ಚಿತ್ರದುರ್ಗ : ಅಂಬೇಡ್ಕರ್ ಸರ್ಕಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ...!
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ. ಮಕ್ಕಳು ತಂದೆ ತಾಯಿಯ ಮಾತನ್ನು ಮೀರಿ ಮದುವೆಯಾದಾಗ, ಹತ್ಯೆಗಳು ನಡೆದಿವೆ ಇಲ್ಲಾ ಪೋಷಕರೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಕಾಲ ಬದಲಾಗಿದೆ, ಮಕ್ಕಳ ಇಚ್ಛೆಗಳಿಗೆ ಗೌರವ ಕೊಡಬೇಕು ಎನ್ನುವುದು, ಮಕ್ಕಳ ನಿರ್ಧಾರವನ್ನು ಗೌರವಿಸುವುದು ಕಡಿಮೆ ಮಂದಿ. ಆದರೆ ಇಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಹಿಂದೆಯೂ ಇದೆ ಕಾರಣವಿದೆ.
ಗೋಪಿನಾಥ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹಚ್ಚಿಕೊಂಡಿದ್ದಾನೆ. ನೋಡುತ್ತಿದ್ದವರಿಗೆ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ತಕ್ಷಣವೇ ಅಲ್ಲಿದ್ದವರು ಘಟನಾ ಸ್ಥಳಕ್ಕೆ ಧಾವಿಸಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು. ಗಾಯಗೊಂಡ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದಲೂ ಪಾರಾಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಗೋಪಿನಾಥ್ ಪತ್ನಿ ಭಾಗ್ಯಮ್ಮ ನವರು ಕೂಡಾ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ.
ಮಗಳಿಗೆ ಒಳ್ಳೆ ಸಂಬಂಧ ತಂದು, ತಾನೇ ಮುಂದೆ ನಿಂತು ಮದುವೆ ಮಾಡಬೇಕೆಂದುಕೊಂಡಿದ್ದರು. ಇದು ಎಲ್ಲಾ ಪೋಷಕರಿಗೂ ಇರುವ ಆಸೆಯೆ ಸರಿ. ಆದರೆ ಮಗಳು ತಾನು ಮೆಚ್ಚಿದ ಹುಡುಗನ ಜೊತೆಗೆ ಮದುವೆಯಾಗಿದ್ದಳು. ಇದು ಗೋಪಿನಾಥ್ ಅವರನ್ನು ತುಂಬಾ ಬಾಧಿಸಿತ್ತು. ಪ್ರತಿದಿನ ಆ ನೋವಿನಲ್ಲೇ ಇದ್ದರು. ಆ ನೋವಿನಿಂದ ಮಾನಸಿಕ ಅಸ್ವಸ್ಥರಾಗಿದ್ದರು.
ಗೋಪಿನಾಥ್ ಗೆ ಕೆಲ ವರ್ಷ ಹಿಂದೆ ಅಪಘಾತವಾಗಿ ಕಾಲಿಗೆ ಪೆಟ್ಟಾಗಿತ್ತು. ಕಳೆದ ವರ್ಷದಲ್ಲಿ ಮಗಳು ಇಚ್ಛೆ ಪಟ್ಟು ಮದುವೆ ಆಗಿದ್ದಳು. ಮಗಳು ಮದುವೆ ಆದಾಗಿಂದ ಮಾನಸಿಕವಾಗಿ ನೊಂದಿದ್ದರು. ಕೆಲ ತಿಂಗಳ ಹಿಂದೆ ನಿರಾಶ್ರಿತ ಕೇಂದ್ರಕ್ಕೂ ಸೇರಿದ್ದರು ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಆತ್ಮಹತ್ಯೆಗೆ ಯತ್ನಕ್ಕೆ ನಿಖರ ಕಾರಣ ಏನೆಂದು ಗೊತ್ತಿಲ್ಲ ಎಂದು ಭಾಗ್ಯಮ್ಮ ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಯತ್ನ ಮಾಡಿರಬಹುದು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಡಿಎಸ್ ಪಿ ದಿನಕರ್ ಪಿ.ಕೆ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.