ಚಿತ್ರದುರ್ಗ | ವಿವಿಧ ಮಠಾಧೀಶರಿಂದ ಸಸಿ ನೆಡುವ ಸಪ್ತಾಹಕ್ಕೆ ಚಾಲನೆ
ಸುದ್ದಿಒನ್, ಚಿತ್ರದುರ್ಗ, ಮೇ, 30, ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಸಿಲ ಝಳಕ್ಕೆ ಜೀವರಾಶಿ ತಲ್ಲಣಿಸಿತ್ತು. ಪ್ರಸಕ್ತ ಸಾಲಿನ ಮೂರನೇ ಮಳೆ ಕೃತಿಕಾ ಭಾರಿ ಪ್ರಮಾಣದ ಗುಡುಗು ಸಿಡಿನಿಂದ ಆರಂಭವಾಗಿ ಮಳೆಯ ಸಿಂಚನ ಇಳೆಗೆ ಇದೀಗ ಆಗಿರುವುದು ಸರಿ ಅಷ್ಟೇ. ಮೇಘ ಸ್ಪರ್ಶದಿಂದ ತಂಪಾದ ಧರೆಯ ಮೇಲಿನ ಸಸ್ಯರಾಶಿಗೆ ಜೀವ ಕಳೆ ಬಂದು, ತಂಪಿನ ವಾತಾವರಣದ ಜೊತೆಗೆ ಹಸಿರಾಗಿರುವುದು ಸಂತಸದ ಸಂಗತಿ.
ಇಂತಹ ಸಂದರ್ಭದಲ್ಲಿ ಹವಾಮಾನದ ಕ್ರಮವನ್ನು ಮನಗಂಡ ಐತಿಹಾಸಿಕ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತದರ ಅಂಗ ಸಂಸ್ಥೆ ಎಸ್ ಜೆ ಎಂ ವಿದ್ಯಾ ಪೀಠದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಆಲೋಚಿಸಿ ಶ್ರೀಮಠಕ್ಕೆ ಸಂಬಂಧಿಸಿದ ವಿವಿಧ ಕಡೆಯ ಖಾಲಿ ಜಾಗ ಮತ್ತು ವಿದ್ಯಾಪೀಠದಡಿಯಲ್ಲಿ ಬರುವ ಸ್ಥಳೀಯ ಶಾಲಾ-ಕಾಲೇಜುಗಳ ಪ್ರದೇಶ ಗುರುತಿಸಿ, ಅದರೊಂದಿಗೆ ಜಿಲ್ಲಾ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬರುವ ಜೂನ್ 5, ವಿಶ್ವ ಪರಿಸರ ದಿನ ಆದಕ್ಕೋಪ್ಪುವಂತೆ ಇಂದಿನಿಂದ ಏಳು ಕಡೆ ಸಾವಿರಾರು ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಂಡು ಇಂದು ಅದಕ್ಕೆ ಚಾಲನೆ ನೀಡಲಾಯಿತು.
ಚಿತ್ರದುರ್ಗ ನಗರದ ಎಸ್ ಜೆ ಎಂ ತಾಂತ್ರಿಕ ಮಹಾವಿದ್ಯಾಲಯ ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವ್ಯಾಪ್ತಿಗೆ ಬರುವ ಇತರ ಶಾಲಾ ಕಾಲೇಜುಗಳು ಹಾಗೂ ವಿದ್ಯಾರ್ಥಿನಿಲಯಗಳ ಆವರಣದಲ್ಲಿಂದು ಅಕ್ಷರಶಃ ಸಂಭ್ರಮ ಮನೆ ಮಾಡಿತ್ತು. ನಿಗದಿತ ಸಮಯ ಗೊತ್ತು ಮಾಡಿದಂತೆ ಆವರಣದಲ್ಲಿ ಶಾಲಾ-ಕಾಲೇಜುಗಳ ಬಹುತೇಕ ಎಲ್ಲ ಸಿಬ್ಬಂದಿ ಕೆಲ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಖುಷಿಯಿಂದ ಬಂದು ಸೇರಿದರು. ಮುಂಜಾಗ್ರತೆಯಾಗಿ ಸಸಿ ನೆಡಲು ತೋಡಿದ ಗುಂಡಿಗಳ ಹತ್ತಿರ ವಿವಿಧ ಬಗೆಯ ಸಸಿಗಳನ್ನು ಇಡಲಾಗಿತ್ತು. ಮುರುಘಾಮಠದ ವಿವಿಧ ಶಾಖಾ ಮಠಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ ಆಗಮನವಾಯಿತು.
