲಹೆ ನೀಡಿದರು.
ಕರ್ನಾಟಕ ಜನಶಕ್ತಿಯ ಟಿ.ಶಫಿವುಲ್ಲಾ ಮಾತನಾಡುತ್ತ ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ನಾನಾ ರೀತಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳ ನಿವಾರಣೆಗೆ ಸದಾ ಹೋರಾಟವಿರಬೇಕೆಂದು ತಿಳಿಸಿದರು.

ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ರೈತ ಸಂಘದ ಜಿಲ್ಲಾಧ್ಯಕ್ಷ ಸ್ಥಾನವೆಂದರೆ ಹೂವಿನ ಹಾಸಿಗೆಯಲ್ಲಿ ಮುಳ್ಳಿನ ಹಾಸಿಗೆಯಿದ್ದಂತೆ. ಸಂಘದಲ್ಲಿನ ಲೋಪದೋಷ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಸಂಘಟನೆ ಗಟ್ಟಿಯಾಗುತ್ತದೆ ಎಂದರು.

ಉಪನ್ಯಾಸಕ ಬಸವರಾಜ್ ಬೆಳಗಟ್ಟ ಮಾತನಾಡುತ್ತ ರೈತ ಸಂಘ ಹೇಗೆ ಕಾರ್ಯೋನ್ಮುಖವಾಗಿದೆ ಎನ್ನವುದನ್ನು ತಿಳಿದುಕೊಳ್ಳುವುದು ಮುಖ್ಯ. ದುರ್ಬಲರ ಮೇಲೆ ಅಧಿಕಾರಿಗಳ ದಬ್ಬಾಳಿಕೆ ನಡೆಯುತ್ತಿರುವುದನ್ನು ಹತ್ತಿಕ್ಕುವ ಕೆಲಸವಾಗಬೇಕು. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕಾಗಿರುವುದರಿಂದ ಸಂವಿಧಾನ ಓದಿಕೊಳ್ಳಬೇಕೆಂದು ಧನಂಜಯ ಹಂಪಯ್ಯನ ಮಾಳಿಗೆಗೆ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಹೆಗಲಿಗೆ ಹಸಿರು ಶಾಲು ಹಾಕಿಕೊಂಡು 24 ವರ್ಷವಾಯಿತು. ಈಗ ಜವಾಬ್ದಾರಿ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆಯಿದ್ದಾಗ ನಾನು ಹೋರಾಟಕ್ಕಿಳಿದವನು. ಇಲ್ಲಿಯತನಕ ನೂರಾರು ಹೋರಾಟಗಳನ್ನು ಮಾಡಿದ್ದೇನೆ. ಚುನಾವಣೆಯಲ್ಲಿ ಹೆಂಡ ಖಂಡಕ್ಕೆ ಬಲಿಯಾಗಿ ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳಬೇಡಿ. ರೈತರ ಕಷ್ಟ-ಸುಖಗಳನ್ನು ಆಲಿಸುವಂತ ಯೋಗ್ಯರಿಗೆ ಮತ ನೀಡಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಇಲ್ಲಿಯತನಕ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಸದಾ ರೈತರ ಪರವಾಗಿರುತ್ತೇನೆಂದು ಭರವಸೆ ನೀಡಿದರು.

ಗುರುಮೂರ್ತಿ, ದಾಳಿಂಬೆ ಈಶ್ವರಪ್ಪ, ಗಂಗಣ್ಣ, ನಿವೃತ್ತ ಉಪನ್ಯಾಸಕ ನಾಗರಾಜ್, ರಮೇಶ್, ಕೆಂಚವೀರಪ್ಪ, ಬಸಣ್ಣ, ಗುರಣ್ಣ, ತಿಪ್ಪೇಸ್ವಾಮಿ ಬೆಳಗಟ್ಟ, ಗೋವಿಂದಸ್ವಾಮಿ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Tags :
appointedbengaluruchitradurgaDhananjaya HampaiyanamaligeDistrict PresidentfanshonoredKarnataka State Farmers Associationsuddionesuddione newsಅಭಿಮಾನಿಗಳುಕರ್ನಾಟಕ ರಾಜ್ಯ ರೈತ ಸಂಘಚಿತ್ರದುರ್ಗಜಿಲ್ಲಾಧ್ಯಕ್ಷಧನಂಜಯ ಹಂಪಯ್ಯನಮಾಳಿಗೆನೇಮಕಬೆಂಗಳೂರುಸನ್ಮಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article