ಚಿತ್ರದುರ್ಗ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಈ ಬಾರಿ ಗೆಲುವು ನಮ್ಮದೇ : ಬಿ.ಎನ್.ಚಂದ್ರಪ್ಪ
ಸುದ್ದಿಒನ್, ಚಿತ್ರದುರ್ಗ, ಮಾ. 30 : ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಬ್ಬರ, ಹಣದ ಹೊಳೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ನೀಡುವ ಮೂಲಕ ಕರ್ನಾಟಕದ ಮತದಾರರು ಪ್ರಬುದ್ಧತೆ ಮೆರೆದಿದ್ದು, ಲೋಕಸಭಾ ಚುನಾವಣೆಯಲ್ಲೂ ಈ ಫಲಿತಾಂಶ ಮರುಕಳಿಸಲಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಹೊಸದುರ್ಗ ತಾಲೂಕು ಸಾಣೇಹಳ್ಳಿ, ಕನಕ, ಕುಂಚಿಟಿಗ ಮಠ ಹಾಗೂ ಬೆಲಗೂರು ಆಂಜನೇಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆಡಳಿತ ಸರ್ಕಾರದ ನಡೆಸಿದ ಭ್ರಷ್ಟ ಆಡಳಿತ ಹಾಗೂ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಸುಳ್ಳು ಭರವಸೆಗಳು ಜನರನ್ನು ಭ್ರಮನಿರಸನಗೊಳಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಪ್ರತಿ ವ್ಯಕ್ತಿ ಖಾತೆಗ 15 ಲಕ್ಷ ರೂ. ಪೆಟ್ರೋಲ್ ಬೆಲೆ 25 ರೂಪಾಯಿ ಹೀಗೆ ಅನೇಕ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಒಂದು ಸಣ್ಣ ಭರವಸೆಯನ್ನೂ ಈಡೇರಿಸದೆ ವಂಚಿಸಿದೆ ಎಂದು ದೂರಿದರು.
ಜೊತೆಗೆ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದಲ್ಲಿ ಸ್ಥಾಪನೆ ಮಾಡಿದ್ದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ನಿರುದ್ಯೋಗ ಸಮಸ್ಯೆ ಉಲ್ಬಣಗೊಳಿಸಿದೆ. ಇಂಧನ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು, ಅದರಿಂದ ರಕ್ಷಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಜನರ ನೆರವಿಗೆ ಬಂದಿದೆ ಎಂದರು.
ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಮನೆ ಯಜಮಾನಿಗೆ ಎರಡು ಸಾವಿರ, ಅನ್ನಭಾಗ್ಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ಜಮಾ. ಹೀಗೆ ಅನೇಕ ಯೋಜನೆಗಳು ಜನರನ್ನು ಸಂಕಷ್ಟದಿಂದ ಪಾರು ಮಾಡುತ್ತಿವೆ. ಆದರೆ ಬಿಜೆಪಿ ಸರ್ಕಾರ ಈ ಯೋಜನೆಗಳ ಯಶಸ್ಸು, ಜನರು ನೀಡುತ್ತಿರುವ ಸ್ಪಂದನೆಗೆ ಬೆಚ್ಚಿಬಿದ್ದು, ಅಪಪ್ರಚಾರ ನಡೆಸುತ್ತಿದ್ದಾರೆ. ಬಡವರಿಗೆ ಕೊಟ್ಟರೇ ಬಿಟ್ಟಿ ಭಾಗ್ಯ ಎನ್ನುವ ಬಿಜೆಪಿಯವರು, ಶ್ರೀಮಂತರ ಕೋಟ್ಯಾಂತರ ರೂಪಾಯಿ ಸಾಲವನ್ನು ಮನ್ನ ಮಾಡಿದೆ ಎಂದು ಆರೋಪಿಸಿದರು.
ಕರ್ನಾಟಕದ ರಾಜ್ಯದ ಜನರ ಚಿಂತನೆ, ಚುನಾವಣೆಯಲ್ಲಿ ಕೈಗೊಳ್ಳುವ ನಿರ್ಧಾರ ಇಡೀ ದೇಶಕ್ಕೆ ಮಾದರಿ ಆಗಿದೆ. ಎಷ್ಟು ಹಣದ ಹೊಳೆ ಹರಿಸಿ, ಜಾತಿ, ಧರ್ಮ ಮುಂದಿಟ್ಟುಕೊಂಡು ಚುನಾವಣೆ ನಡೆಸಿದರೂ ಬಿಜೆಪಿ ಪಕ್ಷಕ್ಕೆ ಮಣೆ ಹಾಕದೆ, ಕಾಂಗ್ರೆಸ್ ಪಕ್ಷದ ಜನಪರ ಆಡಳಿತಕ್ಕೆ ಬೆಂಬಲ ನೀಡುತ್ತಿದ್ದಾರೆ. ಹಳ್ಳಿಗಳಿಗೆ ಹೋದ ಸಂದರ್ಭದಲ್ಲಿ ಜನ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬಹಳಷ್ಟು ಅನುಕೂಲ ಆಗಿದೆ ಸ್ವಾಮಿ ಎಂದು ಹೇಳುತ್ತಾರೆ. ಈ ಜನರ ಅಭಿಪ್ರಾಯ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಪ್ರಕಟಗೊಳ್ಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಎಂದರು.
ಚಿತ್ರದುರ್ಗ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದಕ್ಕೆ ಎಂಟು ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಲೋಕಸಭಾ ಚುನಾವಣೆಯಲ್ಲೂ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಬಿಜೆಪಿ ಪಕ್ಷದವರೇ ಹೇಳುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಮನೆಯೊಂದು ನೂರು ಬಾಗಿಲು ಎಂಬಂತೆ ಆಗಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ 25 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರೂ ಎಲ್ಲರೂ ಒಗ್ಗೂಡಿ ಪಕ್ಷದ ಗೆಲುವಿಗೆ ಈಗಾಗಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸಂಸದರಾದವರು ಎಲ್ಲ ಶಾಸಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂಬುದು ನಾನು ಸಂಸದನಾಗಿದ್ದ ಸಂದರ್ಭದಲ್ಲಿ ಸಾಬೀತುಪಡಿಸಿದ್ದೇನೆ. ಯಾವುದೇ ಯೋಜನೆ, ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ನಾವೆಲ್ಲರೂ ಒಗ್ಗೂಡಿ ಸಭೆ ನಡೆಸಿ ಒಮ್ಮತದಿಂದ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವು. ಈ ರೀತಿಯ ನಮ್ಮ ನಡೆ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಕೈಹಿಡಿದಿದೆ. ಅಭ್ಯರ್ಥಿಯಾದ ನನಗಿಂತಲೂ ಮುಂಚಿತವಾಗಿಯೇ ಎಲ್ಲ ಶಾಸಕರು, ಮುಖಂಡರು ಪಕ್ಷದ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂಬ ಅವರ ನಿರ್ಧಾರ, ಶ್ರಮ ನಿಜಕ್ಕೂ ಮಾದರಿ ಆಗಿದೆ ಎಂದರು.
ಜವಳಿ ನಿಗಮದ ಮಾಜಿ ಅಧ್ಯಕ್ಷ, ನೇಕಾರ ಸಮಾಜದ ಹಿರಿಯ ಮುಖಂಡ ಗೋ.ತಿಪ್ಪೇಶ್, ತಾಲುಕು ಪಂಚಾಯಿತಿ ಮಾಜಿ ಸದಸ್ಯ ಗಿರೀಶ್, ಮುಖಂಡರಾದ ನಟರಾಜ್, ಮಲ್ಲಿಕಾರ್ಜುನ್, ಶ್ರೀಧರ್, ಗಿರೀಶಣ್ಣ, ಓಂಕಾರಪ್ಪ, ರಂಗನಾಥ ಆನಿವಾಳ, ಪ್ರಶಾಂತ್, ಅಪ್ಸರ್, ತಿಪ್ಪೇಸ್ವಾಮಿ, ಬಸವರಾಜ್ ಇತರರಿದ್ದರು.
ಮಠಾಧೀಶರ ಆಶೀರ್ವಾದ: ಸಾಣೇಹಳ್ಳಿ ಮಠದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಹಾಮಠದಲ್ಲಿ ಡಾ. ಶ್ರೀ ಶಾಂತವೀರ ಸ್ವಾಮೀಜಿ ಅವರು ಬಿ.ಎನ್.ಚಂದ್ರಪ್ಪ ಅವರಿಗೆ ಆಶೀರ್ವಾದಿಸಿದರು. ಈ ಸಂರ್ಭ ಹೊಸದುರ್ಗ ತಾಲೂಕಿನ ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಸಾಣೇಹಳ್ಳಿ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರನ್ನು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕುಂಚಿಟಿಗ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿ , ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರನ್ನು ಡಾ. ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಸ್ಥಳೀಯ ಮುಖಂಡರು ಇದ್ದರು.