ನಂತರ ಗೌರವಾನ್ವಿತ ಅತಿಥಿಗಳಲ್ಲಿ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನೆರದ ಪರಿಸರಾಸಕ್ತರನ್ನು ಉದ್ದೇಶಿ ಯಾವುದೇ ವಿಶೇಷ ದಿನಗಳನ್ನು ಯಾಂತ್ರಿಕವಾಗಿ ಆಚರಿಸುವುದು ಒಂದು ರೀತಿಯಾದರೆ ಮತ್ತೊಂದು ರೀತಿ ಪರಿಣಾಮಕಾರಿಯಾಗಿ ಆಚರಿಸಿ ಅದನ್ನು ಸಮಾಜಕ್ಕೆ ಕೊಡುಗೆಯಾಗುವ ರೀತಿ ಅನುಷ್ಠಾನಕ್ಕೆ ತರುವುದು ಇನ್ನೊಂದು ಬಗೆಯದು.
ಆದರೆ ನಾವಿಂದು ಹಮ್ಮಿಕೊಂಡಿರುವ ಏಳು ದಿನಗಳ ಸಸಿ ನೆಡುವ ಸಪ್ತಾಹ ಕೇವಲ ಆಚರಣೆಗೆ ಸೀಮಿತವಾಗಬಾರದು, ಅದರಿಂದ ನಮ್ಮ ನಡವಳಿಕೆಯನ್ನು ಈಗಿನ ವಿದ್ಯಾರ್ಥಿ ಹಾಗೂ ಯುವ ಸಮೂಹಕ್ಕೆ ಮಾದರಿಯಾಗಬಲ್ಲ ನಡೆಯಾಗಬೇಕೆಂಬ ಆಶಯ ಈ ವಿಶ್ವ ಪರಿಸರ ದಿನದ ಉದ್ದೇಶವಾಗಿದೆ.,ಸರ್ಕಾರದ ಯಾವುದೇ ಯೋಜನೆಯ ಕಾರ್ಯಗಳು ಕಾರ್ಯಗತವಾಗಿ ಫಲಪ್ರದವಾಗಲು ಸಾರ್ವಜನಿಕರ ಸಹಭಾಗಿತ್ವ ಮತ್ತು ಅನುಷ್ಠಾನ ಅಗತ್ಯ. ಈ ಆವರಣದಲ್ಲಿಂದು ಕನಿಷ್ಠ ಒಂದು ಸಾವಿರ ಸಸಿ ನೆಡಲು ಅಗತ್ಯಕ್ರಮ ಕೈಗೊಳ್ಳಲಾಗಿದೆ .ಅದರಂತೆ ಸಂಬಂಧಿಸಿದವರಿಗೆ ಸೂಚನೆಯನ್ನು ನೀಡಲಾಗಿದ್ದು, ಇಲ್ಲಿರುವ ಎಲ್ಲ ಪ್ರಾಚಾರ್ಯರು ಮತ್ತು ಸಿಬ್ಬಂದಿ ಒಂದು ಜವಾಬ್ದಾರಿ ತೆಗೆದುಕೊಳ್ಳಬೇಕು. ಒಂದು ಸಾವಿರ ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಇಂತಿಷ್ಟು ಅಂತ ಭಾಗ ನೀವೇ ಮಾಡಿಕೊಂಡು ಸಲಹುವ ಕ್ರಮಕ್ಕೆ ಮುಂದಾಗಬೇಕಾಗಿದೆ.
