ಚಿತ್ರದುರ್ಗ : 15 ದಿನಗಳಲ್ಲಿ ಖಾಲಿ ನಿವೇಶನ ಸ್ವಚ್ಛಗೊಳಿಸಿ, ನಾಮಫಲಕ ಅಳವಡಿಸಿ : ನಗರಸಭೆ ಅಧ್ಯಕ್ಷರ ಮನವಿ
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 04 : ನಗರದ ಖಾಲಿ ನಿವೇಶನಗಳಲ್ಲಿ ಪೊದೆಯಂತೆ ಗಿಡ ಗಂಟೆಗಳು ಬೆಳೆದಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆಯಲ್ಲದೆ. ವಿಷ ಜಂತುಗಳು, ಕೆಟ್ಟ ಹುಳುಗಳು ಸೇರಿಕೊಳ್ಳುತ್ತಿರುವ ಕಾರಣಕ್ಕಾಗಿ ಮಾಲೀಕರುಗಳು ತಮ್ಮ ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡ ಪೊದೆಗಳನ್ನು ಇನ್ನು ಹದಿನೈದು ದಿನಗಳಲ್ಲಿ ತೆಗೆಸಿ ಸ್ವಚ್ಚಗೊಳಿಸಿಕೊಂಡು ಕಾಂಪೌಂಡ್ ನಿರ್ಮಿಸಿ ಮಾಲೀಕರ ಹೆಸರು, ವಿಳಾಸ, ಖಾತಾ/ಅಸೆಸ್‍ಮೆಂಟ್ ಸಂಖ್ಯೆ, ಅಳತೆ, ಪಿ.ಐ.ಡಿ.ನಂ. ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನೊಳಗೊಂಡ ನಾಮಫಲಕ ಅಳವಡಿಸಿ ಬಂದೋಬಸ್ತ್ ಮಾಡಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷೆ ಸುಮಿತ ಬಿ.ಎನ್.ಈರುಳ್ಳಿ ರಘು ಮನವಿ ಮಾಡಿದ್ದಾರೆ.
ಒಂದು ವೇಳೆ ಮಾಲೀಕರುಗಳು ತಮ್ಮ ನಿವೇಶನಗಳನ್ನು ಸ್ವಚ್ಚಗೊಳಿಸಿಕೊಳ್ಳದಿದ್ದರೆ ನಗರಸಭೆಯಿಂದ ಗಿಡ ಗಂಟೆಗಳನ್ನು ತೆಗೆಸಿ ಅದಕ್ಕೆ ತಗಲುವ ವೆಚ್ಚವನ್ನು ಕೆ.ಎಂ.ಬುಕ್‍ನಲ್ಲಿ ಷರಾ ಬರೆದು ಮಾಲೀಕರುಗಳಿಂದ ವಸೂಲಿ ಮಾಡಲಾಗುವುದಲ್ಲದೆ ದಂಡ ವಿಧಿಸಲಾಗುವುದು. ಇದಕ್ಕೆ ನಿವೇಶನಗಳ ಮಾಲೀಕರುಗಳು ಸ್ಪಂದಿಸದಿದ್ದರೆ ಖಾತಾ, ಇ-ಸ್ವತ್ತುಗಳನ್ನು ನೀಡಲಾಗುವುದಿಲ್ಲ ಎಂದು ಅಧ್ಯಕ್ಷೆ ಸುಮಿತ ಬಿ.ಎನ್.ಈರುಳ್ಳಿ ರಘು ಎಚ್ಚರಿಸಿದ್ದಾರೆ.