ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಮಾಡಬೇಡಿ : ಆರ್.ಕೆ.ಸರ್ದಾರ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಪೋಷಕರುಗಳು ತಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ವಿವಾಹ ಮಾಡಬಾರದೆಂದು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಎಚ್ಚರಿಸಿದರು.
ಟಿಪ್ಪು ಸ್ಪೋಟ್ರ್ಸ್ ಕ್ರಿಕೆಟ್ ಕ್ಲಬ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಬಡಾಮಕಾನ್‍ನ ಚಿಸ್ತಿಯಾ ಶಾದಿ ಮಹಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಷ ಕಾಯ್ದೆ ಮತ್ತು ಮಹಿಳೆಯರ ಮಕ್ಕಳ ಅಕ್ರಮ ಸಾಗಾಣಿಕೆ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಪೋಷಣ್ ಅಭಿಯಾನದಡಿ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಸಾಕಷ್ಟು ಕಂಡು ಬರುತ್ತಿದ್ದು, ಬಡತನ ಹಾಗೂ ಇನ್ನಿತರೆ ಕಾರಣಗಳಿಗಾಗಿ ಹದಿಹರೆಯದವರಿಗೆ ಮದುವೆ ಮಾಡಿದರೆ ಪೋಷಕರುಗಳ ವಿರುದ್ದ ಪೋಕ್ಸೋ ಕೂಡ ದಾಖಲಾಗುತ್ತದೆ. ಹಾಗಾಗಿ ಬಾಲ್ಯ ವಿವಾಹ ಮಾಡಬಾರದೆಂದು ತಾಕೀತು ಮಾಡಿದರು.
ಹೆಣ್ಣಿಗೆ ಹದಿನೆಂಟು ವರ್ಷ ಹಾಗೂ ಗಂಡಿಗೆ 21 ವರ್ಷವಾಗುವವರೆಗೆ ವಿವಾಹ ಮಾಡಬಾರದೆಂದು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರು ಸಹ ಬಾಲ್ಯ ವಿವಾಹ ಪ್ರಕರಣಗಳು ಜಾಸ್ತಿಯಾಗುತ್ತಿರುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕಾಗಿರುವುದರಿಂದ ಕಠಿಣ ಕಾನೂನು ಜಾರಿಗೆ ತರಬೇಕೆಂದು ಆರ್.ಕೆ.ಸರ್ದಾರ್ ಒತ್ತಾಯಿಸಿದರು.
ಪೋಷಣ್ ಅಭಿಯಾನದಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ನೀಡುವುದರಿಂದ ಜನಿಸುವ ಮಕ್ಕಳು ಆರೋಗ್ಯವಾಗಿರುತ್ತವಲ್ಲದೆ ಮಗು ಮತ್ತು ತಾಯಿಯ ಮರಣ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಎರಡು ವರ್ಷ ಸಜೆಯಾಗುತ್ತದೆ. ಹೆಣ್ಣಿಗೆ ಹದಿನೆಂಟು ವರ್ಷ, ಗಂಡಿಗೆ 21 ವರ್ಷವಾಗಿದ್ದರೆ ಮಾತ್ರ ವಿವಾಹವಾಗಲು ಅರ್ಹರು. ಇಲ್ಲದಿದ್ದರೆ ಅಂತಹ ವಿವಾಹ ಅಸಿಂಧುವಾಗುತ್ತದೆ ಎನ್ನುವ ಅರಿವು ಪೋಷಕರುಗಳಲ್ಲಿ ಮೂಡಬೇಕಿದೆ. ಇಸ್ಲಾಂ ಧರ್ಮದಲ್ಲಿ ನಾಲ್ಕು ಮದುವೆಯಾಗಬಹುದು. ಹಾಗಂತ ಸರ್ಕಾರಿ ನೌಕರ ಒಂದಕ್ಕಿಂತ ಹೆಚ್ಚು ವಿವಾಹವಾದರೆ ಕಾನೂನಿನಡಿ ಶಿಕ್ಷೆಗೊಳಪಡುತ್ತಾನೆ. ತಲಾಖ್ ವಿಚಾರಕ್ಕೆ ಬಂದರೆ ಪ್ರತ್ಯೇಕವಾಗಿ ಶರಿಯತ್ ಇದೆ. ಅದರಡಿ ಬಗೆಹರಿಸಿಕೊಳ್ಳಬಹುದು. ದೇಶದ ಕಾನೂನು ಪರಿಪಾಲನೆ ಮಾಡುವುದು ಧರ್ಮದ ಅರ್ಧ ಭಾಗ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಪ್ರಾಪ್ತ ಬಾಲಕಿಯ ಜೊತೆ ದೈಹಿಕ ಸಂಪರ್ಕವಿಟ್ಟುಕೊಂಡರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ದೇಶದ ಕಾನೂನು ಪರಿಪಾಲನೆ ಮಾಡಬೇಕು ಎಂದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಬಾಲ್ಯ ವಿವಾಹ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ. ಹೆಣ್ಣು-ಗಂಡು ವಿವಾಹವಾಗುವುದು ಪ್ರಕೃತಿ ನಿಯಮ. ಹಾಗಂತ ತಂದೆ ತಾಯಿಗಳು ಕಾನೂನು ಅರಿವಿಲ್ಲದೆ ತಮ್ಮ ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾದ ಎನ್ನುವುದು ಗೊತ್ತಿರಬೇಕು. ಸರ್ಕಾರ ಹಾಗೂ ಸಂವಿಧಾನದಡಿ ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷಗಳಾಗಿದ್ದಾಗ ಮಾತ್ರ ವಿವಾಹವಾಗಲು ಅರ್ಹರು ಎನ್ನುವ ಜಾಗೃತಿ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ನಗರಸಭೆ ಸದಸ್ಯ ನಸ್ರುಲ್ಲಾ, ನಿವೃತ್ತ ಡಿ.ವೈ.ಎಸ್ಪಿ.ಗಳಾದ ಅಬ್ದುಲ್‍ರೆಹಮಾನ್, ಸೈಯದ್ ಇಸಾಕ್, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಂಜದ್ ಮೊಹಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಎ.ಎಂ.ವೀಣ ವೇದಿಕೆಯಲ್ಲಿದ್ದರು.