ಮುಖ್ಯಸ್ಥರುಗಳು ಕಾಲೇಜಿನ ಒಳಗೆ ಹೆಜ್ಜೆ ಇಡುವ ಮುನ್ನ ಗಿಡಗಳನ್ನು ಒಮ್ಮೆ ನೋಡಿ ಆಮೇಲೆ ಒಳಗೋಗಿ ಎಂದು ಸಲಹೆ ನೀಡಿದರು. ನಮ್ಮ ಮನೆಯ ಮಕ್ಕಳು ಮತ್ತು ಸದಸ್ಯರಂತೆ ನೆಟ್ಟಿರುವ ಗಿಡಗಳನ್ನು ನೋಡಿಕೊಂಡು ಸಲಹಲಾಗುತ್ತೆಂಬ ಹೊಣೆಗಾರಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಸಾನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತ ಮಠ ಹಾಗೂ ಶಿವಯೋಗಾಶ್ರಮದ ಬಸವ ಪ್ರಭು ಸ್ವಾಮೀಜಿಯವರು ಮಾತನಾಡಿ ಹಿಂದೆ ಒಂದು ಮಾತಿತ್ತು. ಧರ್ಮೋ ರಕ್ಷತಿ ರಕ್ಷಿತಹಃ ಎಂದು. ಆದರೆ ಅದಕ್ಕಿಂತ ಹೆಚ್ಚಿನ ಮಹತ್ವದ ಮಾತು ಅಂದರೆ ವೃಕ್ಷೋ ರಕ್ಷತಿ ರಕ್ಷಿತಹ ಅಂದರೆ ಮೊನ್ನೆಯ ತಾಪಮಾನ ಹೆಚ್ಚು ಪ್ರಮಾಣದ ಭೀಕರತೆಯನ್ನು ಸೃಷ್ಟಿಸಿತ್ತು. ಮಧ್ಯ ಕರ್ನಾಟಕದ ನಾವು ಅಂದುಕೊಂಡಿದ್ದೆವು ಎಲ್ಲೋ ಬೀದರ್, ಗುಲ್ಬರ್ಗ, ಬಳ್ಳಾರಿ, ರಾಯಚೂರು ಭಾಗದಲ್ಲಿ ಅತಿಯಾದ ತಾಪಮಾನ ಆಗುತ್ತದೆ ಅಂತ .ಆದರೆ ಅಂತಹ ರಣಬಿಸಿಲಿನ ತಾಪ ನಮ್ಮ ಭಾಗದ ಬುಡಕ್ಕು ಬಂದು ಹೇಗೆ ಈ ಬಿಸಿಲಿನ ಬೇಗೆಯಿಂದ ಪಾರಾಗುವುದು ಎಂದು ಚಿಂತಿತರಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ದಿನದ 24 ಗಂಟೆಯೂ ಸಹ ಪರಿಸರ ಜಾಗೃತಿ ಅಭಿಯಾನದ ಕಡೆಗೆ ಮುಖ ಮಾಡಿದರು ಕಡಿಮೆಯೇ, ಕಾರಣ ಪರಿಸರ ಅಷ್ಟೊಂದು ಅದೋಗತಿಯತ್ತ ಸಾಗಿದೆ. ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು ಮಾಡುವಂತಹ ಕ್ರಮಕ್ಕೆ ಕಡಿವಾಣ ಹಾಕಿ ಪರಿಸರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವತ್ತ ನಮ್ಮ ಚಿತ್ತ ಹರಿಯಬೇಕು .ಆಗಾದಾಗ ಮಾತ್ರ ನಿಜವಾದ ಅಭಿವೃದ್ಧಿ ಎಂದು ಹಿತ ನುಡಿದರು.
ಸಮಾರಂಭ ನೇತೃತ್ವ ವಹಿಸಿದ್ದ ಶಿವಶರಣ ಮಾದರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಜಿ ಅವರು ಮಾತನಾಡಿ ಈ ಪರಿಸರ ದಿನ ಆಗಲಿ ಅಥವಾ ವನಮಹೋತ್ಸವ ಆಗಿರಬಹುದು ಇದು ಎಲ್ಲರ ಸಹಭಾಗಿತ್ವದಿಂದ ನಡೆಯಬೇಕು. ಈಗಿನ ಪರಿಸರದ ಗರಿಷ್ಠ ತಾಪಮಾನ ಕೇವಲ ನಮ್ಮ ದೇಶ ಕ್ಕಷ್ಟೇ ಅಲ್ಲ ಇಡೀ ಜಗತ್ತನ್ನು ಆವರಿಸಿದೆ. ಇದರ ವ್ಯತ್ಯಯದಿಂದ ಋತುಮಾನ ಆದರಿಸಿ ಬರಬೇಕಾದ ಮಳೆಗಳು ಹದ ತಪ್ಪಿ ಅಲ್ಲಿ ಬರಬೇಕಾದ ಮಳೆ ಇಲ್ಲಿ,ಇಲ್ಲಿ ಬರುವ ಮಳೆ ಮತ್ತೆಲ್ಲೋ ಬರುವಂತಹ ವಾತಾವರಣ ಸೃಷ್ಟಿ ಆಗಿರುವುದು ಕಳವಳಕಾರಿ. ಆದ್ದರಿಂದಲೇ ಕಳೆದ ವರ್ಷವಿಡೀ ಮಳೆ ಬಾರದೆ ಭೀಕರ ಬರಗಾಲ ಅನುಭವಿಸಬೇಕಾಯಿತು.
ಕಾರಣ ನಮ್ಮ ಅತಿಯಾದ ನಿರೀಕ್ಷೆಗಳು, ಅಭಿವೃದ್ಧಿಯ ಹೆಸರಲ್ಲಿ ನಗರೀಕರಣ, ಅದರಿಂದ ಗಿಡಮರಗಳು ಕೊಡಲಿಯ ಏಟಿಗೆ ಅಹುತಿಯಾಗುವುದು, ಅಮೂಲ್ಯ ಸಸ್ಯ ಸಂಪತ್ತು ಹಾಳಾಗಿ ಕಾಂಕ್ರೀಟ್ ಕಾಡು ತಲೆ ಎತ್ತಿ ಬೆಳೆದಿರುವುದು ಅನಾರೋಗ್ಯಕರ ಬೆಳವಣಿಗೆಗೆ ಒಂದು ನಿದರ್ಶನ. ಒಂದು ವರದಿಯ ಸಮೀಕ್ಷೆ ಪ್ರಕಾರ ರೈತರು ತಮ್ಮ ಹೊಲದಲ್ಲಿನ ಬದುವಿನಲ್ಲಿ ಇರುವ ಸುಮಾರು 50 ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಿರುವ ಘಟನೆ ಆತಂಕ ಎಂದು ವಿಷಾದಿಸಿದರು. ಗಿಡ ಮರ ಪೋಷಣೆ ಮಾಡೋದು ಮನುಷ್ಯನ ಒಳಿತಿಗಾಗಿ ಆದರೆ ಗಿಡ ಮರಗಳ ಉಪಯೋಗಕ್ಕೆ ಅಲ್ಲ ಎಂಬುದನ್ನು ಅರಿತು ನಾವು ನಾವು ಆರೋಗ್ಯಕರ ಪರಿಸರದತ್ತ ಹೆಜ್ಜೆ ಹಾಕಬೇಕಾಗಿದೆ.ಈ ಪರಿಸರ ಕಾಳಜಿಯ ಕಾರ್ಯಕ್ರಮಗಳು ಕೇವಲ ಸಾಂಕೇತಿಕವಾಗಿರದೇ ಅದು ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನಲ್ಲಿ ಪ್ರಕೃತಿ ಧರ್ಮದ ಪಾಲನೆಯ ಧರ್ಮ ಆದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಚಿತ್ರದುರ್ಗ ಮುರುಘಾಮಠದ ಖಾಸಾ ಗುರುಮಠಕಲ್ ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಅವರು ಮಾತನಾಡಿ ಕನ್ನಡ ನಾಡಿನಲ್ಲಿ ಚಿತ್ರದುರ್ಗದ ಮುರುಘಾಮಠದ ಗುರುಗಳು ತನ್ನದೇ ಆದ ನೆಲೆಯಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ವಿಶ್ವ ಪರಿಸರ ದಿನ ಸಂದರ್ಭದಲ್ಲಿ ಸಸಿ ನೆಡುವ ಸಪ್ತಾಹ ಮಾರ್ಗದರ್ಶಿ ಮತ್ತು ಅನುಕರಣೀಯ ಕಾರ್ಯ ಎಂದ ಶ್ರೀಗಳು, ನಮ್ಮ ನಡುವೆ ಇದ್ದು ಆದರ್ಶ ವ್ಯಕ್ತಿತ್ವ ರೂಪಿಸಿಕೊಂಡು ಮಾದರಿಯಾಗಿದ್ದ ರಾಷ್ಟ್ರಪತಿಯೂ ಆಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ ಮಾತನ್ನು ನೆನಪಿಸಿಕೊಂಡ ಶ್ರೀಗಳು "ನಾನೊಂದು ಅಳಿಲು ಸಾಕಿದ್ದೆ ಅದು ಓಡಿಹೋಯಿತು. ಗಿಳಿಯೊಂದನ್ನು ಸಾಕಿದ್ದೆ ಅದು ಹಾರಿ ಹೋಯಿತು. ಆದರೆ ನಾನು ಸಸಿಯೊಂದನ್ನು ನೆಟ್ಟೆ. ಆ ಎರಡೂ ಬಂದು ಮರದ ಆಶ್ರಯ ಪಡೆದವು" ಎಂಬ ಮಾತಿಗೆ ಇಡೀ ವಾತಾವರಣ ಸಂಭ್ರಮದ ಕರತಾಡನದ ಮೂಲಕ ಸ್ವಾಗತಿಸಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಲೆಕ್ಕ ಪರಿಶೋಧನಾ ಸಮಿತಿ ಸದಸ್ಯರಾದ ಎಸ್. ಎನ್. ಚಂದ್ರಶೇಖರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಎಸ್ ಜೆ ಎಂ ತಾಂತ್ರಿಕ ಮಹಾವಿದ್ಯಾಲಯದ ಪಿ .ಬಿ. ಭರತ್ ಎಸ್ ಜೆ ಎಂ ಫಾರ್ಮಸಿಯ ನಾಗರಾಜ್, ಎಸ್ ಜೆ ಎಂ ನಸ್ಸಿಂಗ್ ನ ಸವಿತಾ, ಎಸ್ ಜೆ ಎಂ ಪಾಲಿಟೆಕ್ನಿಕ್ ನ ಎಸ್ .ವಿ .ರವಿಶಂಕರ್, ಐಟಿಐ ನ ಬೋರಯ್ಯ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಅಧೀಕ್ಷಕ ಪ್ರಕಾಶ್ ಹಾಗೂ ಸಪ್ತಾಹಕ್ಕೆ ನೆರವು ನೀಡಿದ ಹೆಚ್ ಡಿ ಎಫ್ ಸಿ ಬ್ಯಾಂಕಿನ ಮುಖ್ಯಸ್ಥ ಪ್ರಕಾಶ್ ಗಡಿಯಾರ್ .ಕೆ, ಸೇರಿದಂತೆ ಪರಿಸರ ಪ್ರೇಮಿಗಳು ಸಾರ್ವಜನಿಕರು,ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.