ಚಿತ್ರದುರ್ಗ | 26 ವರ್ಷಗಳ ಬಳಿಕ ಗುರು - ಶಿಷ್ಯರ ಸಮ್ಮಿಲನ : ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮ!
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 21 : ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ 1996-97 ಹಾಗೂ 1997 - 98 ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಗುರು ಶಿಷ್ಯರ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮವು ಭಾನುವಾರ ಅರ್ಥಪೂರ್ಣವಾಗಿ ಭಾನುವಾರ ನಡೆಯಿತು.
ಎನ್. ಡಿ. ಕುಮಾರ್, ರವಿ ಎಚ್. ವಿ, ಅಕ್ಬರ್ ಹಾಗೂ ಪುಷ್ಪಾರಾಣಿಯವರ ನೇತೃತ್ವದಲ್ಲಿ 26 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ, ನಿವೃತ್ತಿ ಜೀವನ ನಡೆಸುತ್ತಿರುವ ಪ್ರಾಧ್ಯಾಪಕರನ್ನು ಪುನಃ ಕಾಲೇಜಿಗೆ ಕರೆಯಿಸಿ ಅವರಿಗೆ ಗುರುವಂದನೆಯನ್ನು ಸಮರ್ಪಿಸಿದ ಕ್ಷಣ ಅವಿಸ್ಮರಣೀಯವಾಗಿತ್ತು.
ಹೊನ್ನಾ ರೆಡ್ಡಿ ಯವರು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ ಗುರುಗಳ ನೆನಪಿಸಿಕೊಳ್ಳುವ ಸಂಪ್ರದಾಯ ಅಪರೂಪವಾದದ್ದು ಅಗತ್ಯವಾದದ್ದು ಎಂದರು.
ರಸಾಯನ ಶಾಸ್ತ್ರ ಉಪನ್ಯಾಸಕರಾದ ಗೋಪಾಲ್ ಅವರು ಮಾತನಾಡಿ, ಹದಿನಾರನೆಯ ವಯಸ್ಸಿನಲ್ಲಿ ಭವಿಷ್ಯದ ಕನಸುಗಳನ್ನು ಸಾಕಾರಮಾಡಿಕೊಳ್ಳಲು ಹೆಜ್ಜೆಯಿರಿಸಿದ್ದ ನೀವು ಈಗ ಜವಾಬ್ದಾರಿಯ ಹೊತ್ತಿರುವ ಭಾರತದ ಹೆಮ್ಮೆಯ ಪ್ರಜೆಗಳಾಗಿದ್ದೀರಿ ಎಂದರು.
ವಿವೇಕಾನಂದ ಅವರು ಮಾತನಾಡಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಮಾದರಿಯಾಗಿ ಎಂದು ಸಲಹೆ ನೀಡಿದರು. ಸೀತಣ್ಣನವರು ಹಳೆಯ ವಿದ್ಯಾರ್ಥಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ನಂತರ ಹಾಡನ್ನೂ ಹಾಡಿ ಎಲ್ಲರನ್ನೂ ಆಶೀರ್ವದಿಸಿದರು. ಮಂಜುನಾಥ ಅವರು ಮಾತನಾಡಿ ತಮ್ಮ ಹಿರಿಯ ಸಹೋದ್ಯೋಗಿಗಳನ್ನು ಮೆಚ್ಚುತ್ತಲೇ ನಮ್ಮ ಮುಂದಿನ ನಡೆ ಆರೋಗ್ಯಕರವಾಗಿರಲಿ ಪ್ರಬುದ್ಧವಾಗಿರಲಿ ಎಂದು ಹಾರಿಸಿದರು.
ಹೊನ್ನಾರೆಡ್ಡಿ, ಬಣಕಾರ್, ಗೋಪಾಲ್, ವಿವೇಕಾನಂದ, ಮಂಜುನಾಥ್ ರವರು ಗುರುವಂದನೆ ಸ್ವೀಕರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ತಾವು ನರ್ವಹಿಸುತ್ತಿರುವ ಉದ್ಯೋಗ, ವ್ಯಾಪಾರ ವಹಿವಾಟು ಸೇರಿದಂತೆ ತಮ್ಮ ಇಂದಿನ ಸ್ಥಿತಿಯನ್ನು ಗುರುಗಳೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಸಾಧಿಸಿದ ಸಾಧನೆಯನ್ನು ಮತ್ತು ಅವರು ನಡೆಸುತ್ತಿರುವ ಜೀವನ ಶೈಲಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಗುರುಶಿಷ್ಯರ ಅಪರೂಪದ ಮಾತುಕತೆಯ ನಡುವೆ ಹಾಡು, ತಮಾಷೆ, ಸ್ವಾರಸ್ಯಕರ ಪ್ರಸಂಗಗಳೂ ಬಂದುಹೋದವು. ನೆನಪು ಸಾವಿರ ನೆನಪಾಗಿ ಒಬ್ಬೊಬ್ಬರ ಪರಿಚಯದಲ್ಲಿ ಮೂಡಿಬಂದಿತು.
ಪುಷ್ಪರಾಣಿ ನಿರೂಪಿಸಿದರೆ, ಎನ್ ಡಿ ಕುಮಾರ್ ಪ್ರಾಸ್ತಾವಿಕ ನುಡಿದರು. ತಿಪ್ಪೇಸ್ವಾಮಿ ವಂದಿಸಿದರು. ಅಕ್ಬರ್ ಸನ್ಮಾನ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಎರಡೂವರೆ ದಶಕದ ನಂತರ ಭೇಟಿಯಾದವರಲ್ಲಿ ಹೇಳತೀರದ ಸಂತೋಷ ಮನೆ ಮಾಡಿತ್ತು. ಅಂದಿನ ದಿನಗಳನ್ನು ನೆನೆದು ಭಾವುಕರಾಗಿ ಕಣ್ಣಂಚಿನಲ್ಲಿ ನೀರು ಹೊಂಚು ಹಾಕಿತ್ತು. ಎಲ್ಲರೂ ಎಲ್ಲರನ್ನೂ ನೋಡಿ ಹರ್ಷತುಂದಿಲರಾಗಿ ಸಂಭ್ರಮಿಸಿದರು. ದೂರದೂರಿನಿಂದ ಬಂದ ಸ್ನೇಹಿತರ ಮಾತು ಹರಟೆ ತರಲೆ ನಡೆದೇ ಇತ್ತು. ಈ ಅಪರೂಪದ ಕಾರ್ಯಕ್ರಮಕ್ಕೆ ಸರ್ಕಾರಿ ವಿಜ್ಞಾನ ಕಾಲೇಜು ಸಾಕ್ಷಿಯಾಗಿತ್ತು.
ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ನೆನೆದರು. ಬಳಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ 90 ರ ದಶಕದ ಸಿನಿಮಾ ಹಾಡು, ಸಾಹಿತ್ಯ ಮೆಲುಕು ಹಾಕಿದ್ದು ಗಮನ ಸೆಳೆಯಿತು. ತರಗತಿ ಕೋಣೆ ಹೊಕ್ಕು ಕೂತಲ್ಲೇ ಕೂತು ಕಾಲಘಟ್ಟದಲ್ಲಿ ಹಿಂದೆ ಪ್ರಯಾಣಿಸಿ ಬಂದಂತಾಯಿತು. ನಂತರ ಸ್ನೇಹಿತರೆಲ್ಲ ಜೋಗಿಮಟ್ಟಿ ಗಿರಿಧಾಮಕ್ಕೆ ಊಟ, ಆಟ, ಹಾಡು, ಅನುಭವ ಹಂಚಿಕೊಂಡು ತೆರಳಿದರು.