ಚಿತ್ರದುರ್ಗ | ಬಿಜೆಪಿ ಸದಸ್ಯರು ಕಾಂಗ್ರೆಸ್ ಜೊತೆಗೂಡಿ ನಗರಸಭೆ ಆಸ್ತಿ ಲೂಟಿ ಮಾಡಲು ಹೊರಟಿದ್ದಾರೆ : ಶ್ರೀನಿವಾಸ್ ಆರೋಪ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 16 : ನಗರಸಭೆಗೆ ಸೇರಿದ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿಗಳನ್ನು ಉಳಿಸಲು ಅಭಿಯಾನ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶ್ರೀನಿವಾಸ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಳ್ಳಕೆರೆ ರಸ್ತೆಯಲ್ಲಿರುವ ಆದಿಶಕ್ತಿ ಬಡಾವಣೆಯಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ವ್ಯಕ್ತಿಯೋರ್ವರು ಗುಜರಿ ಅಂಗಡಿಯಿಟ್ಟುಕೊಂಡಿದ್ದು, ಅಲ್ಲಿ ನಗರಸಭೆ ಜಾಗ ಎಂಬ ನಾಮಫಲಕ ಅಳವಡಿಸಲು ಹೋದಾಗ ನಗರಸಭೆ ಸದಸ್ಯ ದೀಪು ಅಡ್ಡಿಪಡಿಸಿ ಅಕ್ರಮಕ್ಕೆ ಕೈಜೋಡಿಸುತ್ತಿರುವುದು ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ. ನಗರಸಭೆ ಖಾಲಿ ಜಾಗವನ್ನು ಲೂಟಿ ಹೊಡೆಯಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಆದಿಶಕ್ತಿ ನಗರ ಮೂರು ಮತ್ತು ನಾಲ್ಕನೆ ಕ್ರಾಸ್‍ನಲ್ಲಿ ಅರವತ್ತು ಇಂಟು ನಲವತ್ತು ಅಡಿ ವಿಸ್ತೀರ್ಣವುಳ್ಳ ಎಂಟು ಖಾಲಿ ಜಾಗಗಳಿದ್ದು, ನಗರಸಭೆ ವ್ಯಾಪ್ತಿಗೆ ಸೇರಿದ ಅನೇಕ ಬಡಾವಣೆಗಳಲ್ಲಿರುವ ಜಾಗಗಳನ್ನು ನಗರಸಭೆ ಗಮನಕ್ಕೆ ತಾರದೆ ಕೆಲವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಅಂತಹ ಜಾಗಗಳಲ್ಲಿ ನಗರಸಭೆ ಸ್ವತ್ತು ಎಂಬ ನಾಮಫಲಕ ಅಳವಡಿಸಲು ಬಿಡುತ್ತಿಲ್ಲ. ಜಾಗ ಸಂರಕ್ಷಣೆಗೆ ಹೋದರೆ ದೌರ್ಜನ್ಯವೆಸಗುತ್ತಿದ್ದಾರೆಂದು ದೂರಿದರು.
1984-85 ರಲ್ಲಿ ನಾಲ್ಕುವರೆ ಎಕರೆ ಜಾಗವನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ಹರಾಜು ಹಾಕಿದಾಗ ಕೆಲವರು ಕಿಮ್ಮತ್ತು ಕಟ್ಟಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಹಣ ಕಟ್ಟದ ಕೆಲವರು ನಿವೇಶನಗಳನ್ನು ಪಡೆದುಕೊಂಡಿಲ್ಲ. ಕೆಲವು ಪ್ರಭಾವಿಗಳು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದಾರೆ. ಮೂವತ್ತರಿಂದ ನಲವತ್ತು ಕೋಟಿ ರೂ.ಆಸ್ತಿಯಿದೆ. ನಗರಸಭೆ ಜಾಗವನ್ನು ಕಾಪಾಡುವಂತೆ ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿದ್ದೇವೆ. ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಗರಸಭೆ ಜಾಗಗಳನ್ನು ಉಳಿಸುವಂತೆ ನಗರಸಭೆ ಸದಸ್ಯ ಶ್ರೀನಿವಾಸ್ ಮತ್ತು ಭಾಸ್ಕರ್ ಇವರುಗಳು ಮನವಿ ಮಾಡಿದರು.
ಆದಿಶಕ್ತಿ ನಗರದಲ್ಲಿ ನಗರಸಭೆ ಜಾಗದಲ್ಲಿ ಗುಜರಿ ಅಂಗಡಿಗಳನ್ನಿಟ್ಟುಕೊಂಡಿರುವ ರಮೇಶ್, ರವಿ ಇವರುಗಳು ಜಾಗ ಬಿಟ್ಟುಕೊಡಲು ತಯಾರಿದ್ದರು. ನಗರಸಭೆ ಸದಸ್ಯ ದೀಪು ಕ್ಯಾತೆ ತೆಗೆಯುತ್ತಿದ್ದಾರೆ. ನಗರಸಭೆಯಲ್ಲಿ ಬಿಜೆಪಿ. ಬಹುಮತ ಪಡೆದುಕೊಂಡಿದ್ದರು ನಮ್ಮ ಪಕ್ಷದವರೆ ನಾಲ್ವರು ಸದಸ್ಯರು ಹಣದ ಆಸೆಗೆ ಕಾಂಗ್ರೆಸ್ ಜೊತೆ ಕೈಜೋಡಿಸಿ ನಗರಸಭೆ ಜಾಗಗಳನ್ನು ಲೂಟಿ ಮಾಡಲು ಹೊರಟಿದ್ದಾರೆ. ಅದಕ್ಕೆ ನಾವುಗಳು ಅವಕಾಶ ಕೊಡುವುದಿಲ್ಲವೆಂದು ಎಚ್ಚರಿಸಿದರು.
ನಗರಸಭೆ ಮಾಜಿ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಸದಸ್ಯ ಹರೀಶ್, ಗುಜರಿ ಅಂಗಡಿಯ ರಮೇಶ್, ರವಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.