ಚಿತ್ರದುರ್ಗ | ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ, ಜೂ. 17 : ರಾಜ್ಯ ಸರ್ಕಾರ ತನ್ನ ಗ್ಯಾರೆಂಟಿಗಳಿಗೆ ಹಣವನ್ನು ಹೊಂದಿಸುವ ಸಲುವಾಗಿ ಜನತೆ ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವುದರ ಮೂಲಕ ಬರೆಯನ್ನು ಎಳೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಎಸ್ಸಿ.ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್‍ಕಾರಜೋಳ ವಾಗ್ದಾಳಿಯನ್ನು ನಡೆಸಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಸವಿನೆನೆಪಿಗಾಗಿ ತನ್ನ ಮತದಾರರಿಗೆ ಡೀಸೆಲ್ ಪೆಟ್ರೋಲ್ ಬೆಲೆಯನ್ನು ಏರಿಸುವುದರ ಮೂಲಕ ಕೊಡುಗೆಯಾಗಿ ನೀಡಿದೆ, ಇದರ ವಿರುದ್ದ ಜನತೆ ಬಂಡೇಳ ಬೇಕಿದೆ, ಸರ್ಕಾರ ಏರಿಸಿರುವ ಬೆಲೆಯನ್ನು ಇಳಿಸುವವರೆಗೂ ಬಿಜೆಪಿ ಹೋರಾಟವನ್ನು ನಡೆಸಲಿದೆ ಎಂದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿ ರಾಜ್ಯದ ಜನತೆಯನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರೆಂಟಿಗಳನ್ನು ನೀಡಲು ಹಣವಿಲ್ಲದೆ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಹೆಚ್ಚಿಸಿ ಬಡವರ ಮೇಲೆ ಹೊರೆ ಹೇರಿದ್ದಾರೆ. ಸ್ಟಾಂಪ್ ಡ್ಯೂಟಿ ಜಾಸ್ತಿಯಾಗಿದೆ. ಮದ್ಯದ ಬೆಲೆ ದುಬಾರಿಯಾಗಿದೆ. ಬಡವರ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದಿಂದ ಪ್ರಯಾಣ ದರ ಸೇರಿದಂತೆ ಸಾಗಾಣಿಕೆ ವೆಚ್ಚ ಏರಿಕೆಯಾಗುತ್ತದೆ. ಓಟಿಗಾಗಿ ಗ್ಯಾರೆಂಟಿ ಯೋಜನೆಗಳನ್ನು ನೀಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಹೆಣಗಾಡುತ್ತಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ ಈ ಸರ್ಕಾರ ಬೇಕಿಲ್ಲ. ತಕ್ಷಣವೇ ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿ ಸಂಭ್ರಮಾಚರಣೆಯಲ್ಲಿರುವ ಇದರ ಬೆನ್ನಲ್ಲೆ ಸ್ಟಾಂಪ್ ಡ್ಯೂಟಿ, ಮದ್ಯದ ಬೆಲೆ ಹೆಚ್ಚಿಸಿ ಬಡವರಿಗೆ ಬರೆ ಎಳೆದಿದೆ. ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರದಲ್ಲಿ ಬೊಕ್ಕಸ ಖಾಲಿಯಾಗಿದ್ದರೂ. ಸುಮ್ಮನೆ ಶೋ ಕೊಡುತ್ತಿದ್ದಾರೆ. ಡೀಸೆಲ್ 3.50 ರೂ. ಪೆಟ್ರೋಲ್ ಲೀಟರ್‍ಗೆ ಮೂರು ರೂ.ಗಳನ್ನು ಜಾಸ್ತಿ ಮಾಡಿ. ಬಡವರು, ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕಿದೆ. ರೈತರಿಗೆ ಬೀಜ, ರಸಗೊಬ್ಬರಗಳ ಕೊರತೆಯಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರಣಿ ಕೊಲೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ಬಿಜೆಪಿ. ರೈತ ಮೋರ್ಚ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ನಾಗರಾಜ್ ಸಂಗಮ್, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಉಪಾಧ್ಯಕ್ಷೆ ಶ್ಯಾಮಲ ಶಿವಪ್ರಕಾಶ್, ಬಸಮ್ಮ, ವೀಣ, ಕವನ, ರಜಿನಿ, ಕಿರಣ್, ಆದರ್ಶ, ವೀರೇಶ್, ಅಭಿಲಾಷ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.