ಚಿತ್ರದುರ್ಗ | ಕೇಂದ್ರ ಗೃಹ ಸಚಿವ ಅಮಿತ್‍ಷಾ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 20 : ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಸಂಸತ್‍ನಲ್ಲಿ ಕೀಳಾಗಿ ಮಾತನಾಡಿ ಸಂವಿಧಾನಕ್ಕೆ ಅಗೌರವ ತೋರಿರುವ ಕೇಂದ್ರ ಗೃಹ ಸಚಿವ
ಅಮಿತ್‍ಷಾ ವಿರುದ್ದ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಅಂಬೇಡ್ಕರ್ ಪ್ರತಿಮೆ ಬಳಿ ತೆರಳಿ ಅಮಿತ್‍ಷಾರವರ ರಾಜಿನಾಮೆಗೆ ಒತ್ತಾಯಿಸಿ ನಂತರ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಕೇಂದ್ರದಲ್ಲಿ ಬಿಜೆಪಿ. ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸಂವಿಧಾನಕ್ಕೆ ಅವಮಾನ ಮಾಡುತ್ತಲೆ ಬರುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡದಿದ್ದರೆ ಅಮಿತ್‍ಷಾ ಕೇಂದ್ರ ಮಂತ್ರಿಯಾಗುತ್ತಿರಲಿಲ್ಲ. ಮೊದಲಿನಿಂದಲೂ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೊಂಡು ಬರುತ್ತಿರುವ ಕೋಮುವಾದಿ ಬಿಜೆಪಿ. ದಲಿತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಪ್ರಧಾನಿ ಮೋದಿ ಈ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಅಮಿತ್‍ಷಾರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಕಾಂಗ್ರೆಸ್‍ನಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಾತನಾಡಿ ಸಂಸತ್‍ನಲ್ಲಿ ಸಂವಿಧಾನ ಕುರಿತು ಚರ್ಚಿಸುತ್ತಿದ್ದ ವೇಳೆಯಲ್ಲಿ ಅಮಿತ್‍ಷಾ ಅಂಬೇಡ್ಕರ್‍ರವರನ್ನು ಜಪಿಸುವ
ಬದಲು ದೇವರ ನಾಮಸ್ಮರಣೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಹೇಳಿ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ಕೂಡಲೆ ಅವರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್
ಯುವ ಮುಖಂಡ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಓ.ಶಂಕರ್, ಎಸ್.ಜಯಣ್ಣ, ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್, ಎನ್.ಡಿ.ಕುಮಾರ್, ಮಂಜುನಾಥ್, ಮುದಸಿರ್‍ನವಾಜ್, ಸೈಯದ್ ಖುದ್ದೂಸ್, ಅಬ್ದುಲ್ಲಾ, ಆರ್.ಶಿವಣ್ಣ, ಆರ್.ಪ್ರಕಾಶ್, ಮುನಿರಾ ಎ.ಮಕಾಂದಾರ್, ಮೋಕ್ಷರುದ್ರಸ್ವಾಮಿ, ಗೀತ ನಂದಿನಿಗೌಡ, ಪವಿತ್ರ, ರೇಣುಕ, ಭಾಗ್ಯಮ್ಮ, ಸುಧಾ ಡಿ.ಎಸ್.ಹಳ್ಳಿ, ಪರ್ವಿನ್‍ಭಾನು, ಪಿ.ಕೆ.ಮೀನಾಕ್ಷಿ, ಅಕ್ಬರ್, ಆರ್.ನರಸಿಂಹರಾಜು, ಕೃಷ್ಣಮೂರ್ತಿ, ಯು.ಲಕ್ಷ್ಮಿಕಾಂತ್, ನ್ಯಾಯವಾದಿ ಸುದರ್ಶನ್, ಚಿದಾನಂದಮೂರ್ತಿ, ಡಿ.ಕುಮಾರಸ್ವಾಮಿ, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಎಲ್.ಕೆ.ರಾಬರ್ಟ್, ಆರ್.ರಮೇಶ್, ನೇತ್ರಾವತಿ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.