ಚಿತ್ರದುರ್ಗ | ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಆರಂಭ
ಸುದ್ದಿಒನ್, ಚಿತ್ರದುರ್ಗ, ಜೂನ್.04 : ಕಾತರದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ ಮತ ಎಣಿಕೆಗೆ ಶುರುವಾಗಿದೆ.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಚುನಾವಣಾ ಸಿಬ್ಬಂದಿ ಈಗಾಗಲೇ ಸ್ಟ್ರಾಂಗ್ ರೂಂ ತೆರೆದು ಮತ ಪೆಟ್ಟಿಗೆಗಳನ್ನು ಹೊರ ತೆಗೆದಿದ್ದು ಪ್ರಕ್ರಿಯೆ ಶುರುವಾಗಿದೆ.
ಚುನಾವಣೆ ಆಯೋಗದ ಅಧಿಕೃತ ಗುರುತು ಚೀಟಿ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳ ಎಣಿಕೆ ಏಜೆಂಟರು, ಅಭ್ಯರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಹೊರತು ಮತ್ಯಾರಿಗು ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿ ಗುರುತು ಚೀಟಿ ಹೊಂದಿರುವವರನ್ನು ಪರಿಶೀಲಿಸಿ ಕೇಂದ್ರದೊಳಗೆ ಬಿಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸಾಮಾನ್ಯ ವೀಕ್ಷಕ ಮನೋಹರ್ ಮರಂಡಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ ಉಪಸ್ಥಿತರಿರುವರು.
ಪಕ್ಷದ ಕಾರ್ಯಕರ್ತರು ಕಾಲೇಜಿನ ಹೊರಭಾಗದಲ್ಲಿ ನಿಂತು ಫಲಿತಾಂಶ ಆಲಿಸಬಹುದಾಗಿದೆ. ಇದಕ್ಕಾಗಿ ಕಾಲೇಜು ಮುಂಭಾಗ ಮೈಕ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಹೊತ್ತಿಗೆಲ್ಲ ಗೆಲುವು, ಸೋಲಿನ ಅಂದಾಜು ಸಿಗುವ ಸಾಧ್ಯತೆ ಇದೆ. ಹಾಗಾಗಿ ಅಭ್ಯರ್ಥಿಗಳು, ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಮೂಡಿದೆ.