ಚಿತ್ರದುರ್ಗ | ಸಿಟಿ ಇನ್‍ಸ್ಟಿಟ್ಯೂಟ್ ಚುನಾವಣೆ : ನೂತನ ಕಾರ್ಯದರ್ಶಿಯಾಗಿ ವೆಂಕಟೇಶ್ ರೆಡ್ಡಿ ಆಯ್ಕೆ...!
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 01 : ನಗರದ ಸಿಟಿ ಇನ್‍ಸ್ಟಿಟ್ಯೂಟ್ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಎನ್.ಎಲ್.ವೆಂಕಟೇಶರೆಡ್ಡಿ, ಉಪಾಧ್ಯಕ್ಷರಾಗಿ ಟಿಎಸ್‍ಎನ್ ಜಯಣ್ಣ, ಖಜಾಂಚಿಯಾಗಿ ಅಜಿತ್ ಪ್ರಸಾದ್ ಜೈನ್ ಆಯ್ಕೆಯಾಗಿದ್ದು, 7 ಮಂದಿ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಎರಡು ಗುಂಪುಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಆಡಳಿತ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿದ್ದ ಚಿತ್ರಲಿಂಗಪ್ಪ ಅವರು ವೆಂಕಟೇಶರೆಡ್ಡಿ ಅವರ ಎದುರು 26 ಮತಗಳ ಅಂತರಿಂದ ಸೋಲು ಕಂಡರು.
ಕಳೆದ ಆಡಳಿತ ಮಂಡಳಿಯಲ್ಲಿ ಖಜಾಂಚಿಯಾಗಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಳಿಯ ಅಜಿತ್ ಪ್ರಸಾದ್ ಜೈನ್ ಅವರು ಪರಮೇಶ್ವರಪ್ಪ ಹಾಗೂ ವಿಶ್ವನಾಥ್ ಅವರನ್ನು ಸೋಲಿಸಿ ಮರು ಆಯ್ಕೆಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿಎಸ್‍ಎನ್ ಜಯಣ್ಣ ಅವರು ಎಚ್.ಸಿ.ನಿರಂಜನಮೂರ್ತಿ ಅವರ ವಿರುದ್ಧ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ಜಿಲ್ಲಾ ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್ ಕಾರ್ಯನಿರ್ವಹಿಸಿದರು.