ಚಿತ್ರದುರ್ಗ | ಮಹಿಳಾ ಸೇವಾ ಸಮಾಜದ 95 ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ದಿನಾಚರಣೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 27 : ಮಹಿಳಾ ಸೇವಾ ಸಮಾಜ ಮಹಿಳೆಯರ ಅನುಕೂಲಕ್ಕಾಗಿಯೇ ವರ್ಷವಿಡಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಹೇಳಿದರು.
ಮಹಿಳಾ ಸೇವಾ ಸಮಾಜದಲ್ಲಿ ನಡೆದ 95 ನೇ ವಾರ್ಷಿಕೋತ್ಸವ ಹಾಗೂ ಫ್ರೆಂಡ್‍ಶಿಪ್ ಡೇ ಉದ್ಘಾಟಿಸಿ ಮಾತನಾಡಿದರು.
ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿದೆ. ನೂರಾರು ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದಲ್ಲದೆ ಹೃದಯ ಸಂಬಂಧಿ ಕಾಯಿಲೆ ಹಾಗೂ ರಕ್ತದೊತ್ತಡವನ್ನು ತಪಾಸಣೆ ಮಾಡಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಅರವತ್ತು ಮಹಿಳೆಯರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮ್ಯಾಮೊಗ್ರಫಿ ಹಾಗೂ ಪಾಪ್ಸ್ ಮಿಯರ್ ಉಚಿತ ತಪಾಸಣೆ ನಡೆಸಿದ್ದು, ಕೆಲವರಿಗೆ ಆಪರೇಷನ್ ಕೂಡ ಮಾಡಿಸಲಾಗಿದೆ. ಯಾವುದೇ ಪ್ರತಿಫಲ ಬಯಸದೆ ಸೇವಾ ಮನೋಭಾವನೆಯಿಂದ ಮಹಿಳಾ ಸೇವಾ ಸಮಾಜ ಕೆಲಸ ಮಾಡುತ್ತಿದೆ. ಒನಕೆ ಓಬವ್ವ ಬಾಲಿಕಾಶ್ರಮದ ರಿಪೇರಿ ನಡೆಯುತ್ತಿದೆ. ಅನೇಕ ಸಂಸಾರಗಳಲ್ಲಿ ಗಂಡ-ಹೆಂಡತಿ ನಡುವೆ ನಡೆಯುವ ಕಲಹಕ್ಕೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಮೂಲಕ ಒಂದುಗೂಡಿಸಲಾಗಿದೆ. ಒಟ್ಟಾರೆ ಮಹಿಳಾ ಸೇವಾ ಸಮಾಜ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು.
ಸ್ನೇಹ ಎಂದರೆ ಬಿಡಿಸಲಾಗದ ಬಂಧನವಿದ್ದಂತೆ. ಅಮೂಲ್ಯವಾದ ಸ್ನೇಹದಲ್ಲಿ ಯಾವುದೇ ಬಿರುಕು ಬರದಂತೆ ಕಾಪಾಡಿಕೊಳ್ಳಬೇಕು. ಹಲವು ಸಂಬಂಧಗಳು ಜೀವನದಲ್ಲಿ ಬಂದು ಹೋಗುತ್ತವೆ. ಆದರೆ ಸ್ನೇಹ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ಸ್ನೇಹಕ್ಕೆ ತನ್ನದೆ ಆದ ಪ್ರಾಮುಖ್ಯತೆಯಿದೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಶಿವರಶ್ಮಿ ಅಕ್ಕ ಮಾತನಾಡಿ ಮಹಿಳಾ ಸೇವಾ ಸಮಾಜ ಹಿಂದಿನಿಂದಲೂ ಮಹಿಳೆಯರಿಗೆ ಉಪಯುಕ್ತವಾಗುವ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು, ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರತಿ ವರ್ಷ ಗೌರವಿಸಿ ಪ್ರೋತ್ಸಾಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೀಣ ವಿಜಯ್, ಮಾಳವಿಕ, ಮಹಾಂತಮ್ಮ, ರೂಪ ಜನಾರ್ಧನ್, ನಾಗರತ್ನ ವಿಶ್ವನಾಥಯ್ಯ ವೇದಿಕೆಯಲ್ಲಿದ್ದರು.
ಉಮ ಗುರುರಾಜ್ ಸ್ವಾಗತಿಸಿದರು. ಲತಾ ಉಮೇಶ್ ವರದಿ ಮಂಡಿಸಿದರು. ಭಾರತಿ ಸುರೇಶ್ ನಿರೂಪಿಸಿದರು. ಆಶ್ರಯ ಕಮಿಟಿ ಸದಸ್ಯೆ ಮುನಿರಾ ಎ.ಮಕಾಂದಾರ್ ಇವರನ್ನು ಗೌರವಿಸಲಾಯಿತು.