ಚಿತ್ರದುರ್ಗ | ಬಾರ್ ಲೈನ್ ಶಾಲೆಯಲ್ಲಿ ಸಾಂಸ್ಕೃತಿಕ ಸಂಭ್ರಮ : ಸರ್ಕಾರಿ ಶಾಲೆ ಉಳಿಸಿ ಬೆಳೆಸೋಣ: ಗೀತಾ ಭರಮಸಾಗರ
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.02 : ಸರ್ಕಾರಿ ಶಾಲೆ ಉಳಿಸಿ ಅಭಿಯಾನ"ದಡಿ ಶತಮಾನೋತ್ಸವದಲ್ಲಿರುವ ಚಿತ್ರದುರ್ಗ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಕೆಳಗೋಟೆ ( ಬಾರ್ ಲೈನ್) ಶಾಲೆಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಿ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ಮಾಡಲು ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿರುವುದು ಅತ್ಯಂತ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಜಿಲ್ಲೆ, ಉಪ ನಿರ್ದೇಶಕರ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಚಿತ್ರದುರ್ಗ ತಾಲ್ಲೂಕು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಳಗೋಟೆ (ಬಾರ್ ಲೈನ್ ) ಚಿತ್ರದುರ್ಗ. ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವೆಂದರೆ ಚಾರಿತ್ರ್ಯೆಯ ನಿರ್ಮಾಣವಾಗಿದ್ದು ಜಗತ್ತಿನಲ್ಲಿ ಎಲ್ಲರಿಗಿಂತ ವಿದ್ಯೆಯನ್ನು ಕಲಿಸುವ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠತೆ ಹೊಂದಿದೆ ಗುರುಗಳೇ ಮೊದಲ ಪೋಷಕರು. ಪ್ರಮುಖವಾಗಿ ಸರ್ಕಾರಿ ಶಾಲೆಗಳ ಶಿಕ್ಷಕ ವರ್ಗ ಕೇವಲ ಪಾಠಮಾಡುವ ಬದಲು ಶಾಲೆಯ ಅಭಿವೃದ್ಧಿಯ ಬಗ್ಗೆಯೂ ಹೆಚ್ಚು ಗಮನಹರಿಸಬೇಕು. ಈ ಶಾಲೆಯ ಮಕ್ಕಳ ಹಿನ್ನೆಲೆ ನೋಡಿದಾಗ ಕಣ್ಣಂಚಿನಲಿ ತೇವವಾಗುತ್ತವೆ. ಇಂತಹ ಮಕ್ಕಳಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಕೊಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ( ಎಸ್ ಡಿ ಎಂ ಸಿ) ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಶಾಲೆಯ ಕಟ್ಟಡಗಳು, ಕಿಡಕಿ ಬಾಗಿಲು, ಮೇಲ್ಚಾವಣಿ, ಕಾಂಪೌಂಡ್, ಶೌಚಾಲಯ ಸಂಪೂರ್ಣ ಹಾಳಾಗಿದ್ದು ಮಕ್ಕಳಿಗೆ ಅಧ್ಯಯನದ ವಾತಾವರಣದ ಮರು ನಿರ್ಮಾಣವಾಗಬೇಕು, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಆರ್ಭಟದೊಳಗೆ ನಲುಗಿ ಹೋಗಿವೆ ಅದನ್ನು ಬದಲಾವಣೆ ಮಾಡಲು ಶಾಲೆಯನ್ನು ದತ್ತು ಪಡೆದ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನಕ್ಕೆ ಎಸ್ ಡಿ ಎಂ ಸಿ ಸಮಿತಿ ಅಭಾರಿಯಾಗಿದ್ದೇವೆ ಎಂದರು.
ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿಗಳಾದ ಮಾಲತೇಶ್ ಅರಸ್, ಮಾತನಾಡಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ರಾಜ್ಯ ಮಟ್ಟದಲ್ಲಿ ನಡೆಯಲಿದ್ದು ಚಿತ್ರದುರ್ಗ ದಾವಣಗೆರೆ ತುಮಕೂರು ಜಿಲ್ಲೆಯಲ್ಲಿ ಹೊಸ ಬದಲಾವಣೆಗೆ ಕೈ ಹಾಕಿದೆ. ತಾಲೂಕಿಗೊಂದು ಸರ್ಕಾರಿ ಶಾಲೆಯನ್ನು ಮಾದರಿ ಮಾಡಲು ಪಣತೊಟ್ಟಿದ್ದು ಶಾಲೆಯ ಹಳೆಯ ವಿದ್ಯಾರ್ಥಿಗಳ ಮೂಲಕ "ನಮ್ಮ ಶಾಲೆ ನಮ್ಮ ಕೊಡುಗೆ" ಯಾಗಿ ಶಾಲೆಯ ಅಭಿವೃದ್ಧಿ ನಮ್ಮ ಕಾಯಕವಾಗಿದ್ದು, ಡಿಡಿಪಿಐ ಮತ್ತು ಬಿಇಒ ಅವರ ಮಾರ್ಗದರ್ಶನ ಅಗತ್ಯ ಎಂದರು.
ಮುಖ್ಯೋಪಾಧ್ಯಾಯರಾದ ಡಿ.ಟಿ.ಓಬಣ್ಣ ಮಾತನಾಡಿ, ಈ ಶಾಲೆಯು ಇದೀಗ ಶತಮಾನೋತ್ಸವ ಆಚರಿಸಲು ರೆಡಿಯಾಗುತ್ತಿದೆ. ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ಸಮಾವೇಶ, ಪಾಠ ಮಾಡಿದ ಶಿಕ್ಷಕರಿಗೆ ಗೌರವಿಸುವ ಸಮಯ ಮತ್ತು ಮಾದರಿ ಶಾಲೆಯಾಗಿ ಮಾಡಲ ಹಳೆಯ ವಿದ್ಯಾರ್ಥಿಗಳ ಸಲಹೆ, ಸೂಚನೆ, ಅಭಿಪ್ರಾಯ, ಮಾರ್ಗದರ್ಶನ ಬೇಕು ಎಂದರು.
ವಯೋಸಹಜ ನಿವೃತ್ತಿ ಹೊಂದಿದ ಸಹ ಶಿಕ್ಷಕಿಯಾದ ಜಿ.ಕೆ. ಶಕುಂತಲ ಅವರಿಗೆ ಬಾಗಿನದೊಂದಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಶಾಲೆಯ ಮಕ್ಕಳಿಂದ ಹಾಡು, ನೃತ್ಯ ವಿವಿಧಚಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ನಾಗಭೂಷಣ್ ಮಾತುಗಳನ್ನಡಿದರು, ಕಲಾವಿದ ಎಂ.ಕೆ.ಹರೀಶ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರಶಿಕ್ಷಣಾರ್ಥಿಗಳಾದ ವಿ.ಎಸ್ ಸುಷ್ಮ, ಟಿ ತನಿಷ, ಟಿವಿ ಶೃತಿ, ಸುನೀಲ್ ಕುಮಾರ್, ವಿನಾಯಕ, ಭೂಮಿಕ, ಹೇಮಾವತಿ, ಪಲ್ಲವಿ,ಆಯಿಷಬಾನು ಇವರಿಗೆ ಪ್ರಶಂಶನಾ ಪತ್ರ ವಿತರಿಸಲಾಯಿತು.
ಬಿ.ಎಡ್ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಓಬಣ್ಣ ಸ್ವಾಗತಿಸಿದರು, ಹರೀಶ್ ನಿರೂಪಿಸಿದರು.